ನರೇಂದ್ರ ಮೋದಿ-ರಾಹುಲ್ ಗಾಂಧಿ ʻಫುಲ್ ಫ್ರೆಂಡ್ ಶಿಪ್ʼ ಮಾಡ್ಕೊಂಡ್ರೆ, ಅಮಿತ್ ಶಾಗೆ, ಪ್ರಿಯಾಂಕ ಗಾಂಧಿ ಸಪೋರ್ಟ್ ಮಾಡಿದ್ರೆ, ಸಿದ್ದರಾಮಯ್ಯ-ದೇವೇಗೌಡ ಇಬ್ರೂ ಫುಲ್ ಕ್ಲೋಸ್ ಆಗ್ಬಿಟ್ರೆ, ಪ್ರತಾಪ್ ಸಿಂಹ-ಪ್ರದೀಪ್ ಈಶ್ವರ್.. ಸಡನ್ ಆಗಿ ಕುಚಿಕುಗಳಾಗಿಬಿಟ್ರೆ.. ಇದೆಲ್ಲ ಸಾಧ್ಯವಾ ಎನ್ನಬೇಡಿ. ಇದು ರಾಜಕೀಯ. ಏನ್ ಬೇಕಾದ್ರೂ ಆಗಬಹುದು. ಬಿಜೆಪಿ-ಕಾಂಗ್ರೆಸ್ ದೋಸ್ತಿ ಮಾಡಿಕೊಳ್ಳಬಹುದು. ಓವೈಸಿಯವರ ಪಕ್ಷ, ಬಿಜೆಪಿಗೆ ಸಪೋರ್ಟ್ ನೀಡಬಹುದು. ಬಹುದು.. ಬಹುದು.. ಅಲ್ಲ.. ಅದು ಆಗಿಯೇ ಬಿಟ್ಟಿದೆ. ಇದು ಸುಳ್ ಸುದ್ದಿಯಂತೂ ಅಲ್ಲ. ಸತ್ಯ.
ಇದು ಸಂಭವಿಸಿರುವುದು ಮಹಾರಾಷ್ಟ್ರದಲ್ಲಿ. ವಿವಿಧ ಮುನಿಸಿಪಲ್‌ಗಳ ಮೇಯರ್, ಉಪಮೇಯರ್ ಸ್ಥಾನದ ಚುನಾವಣೆಯಲ್ಲಿ ಮಿತ್ರರನ್ನೇ ಸೋಲಿಸಲು ಸ್ಥಳೀಯ ಬಿಜೆಪಿ ನಾಯಕರು ಬದ್ಧ ವೈರಿಗಳಾದ ಕಾಂಗ್ರೆಸ್ ಮತ್ತು ಓವೈಸಿ ಅವರ ಎಂಐಎಂ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಸೋಲಿಸಲು ಕಾಂಗ್ರೆಸ್ ಮಿತ್ರರು + ಬಿಜೆಪಿ ದೋಸ್ತಿ :
ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಅಕೋಟ್ ಮುನ್ಸಿಪಲ್‌ನಲ್ಲಿ ಕಾಂಗ್ರೆಸ್ ಹೊರತುಪಡಿಸಿ ಬಿಜೆಪಿ, ಎಂಐಎಂ, ಶಿಂಧೆ ಸೇನೆ, ಉದ್ಧವ್ ಸೇನೆ, ಎನ್‌ಸಿಪಿ (ಅಜಿತ್, ಶರದ್) ಮತ್ತು ಸ್ವತಂತ್ರ ಅಭ್ಯರ್ಥಿಗಳು ಒಟ್ಟಾಗಿ ‘ಅಕೋಟ್ ವಿಕಾಸ್ ಮಂಚ್’ ಸ್ಥಾಪಿಸಿಕೊಂಡಿದ್ದಾರೆ. ಇವರೆಲ್ಲ ಅಖಾಡಕ್ಕೆ ಇಳಿದಿರೋದು ಕಾಂಗ್ರೆಸ್ ವಿರುದ್ಧ.
