ನಟ ಸುದೀಪ್ ಅವರೇ ಈ ಬಾರಿಯೂ ಬಿಗ್ ಬಾಸ್ ಶೋ ನಿರೂಪಣೆ ಮಾಡೋದು ಕನ್ಫರ್ಮ್ ಆಗಿದೆ. ರಿಷಬ್ ಶೆಟ್ಟಿ, ರಮೇಶ್ ಅರವಿಂದ್ ಮೊದಲಾದವರ ಹೆಸರು ಕೇಳಿ ಬಂದಿತ್ತಾದರೂ, ಅಂತಿಮವಾಗಿ ವದಂತಿಗಳಿಗೆ ತೆರೆ ಬಿದ್ದಿದೆ. ಕಿಚ್ಚ ಸುದೀಪ್ ಅವರೇ ಈ ಬಾರಿಯೂ ಬಿಗ್ ಬಾಸ್ ಶೋ ನಡೆಸಿಕೊಡಲಿದ್ದಾರೆ. ಬಿಗ್ಬಾಸ್ ಕನ್ನಡ 11ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಸೆಪ್ಟೆಂಬರ್ 29ನೇ ತಾರೀಕಿನಿಂದ ರಿಯಾಲಿಟಿ ಶೋ ಆರಂಭವಾಗಲಿದೆ. ಇಷ್ಟಕ್ಕೂ ಸುದೀಪ್ ಅವರಿಗೆ ಬಿಗ್ ಬಾಸ್ ಶೋ ನಿರೂಪಣೆಗೆ ಪಡೆಯುವ ಸಂಭಾವನೆ ಎಷ್ಟು..? ಇದೊಂದು ಪ್ರಶ್ನೆ ಸುದೀಪ್ ಅವರಿಗೆ ಎದುರಾಯ್ತು. ಸುದೀಪ್ ಎಂದಿನಂತೆ ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ.
ನನ್ನ ತಟ್ಟೆ ಎಷ್ಟು ಅಗಲ ಇದೆಯೋ ಅಷ್ಟೇ ನಾನು ಊಟ ಮಾಡುತ್ತೇನೆ, ನನಗೆ ಯೋಗ್ಯತೆ ಎಷ್ಟು ಇದೆಯೋ ನಾನಷ್ಟೇ ದುಡಿಯೋದು ಎಂದು ಹೇಳಿದ್ದಾರೆ. ಹತ್ತು ವರ್ಷ ಬಿಗ್ ಬಾಸ್‌ಗೆ ಕೆಲಸ ಮಾಡಿದ್ದೇನೆ, ಚಿತ್ರರಂಗದಲ್ಲಿ 28 ವರ್ಷ ಪೂರೈಸಿದ್ದೇನೆ. ಸಹಜವಾಗಿ ಒಳ್ಳೆಯ ಸಂಭಾವನೆಯನ್ನೇ ಪಡೆದುಕೊಳ್ಳುತ್ತಿರುತ್ತೇನೆ ಅಲ್ವಾ ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಅಲ್ಲಿಗೆ ಸುದೀಪ್ ಎಷ್ಟು ಸಂಭಾವನೆ ಪಡೆಯುತ್ತೀದ್ದೇನೆ ಎಂದು ಕೊನೆಗೂ ಹೇಳಲಿಲ್ಲ. ಆದರೆ, ಸ್ಟಾರ್ ಪಟ್ಟ, ಜನಪ್ರಿಯತೆ ಮತ್ತು ಆಂಕರಿಂಗ್ ಕೌಶಲ್ಯ ಎಲ್ಲವನ್ನೂ ಸೇರಿಸಿ ಒಳ್ಳೆಯ ಸಂಭಾವನೆಯನ್ನೇ ಪಡೆಯುತ್ತಾರೆ ಎನ್ನುವುದಂತೂ ನಿಜ. ನೂರು ದಿನ ನಡೆಯುವ ಶೋನಲ್ಲಿ ವಾರಕ್ಕೆ ಎರಡು ದಿನ ಈ ಶೋಗಾಗಿಯೇ ಮೀಸಲಿಡಬೇಕು. ಹೀಗಾಗಿ ಸಂಭಾವನೆ ಕೋಟಿಗಳ ಲೆಕ್ಕದಲ್ಲಿದೆ ಎನ್ನಲಾಗಿದೆ.
