ಆಟೋ ರಾಜ. ಶಂಕರ್ ನಾಗ್ ಅವರನ್ನು ಸ್ಟಾರ್ ಮಾಡಿದ ಸಿನಿಮಾ. ಶಂಕರ್ ಮೃತಪಟ್ಟು ದಶಕಗಳೇ ಆಗಿದ್ದರೂ ಅವರು ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಜೀವಂತವಿದ್ದಾರೆ. ಹಾಗೆ ನೆನಪಿರುವ ಸಿನಿಮಾಗಳಲ್ಲಿ ಒಂದು ಆಟೋ ರಾಜ. ಆಟೋ ರಾಜ ಸಿನಿಮಾ ನೆನಪಾಗಿದ್ದು ಅದೇ ಸಿನಿಮಾದ ವಿಲನ್ ಸುಂದರ ಕೃಷ್ಣ ಅರಸ್ ಪಾತ್ರದಿಂದ.
ಆಟೋ ರಾಜದಲ್ಲಿ ಶಂಕರ್ ನಾಗ್-ಗಾಯತ್ರಿ ನಾಯಕ ನಾಯಕಿ. ವಿಲನ್ ಆಗಿ ಬಾಲಕೃಷ್ಣ ಮತ್ತು ಸುಂದರ ಕೃಷ್ಣ ಅರಸ್ ನಟಿಸಿದ್ದಾರೆ. ಸುಂದರಕೃಷ್ಣ ಅರಸ್ ಒಬ್ಬ ಡಾಕ್ಟರ್. ಅವನ ಬಳಿ ಹಾವಿನ ವಿಷದ ಆಯುಧ ಇರುತ್ತದೆ. ಹಾವಿನ ವಿಷ ಇಂಜೆಕ್ಟ್ ಮಾಡಿದರೆ ಎದುರಿದ್ದವರು ಸೆಕೆಂಡುಗಳಲ್ಲಿ ಸತ್ತು ಹೋಗುತ್ತಾರೆ. ಮೇಲ್ನೋಟಕ್ಕೆ ಅದನ್ನು ಇಂಜೆಕ್ಟ್ ಮಾಡುವುದು ಕೂಡಾ ಹಾವು ಕಚ್ಚಿದ ರೀತಿಯಲ್ಲಿಯೇ. ಆ ಸಿನಿಮಾ ನೆನಪಾಗಿದ್ದಕ್ಕೆ ಕಾರಣ ಒಡಿಶಾದ ಗಂಜಾಂನಲ್ಲಿ ನಡೆದ ಕೊಲೆ ಪ್ರಕರಣ.
ಡಿಶಾದ ಗಂಜಾಂ ಜಿಲ್ಲೆಯಲ್ಲಿ ವಿಷಪೂರಿತ ನಾಗರಹಾವನ್ನು ಮಲಗುವ ಕೋಣೆಗೆ ಬಿಡುವ ಮೂಲಕ ಪತ್ನಿ ಮತ್ತು ಎರಡು ವರ್ಷದ ಮಗಳನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬ ಅರೆಸ್ಟ್ ಆಗಿದ್ದಾನೆ. ಆರೋಪಿಯ ಹೆಸರು ಕೆ. ಗಣೇಶ್ ಪಾತ್ರ . ವಯಸ್ಸು ಕೇವಲ 25 ವರ್ಷ.
ಗಣೇಶ್ 2020 ರಲ್ಲಿ ಬಸಂತಿ ಅವರನ್ನು ವಿವಾಹವಾಗಿದ್ದ. ದೇಬಸ್ಮಿತಾ ಅನ್ನೋ ಹೆಣ್ಣು ಮಗುವೂ ಇತ್ತು. ಆ ಮಗುವಿಗೆ ಕೇವಲ 2 ವರ್ಷ. ಗಂಡ ಹೆಂಡತಿ ಮಧ್ಯೆ ಜಗಳವೂ ಇತ್ತು. ಕೇಸು, ಕಂಪ್ಲೇಂಟು ಎಲ್ಲ ಆಗಿತ್ತು. 3 ತಿಂಗಳ ಹಿಂದಷ್ಟೇ ಪರಸ್ಪರ ರಾಜಿ ಮಾಡಿಕೊಂಡು ಒಟ್ಟಿಗೇ ಬದುಕುತ್ತಿದ್ದರು. ಹೀಗಿರುವಾಗಲೇ ಬಸಂತಿ ಮತ್ತು ದೇಬಸ್ಮಿತಾ ಕೊಲೆಯಾಗಿದ್ಧಾರೆ.
