ಭೈರತಿ ರಣಗಲ್ ಸಿನಿಮಾದ ಕಥೆ ನಿಧಾನವಾಗಿಯೇ ಓಪನ್ ಆಗುತ್ತದೆ. ಹಿನ್ನೆಲೆಯಲ್ಲಿ ರಮೇಶ್ ಅರವಿಂದ್ ಧ್ವನಿ ಆಗಾಗ್ಗೆ ಕೇಳಿಸುತ್ತಾ ಹೋಗುತ್ತದೆ. ಇನ್ನು ಮಫ್ತಿಯಲ್ಲಿ ಬಂದಿದ್ದ ಗಣ ಶ್ರೀಮುರಳಿ ಇಲ್ಲಿಯೂ ಎಂಟ್ರಿ ಕೊಡಬಹುದು ಅನ್ನೋ ನಿರೀಕ್ಷೆ ನಿಜವಾಗಿಲ್ಲ. ಮಫ್ತಿಯಲ್ಲಿನ ಅಣ್ಣ ತಂಗಿ ಸೆಂಟಿಮೆಂಟ್ ಇಲ್ಲೂ ಕಂಟಿನ್ಯೂ ಆಗಿದೆ. ಮಫ್ತಿಯಲ್ಲಿ ತೀವ್ರವಾಗಿ ಕಾಡಿದ್ದಕ್ಕೋ ಏನೋ.. ಇನ್ನೂ ಇನ್ನೂ ಬೇಕಿತ್ತು ಎನಿಸುತ್ತದೆ.. ಇಲ್ಲಿ ಶಿವಣ್ಣಗೆ ಬೆಂಕಿ ಡೈಲಾಗುಗಳಿವೆ. ಮೈಝುಮ್ ಎನ್ನಿಸುವ ಫೈಟ್ಸ್ ಇವೆ. ಆದರೆ ಚಿತ್ರಕ್ಕೊಂದು ಫೈರ್ ಎಂಟ್ರಿ ಕೊಡುವುದು ಇಂಟರ್‌ವೆಲ್ ನಂತರವೇ. ನರ್ತನ್ ಗೆದ್ದಂತಿದೆ.
ಕಥೆಯನ್ನು ತಣ್ಣಗೆ ಹೇಳಿದ್ದಾರೆ ನರ್ತನ್. ಇಲ್ಲಿಯೂ ಒಂದು ವಿಶೇಷ ಅಂದ್ರೆ ಇಲ್ಲಿಯೂ ಅಬ್ಬರವಿಲ್ಲ. ಆರ್ಭಟವಿಲ್ಲ. ಶಿವಣ್ಣ ಕಣ್ಣಲ್ಲೇ ನಟಿಸಿದ್ದಾರೆ. ರುಕ್ಮಿಣಿ ವಸಂತ್‌ಗೆ ಕಥೆಯಲ್ಲಿ ಜಾಸ್ತಿ ಜಾಗವಿಲ್ಲ, ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಇಲ್ಲ. ಕಲಾವಿದರ ಬಳಗ ದೊಡ್ಡದೇ ಇದ್ದರೂ, ಭೈರತಿ ರಣಗಲ್ ಪಾತ್ರವೇ ಇಲ್ಲಿ ಹೈಲೈಟ್ ಆಗಿದ್ದಾರೆ. ರಾಹುಲ್ ಬೋಸ್ ಮತ್ತು ಶಬ್ಬೀರ್ ಕಲ್ಲರಕಲ್ ಇದ್ದುದರಲ್ಲಿ ಒಂದಿಷ್ಟು ಸ್ಕೋಪ್ ಪಡೆಯುತ್ತಾರೆ.
ಮಫ್ತಿಯ ಪ್ರೀಕ್ವೆಲ್ ಕಥೆಯನ್ನು ಶಿವಣ್ಣನ ಅಭಿಮಾನಿಗಳು ಸಖತ್ ಎಂಜಾಯ್ ಮಾಡ್ತಿದ್ದಾರೆ. ‘ಮಫ್ತಿ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಗಣ (ಶ್ರೀಮುರಳಿ), ಭೈರತಿ ರಣಗಲ್ (ಶಿವರಾಜ್ ಕುಮಾರ್) ಸಾಮ್ರಾಜ್ಯಕ್ಕೆ ಲಗ್ಗೆಯಿಟ್ಟು, ಆತನನ್ನು ಸಾಕ್ಷಿಸಮೇತ ಅರೆಸ್ಟ್ ಮಾಡಿರುತ್ತಾನೆ. ಅಲ್ಲಿಗೆ ಸಿನಿಮಾ ಮುಕ್ತಾಯವಾಗಿರುತ್ತದೆ. ಈಗ ಭೈರತಿ ರಣಗಲ್ ಹಿನ್ನೆಲೆ ಹೇಳಿದ್ದಾರೆ. ಸಾವಿರಾರು ಜನರ ಪಾಲಿಗೆ ದೇವರಾಗಿರುವ ಭೈರತಿ ರಣಗಲ್ ಈ ಮೊದಲು ಏನಾಗಿದ್ದ? ಆತನ ಬಾಲ್ಯ ಹೇಗಿತ್ತು? ಡಾನ್ ರೀತಿ ಆತ ಬೆಳೆದು ನಿಂತಿದ್ದು ಹೇಗೆ? ಅವನ ಪರ್ಸನಲ್ ಲೈಫ್ ಯಾವ ರೀತಿ ಇತ್ತು ಎಂಬ ಕಥೆ ಚಿತ್ರದಲ್ಲಿದೆ.
