ಅಮ್ಮಾ.. ತಾಯಿ.. ಭಿಕ್ಷೆ ಹಾಕಿ ಅಮ್ಮಾ.. ಅಣ್ಣಾ.. ಯಕ್ಕಾ.. ಎನ್ನುತ್ತಾ ಬೇಡುವವರು ಹಾದಿ ಬೀದಿಯಲ್ಲಿ ಸಿಗ್ತಾರೆ. ನೀವು ಮಿಲನ ಸಿನಿಮಾ ನೋಡಿದ್ದರೆ, ಆ ಸಿನಿಮಾದಲ್ಲಿ ರಂಗಾಯಣ ರಘು ಮತ್ತು ಸಿಹಿಕಹಿ ಚಂದ್ರು ಅವರ ಪಾತ್ರ ನೆನಪಿದ್ದೇ ಇರುತ್ತದೆ. ಸಿನಿಮಾದಲ್ಲಿ ರಂಗಾಯಣ ರಘು ಅವರದ್ದು ಕುಬೇರ ಎಂಬ ಹೆಸರಿನ ಭಿಕ್ಷುಕನ ಪಾತ್ರ. ಆತನ ಪತ್ನಿ ಅಪೂರ್ವ ಶ್ರೀ ಮತ್ತು ಮಗನೂ ಭಿಕ್ಷೆ ಬೇಡಿ ಬದುಕುತ್ತಾರೆ. ಆದರೆ ಕೋಟಿ ಬೆಲೆಯ ಕಾರಿನಲ್ಲಿ ಓಡಾಡುತ್ತಿರುತ್ತಾರೆ. ಕಾರಿನಲ್ಲಿಯೇ ಬಟ್ಟೆ ಬದಲಿಸುವ ಭಿಕ್ಷುಕ ಕುಬೇರ, ತನ್ನ ಕುಟುಂಬದ ಜೊತೆ ಸಿಹಿ ಕಹಿ ಚಂದ್ರು ಅಪಾರ್ಟ್ʻಮೆಂಟ್ʻಗೆ ಬಾಡಿಗೆಗೆ ಬರುತ್ತಾನೆ. ಆ ಚಂದ್ರುಗೋ ಭಿಕ್ಷುಕರನ್ನು ಕಂಡರೆ ಆಗಲ್ಲ. ಮುಂದಿನದ್ದು ಕಾಮಿಡಿ.
ಇನ್ನು ತೆಲುಗಿನ ಪೋಕರಿ ಸಿನಿಮಾದ ರೀಮೇಕ್ ಪೊರ್ಕಿಯನ್ನೂ ನೋಡಿದ್ದೀರಿ. ಆ ಚಿತ್ರದಲ್ಲಿ ಶರಣ್ ಭಿಕ್ಷುಕ. ಲಕ್ಷಾಧಿಪತಿ ಭಿಕ್ಷುಕ. ಇನ್ನೂ ಕೆಲವು ಚಿತ್ರಗಳಿವೆ. ಅಣ್ಣಾವ್ರ ಅಭಿನಯದ ಭಾಗ್ಯದ ಲಕ್ಷ್ಮೀ ಬಾರತಮ್ಮ ಚಿತ್ರದಲ್ಲಿಯೂ ಅಂಥದ್ದೇ ಒಂದು ದೃಶ್ಯ ಇದೆ. ಭಿಕ್ಷೆ ಬೇಡುವುದು ದುಡಿಯುವುದಕ್ಕಿಂತ ಲಾಭದ ಕೆಲಸ ಎನ್ನುವ ಸಿನಿಮಾಗಳಿವೆ. ಆದರೆ, ರಿಯಲ್ ಲೈಫಿನಲ್ಲಿ ಇದು ಸಾಧ್ಯವೇ..
ಇಲ್ಲೊಂದು ಪಟ್ಟಿ ಇದೆ. ಇವರೆಲ್ಲ ಭಿಕ್ಷುಕ ವೃತ್ತಿಯನ್ನೇ ಮಾಡುತ್ತಿರುವವರು. ಭಿಕ್ಷೆ ಬೇಡುತ್ತಲೇ ಹೊಟ್ಟೆ ಹೊರೆಯುತ್ತಿರುವ ಇವರ ಬಳಿ ಕೋಟಿ ಕೋಟಿ ಬೆಲೆಯ ಆಸ್ತಿ ಇದೆ. ದೊಡ್ಡ ದೊಡ್ಡ ನಗರಗಳಲ್ಲಿ ಫ್ಲಾಟು, ಬಂಗ್ಲೆಗಳಿವೆ. ಇವರ ಮಕ್ಕಳು ಓದುತ್ತಿರೋದು ಶ್ರೀಮಂತರ ಶಾಲೆಗಳಲ್ಲಿ. ಲಕ್ಷ ಲಕ್ಷ ಡೊನೇಷನ್ ಕಟ್ಟಿ, ಮಕ್ಕಳನ್ನು ಓದಿಸುತ್ತಿದ್ಧಾರೆ. ಓಡಾಡಲು ಕಾರುಗಳಿವೆ. ಅಂತಹ ಟಾಪ್ ಭಿಕ್ಷುಕರ ರಿಯಲ್ ಸ್ಟೋರಿ ಇದು.