ಹಾವು ಕಚ್ಚಿ ಮೃತಪಟ್ಟಿದ್ದ ತಾಯಿ ಮಗಳು :
ಅಕ್ಟೋಬರ್ 6 ಮತ್ತು 7 ರಂದು ರಾತ್ರಿ ಬಸಂತಿ ಮತ್ತು ಆಕೆಯ ಎರಡು ವರ್ಷದ ಮಗಳು ಮಧ್ಯದ ಕೋಣೆಯಲ್ಲಿ ಮಲಗಿದ್ದರೆ, ಆರೋಪಿ ಮನೆಯ ಮುಂಭಾಗದ ಕೋಣೆಯಲ್ಲಿ ಮಲಗಿದ್ದ.ಈ ವೇಳೆ ಮಧ್ಯರಾತ್ರಿ ಹೊತ್ತಿನಲ್ಲಿ ಹಾವು ಕಚ್ಚಿತ್ತು. ಮರುದಿನ ಮುಂಜಾನೆ ಗಣೇಶ್ ಮನೆಯಲ್ಲಿಯೇ ಜೋರಾಗಿ ಕಿರುಚಾಡಲು ಆರಂಭಿಸಿದ್ದಾರೆ. ಇದರ ಪರಿಣಾಮವಾಗಿ ನೆರೆಹೊರೆಯವರು ಹಾಗೂ ಪತ್ನಿಯ ತಂದೆ ಸ್ಥಳಕ್ಕೆ ಆಗಮಿಸಿದ್ದರು. ತಾಯಿ ಹಾಗೂ ಮಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಆರಂಭಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಮೃತರ ಮರಣೋತ್ತರ ಪರೀಕ್ಷೆಯಲ್ಲಿ ಇಬ್ಬರು ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿತ್ತು.
ಪೊಲೀಸಪ್ಪನ ಅನುಮಾನ ಸತ್ಯವಾಯ್ತು :
ಮೊದಲಿಗೆ ಇದು ಅಸಹಜ ಸಾವು. ಹಾವು ಕಚ್ಚಿ ವ್ಯಕ್ತಿಗಳು ಸಾಯುವುದು ಹೊಸದೇನಲ್ಲ ಎಂಬ ಕಾರಣಕ್ಕೆ ಪೊಲೀಸರೂ ಸುಮ್ಮನಾಗಿದ್ದರು. ಆದರೆ ಒಬ್ಬ ಪೊಲೀಸ್ ಅಧಿಕಾರಿಗೆ ಡೌಟ್ ಬಂತು. ಏಕೆಂದರೆ 23 ವರ್ಷದ ಬಸಂತಿ ಮತ್ತು 2 ವರ್ಷದ ಮಗಳು ಇಬ್ಬರ ಕಾಲಿಗೂ ಕಾಳಿಂಗ ಸರ್ಪ ಹಿಮ್ಮಡಿಗಿಂತ ಸ್ವಲ್ಪ ಮೇಲೆ, ಮೀನಖಂಡದಿಂದ ಕೆಳಗೆ ಕಾಟು ಹಾಕಿತ್ತು. ಏಕೋ ಅನುಮಾನ ಬಂದು ಹಾವಿನ ತಜ್ಞರನ್ನು ಕರೆದು ಮಾತನಾಡಿದಾಗ ಈ ರೀತಿ ಒಂದೇ ಮಾದರಿಯಲ್ಲಿ ಹಾವು ಕಚ್ಚುವುದಕ್ಕೆ ಸಾಧ್ಯವಿಲ್ಲಎಂಬ ಅಭಿಪ್ರಾಯ ವ್ಯಕ್ತವಾಯಿತು. ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ಹಾವು ತಂದು ಕಚ್ಚಿಸಿದ ಕೇಸ್ ಹೊರಬಿತ್ತು.
ಕೊಲೆ ಆರೋಪಿ ಗಣೇಶ್ ತನ್ನ ತಾಯಿಯ ಹೆಸರಿನಲ್ಲಿದ್ದ ಮೊಬೈಲಿನಲ್ಲಿ ಹಾವಾಡಿಗರಿಗೆ ಕರೆ ಮಾಡಿ, ಯಾವುದೋ ಪೂಜೆಗೆ ಹಾವು ಬೇಕು ಎಂದು ಹೇಳಿ ತರಿಸಿಕೊಂಡಿದ್ದ. ಬಳಿಕ ತಾಯಿ ಮಗಳನ್ನು ಕೋಣೆಗೆ ಬಿಟ್ಟು, ಮಲಗಿದ್ಧಾಗ ಕಾಳಿಂಗ ಸರ್ಪದಿಂದ ಕಚ್ಚಿಸಿ ಕೊಂದಿದ್ದ. ಕರೆ ಪರಿಶೀಲಿಸಿದಾಗ ಹಾವಾಡಿಗನಿಗೆ ಕರೆ ಮಾಡಿದ್ದು ಯಾವಾಗ ಗೊತ್ತಾಯಿತೋ ಆಗ ಪೊಲೀಸರು ಪೊಲೀಸ್ ಮಾದರಿಯಲ್ಲಿ ಪ್ರಶ್ನಿಸಿದಾಗ ಆರೋಪಿ ಕೊಲೆ ಬಾಯ್ಬಿಟ್ಟಿದ್ಧಾನೆ.