ಭೈರತಿ ರಣಗಲ್ ಕಥೆ
21 ವರ್ಷಗಳ ಹಿಂದೆ ರಣಗಲ್ ಬಾಲಕನಾಗಿದ್ದಾಗ ಊರಿನಲ್ಲಿ ನೀರಿಗಾಗಿ ಹಾಹಾಕಾರ ನಡೆಯುತ್ತಿರುತ್ತದೆ. ಸರ್ಕಾರಕ್ಕೆ ಎಷ್ಟೇ ಅರ್ಜಿ ಸಲ್ಲಿಸಿದರೂ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬೇಸತ್ತ ಬಾಲಕ ರಣಗಲ್ ಸರ್ಕಾರಿ ಕಛೇರಿಗೆ ಬಾಂಬ್ ಇಟ್ಟು 6 ಜನರನ್ನು ಕೊಲ್ಲುತ್ತಾನೆ. ಮಾಡಿದ ತಪ್ಪಿಗೆ 21 ವರ್ಷ ಶಿಕ್ಷೆ ಆಗುತ್ತದೆ. ಆದರೆ ಅವನಿಂದಾಗಿ ರೋಣಾಪುರಕ್ಕೆ ನೀರು ಬರುವಂತಾಗುತ್ತದೆ. ಈ ಪ್ರಯತ್ನದಲ್ಲಿ ಕಬ್ಬಿಣ್ಣದ ನಿಕ್ಷೇಪ ಇರುವುದು ಪತ್ತೆಯಾಗುತ್ತದೆ. ಅಲ್ಲಿಂದ ಅಕ್ರಮ ಗಣಿಗಾರಿಕೆ ಶುರುವಾಗುತ್ತದೆ. ರೋಣಾಪುರದವರೆಲ್ಲ ಅಕ್ರಮ ಗಣಿಗಾರಿಕೆಯ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಜೈಲಿನಲ್ಲೇ ಓದಿ ವಕೀನಾಗುವ ರಣಗಲ್ ಹೊರಗರ ಬರುವ ವೇಳೆಗೆ ಖಳರು ಆರ್ಭಟಿಸುತ್ತಿರುತ್ತಾರೆ. ಅವರ ಬೆಂಬಲಕ್ಕೆ ನಿಲ್ಲುವ ರಣಗಲ್, ಕಾನೂನಿನ ಮೊರೆ ಹೋಗುತ್ತಾನೆ. ಆದರೆ ಕೋರ್ಟಿನಲ್ಲಿ ಗೆಲ್ಲಲಾಗದೆ ಲಾಂಗು ಹಿಡಿಯುತ್ತಾನೆ. ಮುಂದೆ ಭೈರತಿ ರಣಗಲ್ ಖಳನಾಯಕನಂತೆಯೇ ಮೈನಿಂಗ್ ಸಾಮ್ರಾಜ್ಯ ಕಟ್ಟುತ್ತಾನೆ. ಸರ್ಕಾರವನ್ನೇ ಕಂಟ್ರೋಲ್ ಮಾಡುವ ಹಂತಕ್ಕೆ ಬರುತ್ತಾನೆ. ಮುಂದೆ.. ಮುಂದಿನ ಕಥೆ ಮಫ್ತಿಯಲ್ಲಿದೆ.
ಮೊದಲ ದಿನವೇ ಭರ್ಜರಿ ಕಲೆಕ್ಷನ್ ಆಗಿದ್ದು, ಸುಮಾರು 50 ಸಾವಿರ ಟಿಕೆಟ್ಸ್ ಸೇಲ್ ಆಗಿವೆ. ಆದರೆ ಎಷ್ಟು ದುಡ್ಡು ಎಂಬ ಬಗ್ಗೆ ಮಾಹಿತಿ ಇಲ್ಲ. ಬುಕ್ ಮೈ ಶೋ ಅಧಿಕೃತ ಲೆಕ್ಕದ ಪ್ರಕಾರವೇ 47 ಸಾವಿರ ಟಿಕೆಟ್ಸ್ ಬುಕ್ ಆಗಿವೆ. ಎರಡನೇ ದಿನವೂ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಗೀತಾ ಪಿಕ್ಚರ್ಸ್ ಅಧಿಕೃತ ಖಾತೆ ಮೂಲವೇ ಇದು ಶೇರ್ ಆಗಿದೆ.