ಟಾಪ್ 01 ಭಿಕ್ಷುಕ : ಭರತ್ ಜೈನ್
ಭರತ್ ಜೈನ್ ಎಂಬ ಭಿಕ್ಷುಕ ಇರೋದು ಮುಂಬೈನಲ್ಲಿ. ಇವನ ಬಳಿ ₹7.5 ಕೋಟಿ ಆಸ್ತಿ ಇದೆ. ಭಾರತದ ನಂ.1 ಶ್ರೀಮಂತ ಭಿಕ್ಷುಕ. ಮುಂಬೈನ ಶಿವಾಜಿ ಮಹಾರಾಜ್ ಟರ್ಮಿನಸ್ ಅಥವಾ ಆಜಾದ್ ಮೈದಾನದ ಪ್ರಮುಖ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಾನೆ. ಪರೇಲ್‌ನಲ್ಲಿ 1.4 ಕೋಟಿ ಮೌಲ್ಯದ 2 BHK ಫ್ಲಾಟ್‌ಗಳನ್ನು ಹೊಂದಿದ್ದಾನೆ. ಥಾಣೆಯಲ್ಲಿ ಎರಡು ಅಂಗಡಿಗಳಿವೆ. ಆ ಅಂಗಡಿಗಳಿಂದ ಇವನಿಗೆ ತಿಂಗಳಿಗೆ ₹ 30,000 ಬಾಡಿಗೆ ಬರುತ್ತದೆ. ಅಲ್ಲದೇ ಇನ್ನೊಂದು ಅಂಗಡಿಯೊಂದನ್ನು ಜ್ಯೂಸ್ ಸೆಂಟರ್ ಗೆ ಬಾಡಿಗೆಗೆ ನೀಡಿದ್ದಾನೆ. ಅದರಿಂದ ತಿಂಗಳಿಗೆ ₹10 ಸಾವಿರ ಬಾಡಿಗೆ ಬರುತ್ತದೆ. ಜೈನ್ ಕುಟುಂಬ ಭಿಕ್ಷಾಟನೆ ತೊರೆಯಲು ಸಲಹೆ ನೀಡಿದ್ರೂ ಭರತ್ ಜೈನ್ ಅದನ್ನೇ ವೃತ್ತಿಯನ್ನಾಗಿಸಿದ್ದಾನೆ. ಭರತ್ ಜೈನ್ ಆದಾಯ ದಿನಕ್ಕೆ ₹ 2,000 ರಿಂದ ₹ 2,500.
ಟಾಪ್ 02 ಭಿಕ್ಷುಕಿ : ಲಕ್ಷ್ಮೀದಾಸ್
ಟಾಪ್ 1, ಭಿಕ್ಷುಕನಾದರೆ, ಟಾಪ್ 2 ಭಿಕ್ಷುಕಿ. ಲಕ್ಷ್ಮಿ ದಾಸ್ ಎಂಬ ಈ ಭಿಕ್ಷುಕಿ ಕೋಲ್ಕತ್ತಾದವರು. ಭಾರತದ ಎರಡನೇ ಶ್ರೀಮಂತ ಭಿಕ್ಷುಕಿ. ₹1 ಕೋಟಿ ನಿವ್ವಳ ಮೌಲ್ಯದ ಆಸ್ತಿ ಇದೆ. ಕೋಲ್ಕತ್ತಾದಲ್ಲಿ ಚಿಕ್ಕ ವಯಸ್ಸಿನಿಂದಲೇ ಭಿಕ್ಷೆ ಬೇಡಲು ಆರಂಭಿಸಿದ ಆಕೆಗೆ ಈಗ 50 ವರ್ಷ. ಲಕ್ಷ್ಮಿದಾಸ್ ಚಿಕ್ಕಂದಿನಿಂದಲೂ ಪೋಲಿಯೊ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಆಕೆಯ ಮಾಸಿಕ ಆದಾಯ ₹35,000ಕ್ಕಿಂತ ಹೆಚ್ಚು. ಇದರ ಜೊತೆಗೆ ಭಿಕ್ಷೆ ಬೇಡುವುದರಿಂದ ಬರುವ ಆದಾಯವನ್ನು ಸೇರಿಸಬಾರದು.
