ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವೇನೋ ಧ್ವಂಸವಾಗಿದೆ. ಪುನರ್ ಪ್ರತಷ್ಠಾಪನೆಯ ಹೋರಾಟವಂತೂ ಶುರುವಾಗಿದೆ. ಅದು ಇದ್ದದ್ದು ಅಭಿಮಾನ್ ಸ್ಟುಡಿಯೋದಲ್ಲಿ. ಆ ಸ್ಟುಡಿಯೋ ಜಾಗದ ಮಾಲೀಕರು ವಿಷ್ಣುವರ್ಧನ್ ಕುಟುಂಬದವರಾಗಿರಲಿಲ್ಲ. ಆ ಸ್ಟುಡಿಯೋದಲ್ಲಿ ಈಗ ಬಾಲಣ್ಣ ಅವರ ಸಮಾಧಿಯೂ ಇಲ್ಲ. ಈ ನಡುವೆ ವಿಷ್ಣು ಅಭಿಮಾನಿಗಳು.. ಕುಟುಂಬದ ಮಧ್ಯೆ ತಡೆಗೋಡೆ ಕಟ್ಟಿದ್ದು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ.
ʻಭಾರತಿ ವಿಷ್ಣುವರ್ಧನ್ʼಗೆ ಸಮಾಧಿ ಧ್ವಂಸ ಮೊದಲೇ ಗೊತ್ತಿತ್ತಾ..?
ವಿಷ್ಣು ಸಮಾಧಿಯಾಗಿದ್ದ ಸ್ಮಾರಕ ಸ್ಥಳವನ್ನು ತೆರವು ಮಾಡಿದ್ದ ವಿಷಯ ಭಾರತಿ ವಿಷ್ಣುವರ್ಧನ್ ಅವರಿಗೆ ಮೊದಲೇ ಗೊತ್ತಿತ್ತು ಎನ್ನುವುದು ಕೆಲವರ ಆರೋಪ. ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಕೂಡಾ ಪರೋಕ್ಷವಾಗಿ ಕುಟುಂಬದ ಮೇಲೆಯೇ ಆರೋಪ ಹೊರಿಸುತ್ತಾರೆ. ಅದಕ್ಕೆ ಕಾರಣ ಮೈಸೂರಿನಲ್ಲಿ ಸ್ಮಾರಕ ಮಾಡುವುದಕ್ಕೆ ಭಾರತಿ ವಿಷ್ಣುವರ್ಧನ್ ಒಪ್ಪಿಗೆ ಕೊಟ್ಟಿದ್ದು.
ಆದರೆ, ಭಾರತಿ ಅವರಿಗೆ ವಿಷ್ಣು ಸಮಾಧಿ ಧ್ವಂಸ ಗೊತ್ತಾಗಿದ್ದೂ ಕೂಡಾ ಮಾಧ್ಯಮಗಳ ಮೂಲಕವೇ. ಈ ಕುರಿತು ವಿಷ್ಣು ಸಮಾಧಿ ಪುನರ್ ಸ್ಥಾಪನೆಗೆ ಈಗ ಸುದೀಪ್, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಪಣ ತೊಟ್ಟಿದ್ದಾರೆ. ಈ ನಡುವೆ ವಿಷ್ಣುವರ್ಧನ್ ಅವರ ಕುಟುಂಬದ ಒಪ್ಪಿಗೆ ಮೇರೆಗೇ ʻಸಮಾಧಿ ತೆರವುʼ ಕಾರ್ಯಾಚರಣೆ ಆಗಿದೆ ಎಂಬ ಆರೋಪ ಇದೆಯಲ್ಲ.. ಅದು ಕುಟುಂಬದವರನ್ನು ಆಘಾತಕ್ಕೆ ದೂಡಿದೆ. ಅನಿರುದ್ಧ ಅವರ ಮಾತು ಕೇಳಿದರೆ.. ವಿಷ್ಣು ಕುಟುಂಬ ಮತ್ತು ಅಭಿಮಾನಿಗಳ ಮಧ್ಯೆ ಯಾರೋ ತಡೆಗೋಡೆ ಕಟ್ಟಿದ್ದಾರೆ ಎಂಬ ಅನುಮಾನ ಮೂಡದೇ ಇರದು.
ಅಭಿಮಾನಿಗಳು.. ಕುಟುಂಬದ ಮಧ್ಯೆ ಕಂದಕ ಸೃಷ್ಟಿಸಿದ್ದು ಯಾರು..?
