ದುನಿಯಾ ವಿಜಯ್ (Dunia vijay) ದೀಪಾವಳಿಗೆ (Deepavali) ಪಟಾಕಿ ಹೊಡೆಸ್ತಾರಾ..? ಅದ್ರಲ್ಲೇನ್ ಬಂತು, ದೀಪಾವಳಿ (Deepavali) ಇರೋದೇ ಪಟಾಕಿ ಹೊಡೆಯೋಕೆ ಅನ್ನೋ ಹಾಗಿಲ್ಲ. ದುನಿಯಾ ವಿಜಯ್ ಈ ಬಾರಿಯ ದೀಪಾವಳಿಗೆ ಡಬಲ್ ಪಟಾಕಿ ಹೊಡೆಸಿದ್ರೂ ಹೊಡೆಸಬಹುದು. ಅಭಿಮಾನಿಗಳಿಗೆ ಥ್ರಿಲ್ ಕೊಟ್ಟು ಹಬ್ಬದೂಟ ಮಾಡಿಸಬಹುದು. ಯಾಕಂದ್ರೆ.. ದುನಿಯಾ ವಿಜಯ್ ಅಭಿನಯದ ಭೀಮಾ (Bheema) ಚಿತ್ರ ರಿಲೀಸ್ ಹಂತಕ್ಕೆ ಹತ್ತಿರವಾಗುತ್ತಿದೆ. ಅರೆ.. ಆಗಲೇ ಶೂಟಿಂಗ್ ಮುಗೀತಾ ಎನ್ನಬೇಡಿ. ದುನಿಯಾ ವಿಜಯ್ ಡೈರೆಕ್ಷನ್ ಕೆಲಸಗಳೇ ಹಾಗೆ. ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ ‘ಭೀಮ’(Bheema) ಚಿತ್ರದ ಕೆಲಸಗಳು ಈಗ ಕೊನೆಯ ಹಂತವನ್ನು ತಲುಪಿವೆ. ಶೀಘ್ರದಲ್ಲೇ ಜನರಿಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ತಿಳಿಸಲು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ದೊಡ್ಡ ಪರದೆಯಲ್ಲಿ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಸದ್ಯದ ಪ್ಲ್ಯಾನ್ ಪ್ರಕಾರ ನವೆಂಬರ್ ತಿಂಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬುದು ತಂಡದ ಆಲೋಚನೆ. ಆ ತಿಂಗಳಲ್ಲಿ ದೀಪಾವಳಿ ಹಬ್ಬ ಇರುವುದರಿಂದ ಅದು ಬಿಡುಗಡೆಗೆ ಸೂಕ್ತ ಸಮಯ ಎನ್ನಲಾಗುತ್ತಿದೆ.
ಸಿನಿಮಾದಲ್ಲಿ ದುನಿಯಾ ವಿಜಯ್ ಮತ್ತೊಮ್ಮೆ ಡೈರೆಕ್ಷನ್ ಮತ್ತು ಹೀರೋ ಹೊಣೆ ಹೊತ್ತಿದ್ದು, ವಿಜಯ್ ಜೊತೆ ಅಚ್ಯುತ್ ಕುಮಾರ್, ರಂಗಾಯಣ ರಘು, ಕಾಕ್ರೋಚ್ ಸುಧಿ, ಅಶ್ವಿನಿ, ಕಲ್ಯಾಣಿ ಹಾಗೂ ಪ್ರಿಯಾ ನಟಿಸಿದ್ದಾರೆ. ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಣ ಮಾಡಿದ್ದಾರೆ.
ವರ್ಷ ಆಗಲೇ 8 ತಿಂಗಳಲ್ಲಿದೆ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಈ ತಿಂಗಳು ಕೌಸಲ್ಯ ಸುಪ್ರಜಾ ರಾಮ (Kausalya Supraja Rama), ಆಚಾರ್ & ಕೋ (Achar & Co) ಹಾಗೂ ಹಾಸ್ಟೆಲ್ ಹುಡುಗರು (Hostel hudugaru bekagiddare) ಸೂಪರ್ ಹಿಟ್ ಸಾಲಿಗೆ ಸೇರಿವೆ. ಹಿಂದಿಯಲ್ಲಿ ಗದ್ದರ್ 2 (Gadar 2) , ಒಎಂಜಿ 2 (OMG 2) , ತಮಿಳಿನಲ್ಲಿ ಜೈಲರ್ (jailor) ಹಿಟ್ ಆಗಿವೆ. ಇನ್ನೇನಿದ್ದರೂ ಹಿಟ್ ಕೊಡುವ ಸಮಯ ಎಂಬ ಕಾರಣಕ್ಕೆ ಭೀಮ (Bhima) ಕೂಡಾ ರಿಲೀಸ್ ಆಗುವ ಆತುರದಲ್ಲಿದ್ದಾನೆ.
ಗುಡ್ ಟೈಮ್ಸ್. ಒಳ್ಳೆ ಕಾಲ.. ಸಲಗ ಚಿತ್ರದಲ್ಲಿ ಭರ್ಜರಿ ಸಕ್ಸಸ್ ಕೊಟ್ಟು ಗೆದ್ದಿದ್ದ ದುನಿಯಾ ವಿಜಯ್, ತಾವು ಡೈರೆಕ್ಷನ್ನಿಗೂ ಸೈ ಎಂದು ತೋರಿಸಿದ್ದಾರೆ. ಗೆದ್ದಿದ್ದಾರೆ. ಈಗ ಮತ್ತೊಮ್ಮೆ ಮೊದಲು ಗೆಲುವು ಫ್ಲೂಕ್ ಅಲ್ಲ. ಆಕಸ್ಮಿಕ ಅಲ್ಲ. ಪ್ರತಿಭೆ, ತಾಕತ್ತು ಇದ್ದೇ ಗೆದ್ದಿದ್ದೇನೆ ಎಂದು ತೋರಿಸಿಕೊಳ್ಳೋ ಸಮಯ. ಹೀಗಾಗಿಯೇ ಮೊದಲ ಚಿತ್ರಕ್ಕಿಂತ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚು. ಗೆಲ್ಲುವುದು ಸುಲಭ. ಗೆಲುವನ್ನು ಕಾಯ್ದುಕೊಳ್ಳೋದು ಕಷ್ಟ.



