ಶಿವಣ್ಣ ಮತ್ತೆ ಮಚ್ಚು ಹಿಡಿದಿದ್ದಾರೆ. ಓಂ ಚಿತ್ರದಿಂದ ಶುರುವಾದ ಶಿವಣ್ಣ ಮತ್ತು ಮಚ್ಚಿನ ಕಾಂಬಿನೇಷನ್ ಸಕ್ಸಸ್ ನಿಂತೇ ಇಲ್ಲ. ಶಿವಣ್ಣ ಮಚ್ಚು ಹಿಡಿದ ಚಿತ್ರಗಳೆಲ್ಲ ಸೂಪರ್ ಹಿಟ್. ಅದು ಓಂ ಅಷ್ಟೇ ಅಲ್ಲ, ಜೋಗಿ, ಜೋಗಯ್ಯ, ಸಂತ.. ಇತ್ತೀಚಿನ ವೇದ ಚಿತ್ರದವರೆಗೂ ಕಂಟಿನ್ಯೂ ಆಗಿದೆ. ಜೊತೆಗೆ ಶಿವಣ್ಣನ ಇನ್ನೊಂದು ಹೈಲೈಟ್ ಕಣ್ಣು. ಕಣ್ಣು ಮತ್ತು ಮಚ್ಚು ಎರಡನ್ನೂ ಇಟ್ಕೊಂಡು ಸಿನಿಮಾ ಮಾಡಿದ್ದಾರೆ ನರ್ತನ್.
ಭೈರತಿ ರಣಗಲ್. ಎರಡನೇ ಟೀಸರ್ ಹೊರಬಂದಿದೆ. ಮಫ್ತಿ ಚಿತ್ರದ ಪ್ರೀಕ್ವೆಲ್ ಆಗಿರುವ ಚಿತ್ರದ ಈ ಟೀಸರಿನಲ್ಲಿ ಒಂದೇ ಒಂದು ಡೈಲಾಗ್ ಇಲ್ಲ. ಬಹುಶಃ ಉಪೇಂದ್ರ ಬಿಟ್ಟರೆ, ಶಿವರಾಜ್ ಕುಮಾರ್ ಕಣ್ಣುಗಳನ್ನು ಅದ್ಭುತವಾಗಿ ತೆರೆ ಮೇಲೆ ತೋರಿಸಿ, ಗೆದ್ದ ಕೀರ್ತಿ ಸಲ್ಲಬೇಕಿರುವುದು ನಿರ್ದೇಶಕ ನರ್ತನ್ ಅವರಿಗೆ. ಭೈರತಿ ರಣಗಲ್ ಚಿತ್ರದಲ್ಲಿಯೂ ಅದು ಕಂಟಿನ್ಯೂ ಆದಂತಿದೆ. ನವೆಂಬರ್ 15ಕ್ಕೆ ರಿಲೀಸ್ ಆಗುತ್ತಿರುವ ಈ ಬಹುನಿರೀಕ್ಷಿತ ಚಿತ್ರದ ಈ ಟೀಸರಿನಲ್ಲಿ ಕೇವಲ ಕಣ್ಣು ಮಾತನಾಡುತ್ತವೆ. ಜೊತೆಗೆ ಶಿವಣ್ಣ ಕೈಲಿ ಲಾಂಗು ಹಿಡಿದು ನಿಂತಿದ್ದಾರೆ.
ಶಿವರಾಜ್ಕುಮಾರ್ ಅವರು ‘ಮಫ್ತಿ’ ಸಿನಿಮಾದಲ್ಲಿ ಭೈರತಿ ರಣಗಲ್ ಎಂಬ ಪಾತ್ರ ಮಾಡಿದ್ದರು. ಆ ಪಾತ್ರ ಜನರಿಗೆ ತುಂಬ ಇಷ್ಟ ಆಗಿತ್ತು. ಈಗ ಅದೇ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ನರ್ತನ್ ಅವರು ಕಥೆಯನ್ನು ವಿಸ್ತರಿಸಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರದ್ದು ಲಾಯರ್ ಪಾತ್ರ. ಲಾಯರ್ ಕೈಗೆ ಲಾಂಗು ಬರೋದೇಕೆ ಅನ್ನೋದೇ ಚಿತ್ರದ ಸಸ್ಪೆನ್ಸ್ ಹೆಚ್ಚಿಸಿದೆ. ರುಕ್ಮಿಣಿ ವಸಂತ್ ಕೂಡ ಒಂದೇ ಒಂದು ಲುಕ್ಕಿನಲ್ಲಿ ಥ್ರಿಲ್ ಹುಟ್ಟಿಸ್ತಾರೆ. ನವೆಂಬರ್ 15ಕ್ಕೆ ಭೈರತಿ ರಣಗಲ್ ದೊಡ್ಡ ಮಟ್ಟದ ಹಿಟ್ ಆಗುವ ನಿರೀಕ್ಷೆ ಹುಟ್ಟಿಸಿದೆ.
ನರ್ತನ್ ನಿರ್ದೇಶನದ ಮಫ್ತಿ, ಕನ್ನಡದಲ್ಲಿ ಬೇರೆಯದೇ ರೀತಿಯ ಟ್ರೆಂಡ್ ಹುಟ್ಟುಹಾಕಿದ್ದ ಸಿನಿಮಾ. ಸ್ಕ್ರೀನ್ ಪ್ಲೇಯನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದ ಮಫ್ತಿ, ಚಿತ್ರರಂಗದಲ್ಲಿದ್ದ ಕಥೆ ಹೇಳುವ ಶೈಲಿಯನ್ನೇ ಬದಲಿಸಿತ್ತು. ಈಗ ಅದೇ ನರ್ತನ್ ಅವರ ಭೈರತಿ ರಣಗಲ್ ಬರ್ತಾ ಇದೆ. ಗೆಟ್ ರೆಡಿ.



