ಭೈರತಿ ರಣಗಲ್ ಪ್ರೀ ರಿಲೀಸ್ ಈವೆಂಟ್ ಕೇವಲ ಸಿನಿಮಾ ಶೋ ಆಗಿರಲಿಲ್ಲ. ಅಲ್ಲಿ ಶಿವಣ್ಣನ ಜೊತೆ ನಟಿಸಿದ್ದ ಸುಧಾರಾಣಿ, ಶೃತಿ, ರಕ್ಷಿತಾ ಪ್ರೇಮ್, ಮೊದಲಾದ ನಾಯಕಿಯರಿದ್ದರು. ಶಿವಣ್ಣನ ಕುಟುಂಬದವರೇ ಆದ ವಿಜಯ್ ರಾಘವೇಂದ್ರ, ನಾನು ಶಿವಣ್ಣ ಫ್ಯಾಮಿಲಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳೊ ಡಾಲಿ ಧನಂಜಯ, ನೀನಾಸಂ ಸತೀಶ್, ಪವನ್ ಒಡೆಯರ್, ಡಾ.ರಾಜ್ ಬ್ಯಾನರಿಂದಲೇ ದೊಡ್ಡ ಮಟ್ಟಕ್ಕೆ ಬೆಳೆದ ಸಾರಾ ಗೋವಿಂದು, ಭೈರತಿ ರಣಗಲ್ ತಂಡದ ರುಕ್ಮಿಣಿ ವಸಂತ್, ಛಾಯಾಸಿಂಗ್.. ಹೀಗೆ ಚಿತ್ರರಂಗವೇ ಹಾಜರಿತ್ತು. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರ ಬಿಡುಗಡೆಯಾಗುವುದಕ್ಕೆ ಮುನ್ನ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳ ಜೊತೆ ಜೊತೆಗೆ ಶಿವಣ್ಣ ಫ್ಯಾಮಿಲಿ ಅರ್ಥಾತ್ ಚಿತ್ರರಂಗದ ಸದಸ್ಯರೂ ಇದ್ದರು. ಅಂದಹಾಗೆ ಈ ಶೋನದಲ್ಲಿ ಶಿವಣ್ಣನ ಗುಣಗಾನದ ಜೊತೆಗೆ ಶಕ್ತಿಧಾಮದ ಮಹಿಳೆಯರಿಗಾಗಿ ಆರಂಭಿಸಿರುವ ಏಂಜಲ್ಸ್ ಬೇಕ್ ಬಗ್ಗೆಯೂ ಪ್ರಸ್ತಾಪವಿತ್ತು.
ಅಂದಹಾಗೆ ಈ ಏಂಜಲ್ಸ್ ಬೇಕ್ ಅನ್ನೋದು ಗೀತಾ ಅವರೇ ಮಾಡಿರುವ ಉದ್ಯಮ. ಇದು ಶಕ್ತಿಧಾಮದ ಮಹಿಳೆಯರಿಗಾಗಿ. ಗೀತಾ ಅವರು ವರ್ಷದ ಹಿಂದೆ ಈ ಮಹಿಳೆಯರಿಗಾಗಿ ಬೇಕಿಂಗ್ ಕಲಿಸೋಕೆ ಶುರು ಮಾಡಿದ್ದರು. ಹಾಗೆ ತರಬೇತಿ ಕೊಟ್ಟ ನಂತರ ಬೇಕಿಂಗ್ ಉದ್ಯಮವನ್ನೇ ಆರಂಭಿಸಿದ್ದಾರೆ. ಇದು ಉದ್ಯಮವಾದರೂ, ಇದರ ಲಾಭವನ್ನೇನೂ ಶಿವಣ್ಣ ಆಗಲೀ, ಗೀತಾ ಅವರಾಗಲೀ ನಿರೀಕ್ಷೆ ಮಾಡುತ್ತಿಲ್ಲ. ಈ ಉದ್ಯಮದ ಹಣ ಶಕ್ತಿಧಾಮಕ್ಕೇ ಬಳಕೆಯಾಗಲಿದೆ ಎನ್ನುವುದು ವಿಶೇಷ. ಈ ಉದ್ಯಮದ ಮೂಲಕ ಶಕ್ತಿಧಾಮಕ್ಕೆ ಆರ್ಥಿಕ ಶಕ್ತಿ, ಅಲ್ಲಿರುವ ಮಹಿಳೆಯರಿಗೆ ಸ್ವಾವಲಂಬನೆ, ನಾವೂ ದುಡಿಯುತ್ತಿದ್ದೇವೆ ಎಂಬ ಆತ್ಮಾಭಿಮಾನವನ್ನೂ ಮೂಡಿಸಲಾಗುತ್ತಿದೆ ಎನ್ನುವುದೇ ವಿಶೇಷ.
