ಲಾಂಗು ಹಿಡಿಯೋರಿಗೆಲ್ಲ ಮನೆ ದೇವ್ರು.. “ಶಿವ”ಣ್ಣ. ಒನ್ ಅಂಡ್ ಓನ್ಲಿ ಮಾಸ್ಟರ್ ಪೀಸ್. ಇಡೀ ಇಂಡಿಯಾಗೆ ಒಬ್ಬರೇ ಸತ್ಯ. ಒಬ್ಬರೇ ಮಾದೇಶ. ಒಬ್ಬರೇ ರಣಗಲ್ಲು.
ದೇವರುಗಳಿಗೆ ದೇವರು ಆ ಶಿವ. ಹೀರೋಗಳಿಗೆ ಹೀರೋ ಈ ಶಿವ.
ಶಿವಣ್ಣನ ಮಾಸ್ ಲುಕ್ ಲೆವೆಲ್ ಬೇರೆ. ಶಿವಣ್ಣ ಆರ್‌ಎಕ್ಸ್ 100 ಅನ್ನೋದು ಪಕ್ಕಾ.
ನಾನು ಅಂಗನವಾಡಿಯಲ್ಲಿ ಇದ್ದಾಗಲೂ ಶಿವಣ್ಣ ಹೀರೋ. ನಾನು ಸ್ಕೂಲ್‌ಗೆ ಹೋಗುವಾಗಲೂ ಶಿವಣ್ಣ ಹೀರೋ. ನಾನು ಹೈಸ್ಕೂಲ್‌ಗೆ ಹೋಗುವಾಗಲೂ ಶಿವಣ್ಣ ಹೀರೋ. ನಾನು ಕಾಲೇಜ್‌ಗೆ ಹೋಗುವಾಗಲೂ ಶಿವಣ್ಣ ಹೀರೋ. ಈಗ ಕೆಲಸಕ್ಕೆ ಹೋಗ್ತಾ ಇರೋವಾಗಲೂ ಶಿವಣ್ಣನೇ ಹೀರೋ.
ಶಿವಣ್ಣ ಯಮಾಹಾ ಆರ್ ಎಕ್ಸ್ 100 ಇದ್ದಂಗೆ. ಇಬ್ಬರು ಮಾರ್ಕೆಟ್‌ಗೆ ಹೆಚ್ಚು ಕಮ್ಮಿ ಒಂದೇ ಸಲ ಬಂದವರು. ಇಬ್ಬರಿಗೂ ಇವಾಗ್ಲೂ ಅದೇ ಕ್ರೇಜು.. ಅದೇ ಡಿಮ್ಯಾಂಡು.. ಅದೇ ಪವರು.. ಅದೇ ಗತ್ತು.. ಸೌಂಡ್ ಅಂತೂ ಹೇಳೋದೆ ಬೇಡ.. ಲವ್ ಯು ಶಿವಣ್ಣ
ಇದು ಭೈರತಿ ರಣಗಲ್ ಸೃಷ್ಟಿಸಿರೋ ಕ್ರೇಜು. ಅಭಿಮಾನಿಗಳು ಕೊಡ್ತಿರೋ ಕಮೆಂಟು. ಶಿವಣ್ಣನ ಫ್ಯಾನ್ಸ್ ಬೇರೆ ಹೀರೋಗಳ ಫ್ಯಾನ್ಸ್ ರೀತಿ ಅಲ್ಲ. ತಮಗೆ ಇಷ್ಟವಾಗದಿದ್ದರೆ, ಅದು ಯಾಕೆ ಇಷ್ಟವಾಗಲಿಲ್ಲ ಎಂದೂ ಕೂಡಾ ಓಪನ್ ಆಗಿಯೇ ಹೇಳಿಕೊಳ್ತಾರೆ. ಅಷ್ಟರಮಟ್ಟಿಗೆ ಶಿವಣ್ಣನ ಅಭಿಮಾನಿಗಳು ಮೆಚ್ಯೂರ್ ಫ್ಯಾನ್ಸ್ ಇದ್ದಾರೆ. ಅಂತಹ ಮೆಚ್ಯೂರ್ ಫ್ಯಾನ್ಸ್ ಕೂಡಾ ಥ್ರಿಲ್ಲಾಗುವಂತಿದೆ ಭೈರತಿ ರಣಗಲ್ ಟ್ರೇಲರ್.
ಹೇಗಿದೆ ಭೈರತಿ ರಗಣಲ್ ಟ್ರೇಲರ್..?
ಮಫ್ತಿ’ಯಲ್ಲಿ ಭೈರತಿ ರಣಗಲ್ ಮಹಾನ್ ಚಾಣಾಕ್ಷ. ಆತನಿಗೆ ತನ್ನನ್ನು ಅರೆಸ್ಟ್ ಮಾಡಲೆಂದೇ ಬಂದ ವ್ಯಕ್ತಿ ಮಾರುವೇಷದಲ್ಲಿರೋ ಸಿಬಿಐ ಆಫೀಸರ್ ಅನ್ನೋದೂ ಗೊತ್ತು. ಒಳ್ಳೆಯವರಿಗೆ ಒಳ್ಳೆಯವನು, ತಂಗಿ ಎಂದರೆ ಪ್ರಾಣ, ದುಷ್ಟರಿಗೆ ದುಷ್ಟ. ಭೈರತಿಯನ್ನು ಬಡವರ ಬಂಧು ಎಂಬಂತೆ ತೋರಿಸಲಾಗಿತ್ತು. ಕಣ್ಣಲ್ಲೇ ನಟಿಸಿದ್ದ ಭೈರತಿ ರಣಗಲ್ ಈ ಬಾರಿ ಲುಂಗಿ ಬದಲು ಕರಿಕೋಟು ತೊಟ್ಟಿದ್ದಾರೆ. ಲುಂಗಿಯ ಮೋಡಿಯೂ ಇದೆ. ಆದರೆ.. ಕಥೆ ಏನು..? ನರ್ತನ್ ಗುಟ್ಟು ಬಿಟ್ಟುಕೊಟ್ಟಿಲ್ಲ. ಗುಟ್ಟು ಹೇಳಿದಂತೆಯೇ ಹೇಳಿ.. ಕಥೆ ಇನ್ನೂ ಇದೆ ಎಂಬ ಝಲಕ್ ತೋರಿಸಿದ್ದಾರೆ. ಇದು ಭೈರತಿ ರಣಗಲ್ ಟ್ರೇಲರ್.