ಟಾಪ್ 03 ಭಿಕ್ಷುಕ : ಸಂಭಾಜಿ ಕಾಳೆ
ಮುಂಬೈನ ಖಾರ್ ಪ್ರದೇಶದಲ್ಲಿ ವಾಸಿಸುವ ಸಂಭಾಜಿ ಕಾಳೆ, ಭಾರತ ದೇಶದ ಶ್ರೀಮಂತ ಭಿಕ್ಷುಕ. ಆತನ ಆಸ್ತಿ 1.5 ಕೋಟಿಗೂ ಹೆಚ್ಚು. ಭಿಕ್ಷೆ ಬೇಡುತ್ತಲೇ ಸಂಭಾಜಿ ಕಾಳೆಯ ದಿನದ ಆದಾಯ 1 ಸಾವಿರ ರೂ.ಗೂ ಹೆಚ್ಚು. ಮುಂಬೈನ ಖಾರ್ ಮತ್ತು ಸೋಲಾಪುರದಲ್ಲಿ ಅಪಾರ್ಟ್ಮೆಂಟ್ ಹೊಂದಿದ್ದಾನೆ. ಅಪಾರ್ಟ್ʻಮೆಂಟುಗಳಿಂದ ಬರುವ ಲಾಭ ಪ್ರತ್ಯೇಕ. ಇದೆಲ್ಲವನ್ನೂ ಭಿಕ್ಷೆ ಬೇಡಿಯೇ ಸಂಪಾದನೆ ಮಾಡಿದ್ನಂತೆ.
ಟಾಪ್ 04 ಭಿಕ್ಷುಕ : ಕೃಷ್ಣ ಕುಮಾರ್ ಗೀತೆ
ಕೃಷ್ಣ ಕುಮಾರ್ ಗೀತೆ ಭಾರತದ ಶ್ರೀಮಂತ ಭಿಕ್ಷುಕ ನಂಬರ್ 4. ನಲ್ಲ ಸೊಪಾರಾದಲ್ಲಿ ಸುಮಾರು 7 ಲಕ್ಷ ಮೌಲ್ಯದ ಮನೆ ಇದೆ. ಆತ ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದಾನೆ. ಆತನ ದಿನದ ಸರಾಸರಿ ಆದಾಯ ₹1,500ಕ್ಕೂ ಹೆಚ್ಚು. ಐಷಾರಾಮಿ ಜೀವನವೇನಲ್ಲ. ಆದರೆ ನೋಡುವವರ ಕರುಳು ಕಿತ್ತುಬರುವಂತೆ ಕಾಣಿಸುವ ಈಗ ಬಡವನೇನಲ್ಲ. ಆರೋಗ್ಯ ಸಮಸ್ಯೆಯೂ ಇಲ್ಲ.
ಟಾಪ್ 05 ಭಿಕ್ಷುಕಿ : ಸರ್ವತೀಯಾ ದೇವಿ
ಪಾಟ್ನಾ ಜಂಕ್ಷನ್ನಲ್ಲಿ ಭಿಕ್ಷೆ ಬೇಡುವ ಸರ್ವತೀಯಾ ದೇವಿ, ದುಡಿದ ಹಣದಲ್ಲ ಪುಟ್ಟ ಮನೆ ಹೊಂದಿದ್ದಾರೆ. ತಿಂಗಳಿಗೆ ಈಕೆಯ ದುಡಿಮೆ 50 ಸಾವಿರದವರೆಗೂ ಹೋಗುತ್ತದೆ. ಕೊನೆಗಾಲದಲ್ಲಿ ಯಾರಿಗೂ ಹೊರೆಯಾಗುವುದು ಬೇಡ ಎಂದುಕೊಂಡಿರುವ ಸರ್ವರ್ತೀಯಾ ದೇವಿ ತಿಂಗಳಿಗೆ 36 ಸಾವಿರ ರೂ. ಎಲ್‌ಐಸಿ ಕಟ್ಟುತ್ತಾರೆ. ಹೌದು, ಈಕೆ ಕಟ್ಟುವ ಎಲ್ʻಐಸಿ ಪ್ರೀಮಿಯಂ ತಿಂಗಳಿಗೆ 36 ರೂ.ಗಳದ್ದು. ಒಂದು ತಿಂಗಳೂ ಮಿಸ್ ಮಾಡಿಲ್ಲವಂತೆ.