ಇನ್ನು ಕಾರ್ಯಕ್ರಮಕ್ಕೆ ಬರೋದಾದರೆ..
ಸುಧಾರಾಣಿ : ಮೈ ಹೀರೋ ಆಲ್ವೇಸ್ ಮೈ ಹೀರೋ. ಶಿವಣ್ಣ ಆಲ್ವೇಸ್ ರಾಕಿಂಗ್. ಗೀತಕ್ಕೆ ಪ್ರೊಡಕ್ಷನ್ಸ್ಗೆ ಬಂದಿರೋದು ಖುಷಿಯ ವಿಚಾರ. ಭೈರತಿ ರಣಗಲ್, ಮಫ್ತಿಯನ್ನು ಮೀರಿಸುತ್ತದೆ.
ಶೃತಿ : ಗೌರಮ್ಮ, ಟುವ್ವಿ ಟುವ್ವಿನಲ್ಲಿ ಕ್ಯೂಟ್ ಶಿವಣ್ಣನ ನೋಡಿದ್ದೆವು. ಓಂನಲ್ಲಿ ಮಚ್ಚು ಹಿಡಿದಾಗ ಬೆಚ್ಚಿದ್ದೆವು. ಮಫ್ತಿಯಲ್ಲಿ ನೋಡಿದಾಗ ಶಿವಣ್ಣ ಹಿಂಗೂ ಇರ್ತಾರಾ ಅನ್ಸಿತ್ತು. ತಮಿಳುನಾಡಿಗೆ ರಜನಿಕಾಂತ್ ಸ್ಟಾರ್ ಆದ್ರೆ, ನಮ್ಮ ಕನ್ನಡಕ್ಕೆ ಶಿವಣ್ಣನೇ ರಜನಿಕಾಂತ್.
ರಕ್ಷಿತಾ ಪ್ರೇಮ್ : ನನ್ನ ತಂದೆ ತಾಯಿಗೆ ಅಣ್ಣಾವ್ರು ದೇವರಾಗಿದ್ದರು. ಅವರ ಮನೆಯಲ್ಲಿ ಡಾ.ರಾಜ್, ಪಾರ್ವತಮ್ಮ ಫೋಟೋ ಇರ್ತಿತ್ತು. ನನ್ನ ತಂದೆ ಈ ಮಾತನ್ನ ತುಂಬಾ ಸಲ ನನ್ನ ಬಳಿ ಹೇಳ್ತಿದ್ದರು. ನನ್ನ ತಂದೆ ಸ್ಥಾನನ ನಾನು ಶಿವಣ್ಣನಿಗೆ ಕೊಟ್ಟಿದ್ದೀನಿ. ಜನುಮದ ಜೋಡಿ ಸಿನಿಮಾಗೆ ನನ್ನ ತಂದೆ ಸಿನಿಮಾಟೋಗ್ರಫರ್ ಆಗಿದ್ದರು. ಆ ಕಾರ್ಯಕ್ರಮಕ್ಕೆ ಅಪ್ಪ ಇದ್ದರು. ಈಗ ಭೈರತಿ ರಣಗಲ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ನಾನಿದ್ದೀನಿ. ಲೆಜೆಂಡ್ ಗೆ ಲೆಜೆಂಡ್ ಶಿವರಾಜ್ ಕುಮಾರ್.