ಬಿಜೆಪಿ ಮಿತ್ರ ಪಕ್ಷ ಕಾಂಗ್ರೆಸ್ ಜೊತೆ ದೋಸ್ತಿ :
ಅದರೆ ಅದೇ ಮಹಾರಾಷ್ಟ್ರದ ಅಂಬರ್‌ನಾಥ್ ಕಥೆಯೇ ಬೇರೆ. ಅಲ್ಲಿ ಶಿಂಧೆ ಶಿವಸೇನೆಯು ಒಂಟಿಯಾಗಿ 27 ಸೀಟುಗಳನ್ನು ಪಡೆದಿದೆ. ಆದರೆ, ರಾಜ್ಯದಲ್ಲಿ ಮಿತ್ರ ಪಕ್ಷವಾಗಿರುವ ಶಿಂಧೆ ಶಿವಸೇನೆ, ಅಲ್ಲಿ ಮೈತ್ರಿ ಬೇಕಿಲ್ಲ. ಬಿಜೆಪಿಯು ಎನ್‌ಸಿಪಿ (ಅಜಿತ್), ಕಾಂಗ್ರೆಸ್ ಜೊತೆ ಸೇರಿದೆ.
ಇದಕ್ಕೆ ಕೌಂಟರ್ ಕೊಟ್ಟಿದೆ ಬಿಜೆಪಿ. 35 ಸದಸ್ಯರ ಕೌನ್ಸಿಲ್‌ನಲ್ಲಿ ಬಿಜೆಪಿ 11 ಸ್ಥಾನಗಳನ್ನು ಗೆದ್ದಿತ್ತು. ಎರಡು ಸ್ಥಾನಗಳು ಚುನಾವಣೆಗೆ ಬಾಕಿ ಉಳಿದಿವೆ ಮತ್ತು ಎಐಎಂಐಎಂ 5 ಸ್ಥಾನಗಳನ್ನು ಪಡೆದುಕೊಂಡಿದೆ. ಇತರ ವಿವಿಧ ಪಕ್ಷಗಳ ಬೆಂಬಲದೊಂದಿಗೆ, ಮೈತ್ರಿಕೂಟದ ಬಲ 25ರಷ್ಟಿದೆ.
ಈಗ ಅಲ್ಲಿನ ಸ್ಥಳೀಯ ನಾಯಕರನ್ನ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರ್ನಾಥ್ ಮತ್ತು ಅಕೋಲಾ ಜಿಲ್ಲೆಯ ಅಕೋಟ್ ಎಂಬ 2 ಪುರಸಭೆಗಳಲ್ಲಿ ಪ್ರತಿಸ್ಪರ್ಧಿ ಪಕ್ಷಗಳೊಂದಿಗೆ ಬಿಜೆಪಿ ಚುನಾವಣಾ ನಂತರದ ಮೈತ್ರಿ ಮಾಡಿಕೊಂಡ ವಿವಾದದ ಮಧ್ಯೆ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಇದು ಹೊಸದೇನೂ ಅಲ್ಲ. ರಾಜ್ಯದಲ್ಲಿಯೇ ಈ ಪರಿಸ್ಥಿತಿಯನ್ನು ನೋಡಿದ್ದೇವೆ. 2018ರಲ್ಲಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ವಿರುದ್ಧ ಹೋರಾಟ ಮಾಡಿತ್ತು. ಆದರೆ ರಿಸಲ್ಟ್ ಬಂದಾಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಯ್ತು. ಆನಂತರ ಲೋಕಸಭೆ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಜೊತೆ ಹೋರಾಡಿ ಸೋತಿದ್ದ ಜೆಡಿಎಸ್, 2023ರಲ್ಲಿಯೂ ಏಕಾಂಗಿಯೇ. 2024ರ ಲೋಕಸಭೆ ಹೊತ್ತಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ಹಾಗಾದರೆ ಇಲ್ಲಿ ವಿರೋಧಿಗಳು ಯಾರು..?
ಒಂದಂತೂ ಸತ್ಯ. ರಾಜಕೀಯದಲ್ಲಿ ಯಾರು ಯಾರಿಗೂ ವಿರೋಧಿಗಳಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ತಾರೆ. ಅಷ್ಟೇ.