ಅಭಿಮಾನಿಗಳ ಕಣ್ಣಲ್ಲಿ ತಮ್ಮನ್ನು ವಿಲನ್ ಮಾಡುವ ಕುತಂತ್ರವೂ ನಡೆಯುತ್ತಿದೆ ಎಂದು ಆರೋಪಿಸಿರುವ ಅನಿರುದ್ಧ ʻʻಪ್ರತಿ ಬಾರಿಯೂ ಏನೇನೋ ಹೊಸ ವಿವಾದ ಸೃಷ್ಟಿ ಆದಾಗ, ನಮ್ಮನ್ನೆ ದೂಷಿಸುವ ಕೆಲಸ ಆಗುತ್ತಿದೆ. ಆದರೆ ಯಾಕೆ ಹೀಗೆ ಮಾಡುತ್ತಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ನಮ್ಮನ್ನು ವಿಲನ್ ಮಾಡಿ, ತಾವುಗಳು ಹೀರೋಗಳು ಆಗೋದಕ್ಕೆ ಪ್ರಯತ್ನ ಪಡ್ತಿದ್ದಾರೆ. ಅದು ಯಾಕೆ ಅನ್ನೋದೇ ನನಗೆ ಅರ್ಥ ಆಗ್ತಿಲ್ಲ. ಸ್ಮಾರಕ ತೆರವುಗೊಳಿಸುತ್ತಿರುವ ಬಗ್ಗೆ ನಮಗೆ ಗೊತ್ತೇ ಇಲ್ಲʼʼ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು ಯಾವತ್ತೂ ಅಪ್ಪಾಜಿ ಅಭಿಮಾನಿಗಳನ್ನ ವಿರೋಧ ಮಾಡಿಲ್ಲ. ಕೆಲವರಿಗೆ ವಿಚಾರವೇ ಗೊತ್ತಿಲ್ಲ, ಅಂತವರೂ ನಮ್ಮ ವಿರುದ್ಧ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ. ಈ ಹೋರಾಟದಲ್ಲಿ ವಿಷ್ಣುವರ್ಧನ್ ಕುಟುಂಬಕ್ಕೂ.. ಅಭಿಮಾನಿಗಳಿಗೂ ಮಧ್ಯೆ ಗೋಡೆ ಕಟ್ಟುತ್ತಿರುವುದು ಯಾರು..? ಇಂತಹವರೇ ಎಂದು ಅನಿರುದ್ಧ ಹೇಳೋದೇ ಇಲ್ಲ. ಆದರೆ, ಅವರ ಮಾತಿನಲ್ಲಿ ಯಾರೋ ಒಬ್ಬ ವ್ಯಕ್ತಿಯ ಮೇಲೆ ಆಕ್ರೋಶ ಇರುವುದು ಎದ್ದು ಕಾಣುತ್ತದೆ. ಅದು ಯಾರು..? ಗೊತ್ತಿಲ್ಲ.
ʻʻನಮಗೆ ಆ ಸ್ಥಳದ ಬಗ್ಗೆ ವಿಶೇಷ ಅಭಿಮಾನ ಇತ್ತು. ನಾವೂ ಕೂಡಾ ಹಲವು ಬಾರಿ ಆ ಒಂದು ಜಾಗವನ್ನು ಬಿಟ್ಟು ಕೊಟ್ಟು ಬಿಡಿ. ಪ್ರತಿದಿನ ನೂರಾರು ಅಭಿಮಾನಿಗಳು ಬರುತ್ತಾರೆ. ಹುಟ್ಟುಹಬ್ಬ ಮತ್ತು ಪುಣ್ಯತಿಥಿಯ ದಿನಗಳಂತೂ ಸಾವಿರಾರು, ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಾರೆ. ಆ ಜಾಗದಲ್ಲಿ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾರೆ. ಅಷ್ಟು ಕೆಲಸಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದೆ. ಆದರೆ, ಏಕಾಏಕಿ ತೆರವು ಮಾಡಿಸಿದ್ದಾರೆʼʼ ಎಂದು ಹೇಳಿದ್ದಾರೆ ಅನಿರುದ್ಧ ಜತ್ಕರ್. ಅಪ್ಪಿತಪ್ಪಿಯೂ ಇಂತಹ ವ್ಯಕ್ತಿಯಿಂದಲೇ ಸಮಸ್ಯೆ ಆಯಿತು ಎಂದು ಹೇಳೋದಿಲ್ಲ.
ಅಂದಹಾಗೆ ವಿಷ್ಣುವರ್ಧನ್ ಅವರು ಬದುಕಿದ್ದರೆ ಈ ವರ್ಷ ಅವರಿಗೆ 75 ತುಂಬುತ್ತಿತ್ತು. 75ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸೋಕೆ ಅಭಿಮಾನಿಗಳು ಮನಸ್ಸು ಮಾಡಿ, ಅಗಲೇ ಸಿದ್ಧತೆ ಆರಂಭಿಸಿದ್ದರು. ಈಗ ನೋಡಿದರೆ.. ಸಮಾಧಿಯೇ ಧ್ವಂಸವಾಗಿದೆ. ಸುದೀಪ್ ಮತ್ತು ವೀರಕಪುತ್ರ ಶ್ರೀನಿವಾಸ್ ಅವರೇನೋ ಪುನರ್ ಸ್ಥಾಪನೆಯ ಭರವಸೆ ಕೊಟ್ಟಿದ್ದಾರೆ. ಆದರೆ.. ಅವರ ಮಾತುಗಳಲ್ಲಿ ಕೂಡಾ ಭಾರತಿ ವಿಷ್ಣುವರ್ಧನ್, ಅನಿರುದ್ಧ ಹೆಸರುಗಳ ಪ್ರಸ್ತಾಪವೂ ಬರೋದಿಲ್ಲ. ಎಲ್ಲವೂ ಕೇವಲ ಪ್ರೆಸ್ ಮೀಟ್ʻಗಳಿಗಷ್ಟೇ ಸೀಮಿತವಾಗಿದೆ.



