ಜುಲೈ 12. ಹತ್ತಿರ ಬರ್ತಿದ್ದಂತೆ ಅಭಿಮಾನಿ ದೇವರುಗಳ ಆರ್ಭಟವೂ ಜೋರು. ಈ ಹುಟ್ಟುಹಬ್ಬಕ್ಕೆ ಶಿವಣ್ಣ ಕೊಡ್ತಿರೋ ಗಿಫ್ಟ್ ʻಭೈರವನ ಕೊನೆ ಪಾಠʼ. ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಎಂದೆಲ್ಲ ಕರೆಸಿಕೊಳ್ಳೋ ಡಾ.ಶಿವ ರಾಜ್ ಕುಮಾರ್ ಅವರಿಗೆ ಜುಲೈ 12ಕ್ಕೆ ಹುಟ್ಟುಹಬ್ಬ.ಆ ದಿನಕ್ಕೆ ಏನಾದರೂ ಸ್ಪೆಷಲ್ ಗಿಫ್ಟ್ ಕೊಡಲಿದ್ದಾರೆ ಎಂದು ಕಾಯ್ತಿದ್ದ ʻಅಭಿಮಾನಿ ದೇವರುʼಗಳಿಗೆ ಉಡುಗೊರೆ ಘೋಷಣೆ ಆಗಿದೆ. ಶಿವಣ್ಣನಿಗಾಗಿ ಹೇಮಂತ್ ಎಂ ರಾವ್ ನಿರ್ದೇಶನ ಮಾಡಲಿರುವ ಈ ಸಿನಿಮಾಗೆ ‘ಭೈರವನ ಕೊನೆ ಪಾಠ’ ಎಂದು ನಾಮಕರಣ ಮಾಡಲಾಗಿದೆ. ಭೈರತಿ ರಣಗಲ್ ಆಗಿರುವ ಅದೇ ಶಿವಣ್ಣ, ಇಲ್ಲಿ ಭೈರವನಾಗಿದ್ದಾರೆ.
ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತ ಸಾಗರದಾಚೆ ಎಲ್ಲೋ.. ಈ ರೀತಿಯ ಕಾವ್ಯಾತ್ಮಕ ಶೀರ್ಷಿಕೆಗಳನ್ನೇ ತಮ್ಮ ಸಿನಿಮಾಗೆ ಇಡುವ ಹೇಮಂತ್ ಎಂ ರಾವ್, ಶಿವಣ್ಣ ಜೊತೆಗೆ ಮಾಡುತ್ತಿರುವ ಸಿನಿಮಾಗೆ ‘ಭೈರವನ ಕೊನೆ ಪಾಠ’ ಎಂದು ಹೆಸರಿಟ್ಟಿದ್ದಾರೆ. ಇದು ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿಯೂ ತೆರೆಗೆ ಬರಲಿದೆ. ಸೆಮಿ ಪ್ಯಾನ್ ಇಂಡಿಯಾ ಸಿನಿಮಾ. ಏಕೆಂದರೆ ಈ ಚಿತ್ರ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗ್ತಿಲ್ಲ.
ವಿಜೆಎಫ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಡಾ. ವೈಶಾಖ್ ಜೆ ಗೌಡ ನಿರ್ಮಿಸುತ್ತಿರುವ ʻಭೈರವನ ಕೊನೆ ಪಾಠʼ ಟೈಟಲ್ ಬಗ್ಗೆ ಮಾತನಾಡಿರುವ ಹೇಮಂತ್ ನಮ್ಮ ಆಡುಭಾಷೆಗೆ ಹತ್ತಿರವಾದ ಶೀರ್ಷಿಕೆಗಳು ನನಗೆ ಇಷ್ಟವಾಗುತ್ತವೆ. ಈ ಹಿಂದೆ ಕನ್ನಡ ಸಿನಿಮಾ ಟೈಟಲ್‌ಗಳುಯ ಕೇಳಲಿಕ್ಕೂ ಮಧುರವಾಗಿದ್ದು ಮತ್ತು ಕುತೂಹಲ ಕೆರಳಿಸುವಂತೆ ಇರುತ್ತಿದ್ದವು. ನನ್ನ ನಿರ್ದೇಶನದ ಸಿನಿಮಾ ಶೀರ್ಷಿಕೆಗಳನ್ನು ಜನರು ಸಾಕಷ್ಟು ಮೆಚ್ಚಿಕೊಂಡಿದ್ದರು. ʻಭೈರವನ ಕೊನೆ ಪಾಠʼ ಕೂಡ ಆ ಸಾಲಿಗೆ ಸೇರುವಂತಹ ಒಂದು ಸಿನಿಮಾ ಎಂದು ಹೇಳಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಭೈರವನೇ ಕೇಂದ್ರ ಪಾತ್ರ. ಆತ ಮಾಡುವ ಪಾಠ ಯಾವುದು? ಯಾರಿಗೆ? ಏಕೆ? ಅದೇ ಕೊನೆ ಪಾಠ ಎಂದು ಹೇಳ್ತಿರೋದು ಏಕೆ? ಇವೆಲ್ಲವನ್ನೂ ಸಿನಿಮಾ ಟೈಟಲ್ ಹುಟ್ಟುಹಾಕುತ್ತದೆ ಎನ್ನುವುದು ಹೇಮಂತ್ ಅವರ ವಿಶ್ವಾಸ. ಚಿತ್ರಕ್ಕೆ ಉಳಿದ ತಂತ್ರಜ್ಞರು ಹಾಗೂ ಕಲಾವಿದರ ಆಯ್ಕೆ ಇನ್ನೂ ಆಗಬೇಕಿದೆ.
ಹೇಮಂತ್ ಅವರ ಯಾವ ಸಿನಿಮಾಗಳು ಅವರದ್ದೇ ಹಿಂದಿನ ಸಿನಿಮಾ ಶೈಲಿಯಲ್ಲಿ ಇರಲ್ಲ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ತಂದೆ-ಮಗನ ಬಾಂಧವ್ಯದ ಕಥೆ ಇತ್ತು. ಕವಲುದಾರಿಯಲ್ಲಿ ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ ಇತ್ತು. ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ಒಂದು ಮೆಚ್ಯೂರ್ಡ್ ಲವ್ ಸ್ಟೋರಿ ಇತ್ತು. ಈಗ ಭೈರವನ ಕೊನೆಯ ಪಾಠ. ಹೇಮಂತ್ ರಾವ್ ಅವರ ಎಲ್ಲ ಚಿತ್ರಗಳಲ್ಲೂ ಒಂದು ರೀತಿಯ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳಿದ್ದೇ ಇವೆ. ಸಹಜವಾಗಿ ಈ ಚಿತ್ರದಲ್ಲೂ ಅದೇ ರೀತಿಯ ಎಳೆ ಇರುವುದು ಪಕ್ಕಾ. ಉಳಿದಂತೆ.. ಕಾಯಬೇಕಷ್ಟೇ.