ಸಾರಾ ಗೋವಿಂದು : ಶಿವಣ್ಣನ್ನ ಚಿಕ್ಕ ವಯಸ್ಸಿಂದ ನೋಡಿದ್ದೇನೆ. ನಮ್ಮ ಕಣ್ಮುಂದೆ ಬೆಳೆದವರು. ಕ್ರಿಕೆಟರ್ ಆಗ್ತಾರೆ ಅಂದ್ಕೊಂಡಿದ್ದೆ, ಆದರೆ ಕಲಾವಿದರಾದರು. ಆನಂದ್ ಸಿನಿಮಾಗೆ ನಾನು ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದೆ. ಇವತ್ತಿಗೆ ದೊಡ್ಡ ಸೂಪರ್ ಸ್ಟಾರ್ ಆಗಿದ್ದಾರೆ. 130 ಸಿನಿಮಾ ಮಾಡಿದ್ದಾರೆ. ಜೋಗಿಯಂತೆ ಭೈರತಿ ರಣಗಲ್ ಸೂಪರ್ ಹಿಟ್ ಆಗಲಿ.
ಡಾಲಿ ಧನಂಜಯ : ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಇಟ್ಟಿರುವ ಮೈಲುಗಲ್ಲುಗಳನ್ನ ಯಾರೂ ಮುಟ್ಟೋದಕ್ಕೂ ಆಗಲ್ಲ. ಎಷ್ಟೋ ಜನ ಡೈರೆಕ್ಟರ್ ಗಳನ್ನ ಶಿವಣ್ಣ ಹುಟ್ಟುಹಾಕಿದ್ದಾರೆ. ಎಷ್ಟೋ ಪ್ರತಿಭೆಗಳಿಗೆ ಶಿವಣ್ಣ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನಾನು ಶಿವಣ್ಣನ ಪರಂಪರೆ, ಶಿವಣ್ಣನ ಹಾದಿಯಲ್ಲಿ ನಡಿತೀನಿ ಅಂತ ಹೆಮ್ಮೆಯಿಂದ ಹೇಳ್ತೀನಿ. ಭೈರತಿ ರಣಗಲ್ ದೊಡ್ಡ ಹಿಟ್ ಆಗೇ ಆಗುತ್ತೆ.
ವಿಜಯ್ ರಾಘವೇಂದ್ರ : ಶಿವಣ್ಣ ಮಾಮ ಮೈಲುಗಲ್ಲುಗಳಿಗೆ ಅವರೇ ಸಾಟಿ. ರೆಕಾರ್ಡ್ ಗಳಿಗೂ ಅವರೇ ಸಾಟಿ. ಲಾಂಗ್ ಅಲ್ಲ ಬುಕ್ ಇಡ್ಕೊಂಡ್ರೂ ಅದರಲ್ಲೊಂದು ಪೋರ್ಸ್ ಇರುತ್ತೆ. ಭೈರತಿ ರಣಗಲ್ ಸಿನಿಮಾ ಸಕ್ಸಸ್ ಆಗಬೇಕು.
ನೀನಾಸಂ ಸತೀಶ್ : ಭೈರತಿ ರಣಗಲ್ ಪಾತ್ರಕ್ಕೆ ಶಿವಣ್ಣ ತುಂಬಿರುವ ಎನರ್ಜಿ ಹಾಗೂ ಸ್ವ್ಯಾಗ್ ನ ಬೇರೆ ಯಾರೂ ಮ್ಯಾಚ್ ಮಾಡೋಕೆ ಆಗಲ್ಲ. ಶಿವಣ್ಣ ಎಷ್ಟೋ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದಾರೆ. ಭೈರತಿ ರಣಗಲ್ ಕೂಡ ಅಷ್ಟೆ ದೊಡ್ಡ ಹಿಟ್ ಆಗಲಿ. ಐ ಲವ್ ಯೂ ಶಿವಣ್ಣ..
ಅಂದಹಾಗೆ ವೇದಿಕೆಯಲ್ಲಿದ್ದ ಎಲ್ಲರೂ ಗೀತಾ ಅವರ ಏಂಜಲ್ಸ್ ಬೇಕ್ ಬಗ್ಗೆ ಮಾತನಾಡಿ, ಇನ್ನು ಮುಂದೆ ಶಕ್ತಿಧಾಮದ ಏಂಜಲ್ಸ್ ಬೇಕಿಂಗ್ ಉತ್ಪನ್ನಗಳನ್ನೇ ಬಳಸಿ ಎಂದು ಪ್ರಚಾರವನ್ನೂ ಮಾಡಿದರು.