ಈ ಟ್ರೇಲರಿನಲ್ಲಿ ಭೈರತಿ ರಣಗಲ್ನ ಬಾಲ್ಯ, ಬಾಲ್ಯದಲ್ಲಿ ಅವನು ಎದುರಿಸಿದ ಕಷ್ಟಗಳು, ಹುಟ್ಟಿದ ಪ್ರಶ್ನೆಗಳು, ಉತ್ತರ ಕಂಡುಕೊಳ್ಳಲು ಮಾಡಿಕೊಂಡ ಆಯ್ಕೆ. ಕಾನೂನು ಹೋರಾಟ, ಕೈಗೂಡದೇ ಇದ್ದಾಗ ಕೈಗೆ ಎತ್ತಿಕೊಂಡ ಆಯುಧಗಳ ಕಥೆ.. ಎಲ್ಲವೂ ಇದೆ. ಬಘೀರದಲ್ಲಿ ಡಾಕ್ಟರ್ ಆಗಿದ್ದ ರುಕ್ಮಿಣಿ ವಸಂತ್ ಇಲ್ಲಿಯೂ ಬಿಳಿ ಕೋಟು ಧರಿಸಿದ್ದಾರೆ.
ಬಾಲಿವುಡ್ ನಟ ರಾಹುಲ್ ಭೋಸ್ ವಿಲನ್ ಆಗಿದ್ದಾರೆ. ಡೈನಮಿಕ್ ಸ್ಟಾರ್ ದೇವರಾಜ್, ಸೋದರಿ ಛಾಯಾಸಿಂಗ್ ಕೂಡಾ ಕಂಟಿನ್ಯೂ ಆಗಿದ್ದಾರೆ. ಏಕೆಂದರೆ.. ಬೈರತಿ ರಣಗಲ್ ಮಫ್ತಿಯ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್. ಗೋಪಾಲಕೃಷ್ಣ ದೇಶಪಾಂಡೆ, ಬಾಬು ಹಿರಣ್ಣಯ್ಯ, ಶಬೀರ್, ಪ್ರತಾಪ್ ನಾರಾಯಣ್, ಮಧು ಗುರುಸ್ವಾಮಿ, ಅಶ್ವಿನ್ ಹಾಸನ್ ಮುಂತಾದವರು ನಟಿಸಿರುವ ಚಿತ್ರಕ್ಕೆ ಆಕ್ಷನ್ ಮಾಸ್ಟರ್ ಚೇತನ್ ಡಿಸೋಜಾ. ರವಿ ಬಸ್ರೂರು ಸಂಗೀತ ನಿರ್ದೇಶನದ ಚಿತ್ರಕ್ಕೆ ಗೀತಾ ಅವರೇ ನಿರ್ಮಾಪಕಿ. ಸಿನಿಮಾ ನವೆಂಬರ್ ೧೫ರಂದು ರಿಲೀಸ್ ಆಗ್ತಿದೆ.
ಚಿತ್ರದ ಟ್ರೇಲರ್ ಬಗ್ಗೆ ಎಲ್ಲ ಕಡೆ ಪಾಸಿಟಿವ್ ರೆಸ್ಪಾನ್ಸ್ ಇದೆ. ಅಂದಹಾಗೆ ಇದು ಕನ್ನಡದ ಮೊಟ್ಟ ಮೊದಲ ಪ್ರೀಕ್ವೆಲ್ ಸಿನಿಮಾ ಎಂಬ ಖ್ಯಾತಿ ಪಡೆದಿದೆ. ಈ ಹಿಂದೆ ಹಲವು ಚಿತ್ರಗಳು ಸೀಕ್ವೆಲ್ ಆಗಿ ಬಂದಿವೆ. ಕನ್ನಡದಲ್ಲಿಯೇ ಸಾಂಗ್ಲಿಯಾನ, ಕೆಜಿಎಫ್, ಹಿಂದಿಯಲ್ಲಿ ಕ್ರಿಶ್, ಡಾನ್, ಭೂಲ್ ಬುಲಯ್ಯ, ತೆಲುಗಿನಲ್ಲಿ ಬಾಹುಬಲಿ, ಪುಷ್ಪ, ರಕ್ತಚರಿತ್ರೆ, ತಮಿಳಿನಲ್ಲಿ ಲೋಕೇಶ್ ಕನಗರಾಜ್ ಚಿತ್ರಗಳು (ಖೈತಿ, ವಿಕ್ರಂ, ಲಿಯೋ), ಮಲಯಾಳಂನಲ್ಲಿ ದೃಶ್ಯಂ ಸರಣಿ.. ಹೀಗೆ ಹಲವು ಚಿತ್ರಗಳು ರಿಲೀಸ್ ಆಗಿವೆ. ಆದರೆ ಪ್ರೀಕ್ವೆಲ್.. ಇದೇ ಮೊದಲು.