ಇನ್ನು ತಮಗೆ ಬಿಗ್ ಬಾಸ್ ಸಹವಾಸ ಸಾಕು ಎನಿಸಿದ್ದು ನಿಜ ಎಂದು ಹೇಳಿಕೊಂಡಿರೋ ಸುದೀಪ್, ಚಾನೆಲ್ ಮತ್ತು ತಮ್ಮ ಮಧ್ಯೆ ಯಾವ ಮನಸ್ತಾಪವೂ ಇರಲಿಲ್ಲ. ಸಾಕು ಅನಿಸಿದ್ದಕ್ಕೆ ಬೇರೆಯದ್ದೇ ಕಾರಣಗಳಿದ್ದವು. ಸಿನಿಮಾ ಕಡೆ ಒಂದಷ್ಟು ಗಮನ ನೀಡೋಣ ಎಂಬ ಕಾರಣಕ್ಕೆ ಬೇಡ ಎಂದಿದ್ದೆ. ಆದರೆ, ಬಿಗ್ಬಾಸ್ ಟೀಮ್ ನನ್ನ ಮನೆಗೆ ಭೇಟಿ ನೀಡಿ ಒಪ್ಪಿಸಿದ್ರು ಎಂದು ಹೇಳಿಕೊಂಡಿದ್ದಾರೆ.
ಕಳೆದ 10 ವರ್ಷಗಳಿಂದ ಬಿಗ್ಬಾಸ್ ನನ್ನ ಜೀವನದ ಭಾಗ ಆಗಿದೆ. ಬಿಗ್ಬಾಸ್ಗೆ ನನಗೆ ಏನೋ ಒಂದು ರೀತಿ ಸಂಬಂಧ. ಹಾಗಾಗಿ ಬಿಗ್ಬಾಸ್ ಒಪ್ಪಿಕೊಂಡೆ ಎಂದಿದ್ದಾರೆ ಕಿಚ್ಚ ಸುದೀಪ್. ಬಿಗ್ ಬಾಸ್ ಶುರುವಾದರೆ ನನ್ನ ಬದುಕು ನಿಂತಂತೆ ಆಗುತ್ತೆ, ನಾಲ್ಕು ದಿನ ಹೊರಗೆ ಹೋಗಬಹುದಷ್ಟೇ ಆ ನಂತರ ಎಲ್ಲೇ ಇದ್ದರೂ ಶುಕ್ರವಾರ ಬರಬೇಕಾಗುತ್ತೆ, ಹೀಗಾಗಿ ಹತ್ತು ವರ್ಷ ಆಯ್ತು ಬೇರೆಯವರು ಮಾಡಲಿ ಅಂತ ಯೋಚನೆ ಮಾಡಿದ್ದೆ ಆದರೆ ಅದು ಆಗಲಿಲ್ಲ ಎಂದು ಹೇಳಿದ್ದಾರೆ.
ಎಲ್ಲರಿಗೆ ಗೊತ್ತಿರುವಂತೆ ಬಿಗ್ ಬಾಸ್ ನನ್ನ ಪಾಲಿಗೆ ಸೈಡ್ ಪ್ರಾಜೆಕ್ಟ್ ಅಲ್ಲ. ಬದುಕಿನ ಬಹುಮುಖ್ಯವಾದ ಭಾಗ ಎಂದಿರೋ ಸುದೀಪ್ ಕಳೆದ ಹತ್ತು ವರ್ಷಗಳಿಂದ ಬಿಗ್ ಬಾಸ್ ನಡೆಸಿಕೊಂಡು ಬಂದಿದ್ದೇನೆ, ಈ ಕಾರಣಕ್ಕೆ ಬಿಗ್ ಬಾಸ್ ಜೊತೆ ಒಂದು ರೀತಿಯ ಅವಿನಾಭಾವ ಸಂಬಂಧ ಬೆಸೆದಿದೆ, ಒಪ್ಪಿಕೊಳ್ಳಲು ಇದು ಕೂಡ ಪ್ರಮುಖ ಕಾರಣವೆಂದು ಸುದೀಪ್ ಹೇಳಿದ್ದಾರೆ.
ಅಂದಹಾಗೆ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ನರಕ ಎಂಬ ಎರಡು ವಿಭಾಗಗಳಿವೆ. ನಾವು ತಂಡ ಮಾಡದೇ ಇದ್ದರೂ ಅವರು ಒಳಗಡೆ ಹೋದ ನಂತರ ತಮ್ಮ ತಂಡ ಮಾಡಿಕೊಳ್ಳುತ್ತಾರೆ. ಹೀಗಾಗಿ ಈ ಬಾರಿ ನಾವೇ ಸ್ವರ್ಗ ಮತ್ತು ನರಕ ಎಂದು ಎರಡು ತಂಡ ಮಾಡಿ ಅವರನ್ನು ಮನೆಯೊಳಗೆ ಕಳುಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ ಕಿಚ್ಚ ಸುದೀಪ್.



