ರಾಜ್ಯದಲ್ಲೀಗ ಎಲ್ಲಿ ನೋಡಿದರೂ RSS ವಿವಾದವೇ ಪ್ರತಿಧ್ವನಿಸುತ್ತಿದೆ. ಪ್ರಿಯಾಂಕ್ ಖರ್ಗೆ ಅವರಂತೂ ಹೋದಲಿ ಬಂದಲ್ಲಿ RSS ವಿಷಯವನ್ನೇ ಮಾತನಾಡುತ್ತಿದ್ದಾರೆ. ಸರ್ಕಾರಕ್ಕೆ ಅದರಲ್ಲೂ ಸಿಎಂ ಸಿದ್ಧರಾಮಯ್ಯನವರಿಗೆ ಪತ್ರ ಬರೆದಿದ್ದು, ಆ ಪತ್ರ ಬರೆದು ವಾರದ ಮೇಲೆ ಪತ್ರವನ್ನು ಬಹಿರಂಗ ಪಡಿಸಿದ್ದರ ಹಿಂದೆಯೂ ರಾಜಕೀಯ ತಂತ್ರಗಾರಿಕೆಯೇ ಇದೆ ಎನ್ನಲಾಗುತ್ತಿದೆ.
ಸೈಡಿಗೆ ಹೋಯ್ತು ಮುಸುಕಿನ ಗುದ್ದಾಟ
ಏಕೆಂದರೆ.. ಪತ್ರ ಬಹಿರಂಗವಾಗುವ ವೇಳೆಗೆ ಸಿದ್ದು-ಡಿಕೆ ʻಮುಸುಕಿನ ಗುದ್ದಾಟʼ ತೀವ್ರ ಸ್ವರೂಪ ಪಡೆಯುತ್ತಿತ್ತು. RSS ವಿವಾದ ಬಂದ ಕಾರಣ, RSS ವಿವಾದವೇ ಮಾಧ್ಯಮಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗೋಕೆ ಶುರುವಾಯ್ತು.
ಸೈಡಿಗೆ ಹೋಯ್ತು ರಸ್ತೆ ಗುಂಡಿ
ಇನ್ನು ರಸ್ತೆ ಗುಂಡಿಯ ವಿಷಯವನ್ನಂತೂ ಮಾಧ್ಯಮಗಳು ಮರೆತೇಬಿಟ್ಟವು. RSS ಗಲಾಟೆಯ ನಡುವೆ ಇಬ್ಬರು ರಸ್ತೆ ಗುಂಡಿಗೆ ಬಲಿಯಾದರೂ ಸುದ್ದಿಯಾಗಲೇ ಇಲ್ಲ. ಅಷ್ಟರಮಟ್ಟಿಗೆ RSS ವಿವಾದ ಆವರಿಸಿಕೊಂಡು ಬಿಟ್ಟಿತ್ತು.
ನೆನಪೇ ಆಗಲಿಲ್ಲ ಉತ್ತರ ಕರ್ನಾಟಕ ಪ್ರವಾಹ ಪರಿಹಾರ
ಉತ್ತರ ಕರ್ನಾಟಕದವರಿಗೆ ಇದು ಹೊಸದಲ್ಲ. ಅವರು ಅಲ್ಲಿನ ರಾಜಕಾರಣಿಗಳಿಗೆ ನೆನಪಾಗುವುದೇ ವೋಟು ಹಾಕುವ ದಿನ ಹತ್ತಿರವಾದಾಗ. ವಿಶೇಷ ಎಂದರೆ ಅಲ್ಲಿ ಪ್ರವಾಹ ಬಂದಿತ್ತು. ಬದುಕು ಬೀದಿಗೆ ಬಂದಿತ್ತು ಎಂಬ ವಿಷಯವನ್ನೇ ಜನ ಮರೆತು ಬಿಟ್ಟಿದ್ದಾರೆ. ಪರಿಹಾರ ಇವತ್ತಿಗೂ ಸಿಕ್ಕಿಲ್ಲ.
ಬಿ/ಎ ಖಾತಾ, ಜಿಬಿಎ ಚರ್ಚೆಯಾಯ್ತಾ..?
ಇನ್ನು ಬೆಂಗಳೂರು ಜನರಿಗೆ ಬಿ ಖಾತಾವನ್ನು ಎ ಖಾತಾ ಆಗಿ ಬದಲಿಸುವ ನಿರ್ಧಾರ ಹೊರಬಿತ್ತು. ಈ RSS ಗಲಾಟೆಯಲ್ಲಿ ಇದರಿಂದ ಜನರಿಗೆ ಲಾಭವೋ.. ನಷ್ಟವೋ. ಎಂಬ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ.. ಲಕ್ಷಾಂತರ ಜನರ ಹಣೆಬರಹ ನಿರ್ಧಾರ ಮಾಡುವ ವಿಷಯ ಚರ್ಚೆಗೇ ಬರಲಿಲ್ಲ. ಇನ್ನು ಬಿಬಿಎಂಪಿ ಹೋಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಗುವುದರಿಂದ ಆಗುವ ಲಾಭವೇನು ಎಂಬ ಬಗ್ಗೆಯೂ ಚರ್ಚೆಯಾಗಲಿಲ್ಲ.
ಭಿನ್ನಮತ ದೊಡ್ಡ ಚರ್ಚೆಯಾಗುತ್ತಿಲ್ಲ..!
ರಾಜ್ಯದಲ್ಲೀಗ ಕಾಂಗ್ರೆಸ್ V/S ಕಾಂಗ್ರೆಸ್ ಆಗಿರುವುದು ನಿರ್ವಿವಾದ. ಯತೀಂದ್ರ, ಸತೀಶ್ ಜಾರಕಿಹೊಳಿ, ಪರಮೇಶ್ವರ್, ಮಹದೇವಪ್ಪ, ಜಮೀರ್ ಅಹ್ಮದ್.. ಇವರೆಲ್ಲ ಒಂದು ಕಡೆಯಿಂದ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡ್ತಾ ಇದ್ರೆ, ಕುಣಿಗಲ್ ರಂಗನಾಥ್, ಇಕ್ಬಾಲ್ ಹುಸೇನ್, ಕದಲೂರು ಉದಯ್, ಶಿವಗಂಗಾ ಬಸವರಾಜ್.. ಇವರೆಲ್ಲ ಡಿಕೆ ಪರ ನಿಂತಿದ್ದಾರೆ. ಆದರೆ.. ರಾಜ್ಯದಲಿ ಕಾಂಗ್ರೆಸ್ V/S ಕಾಂಗ್ರೆಸ್ ಗಲಾಟೆ.. RSS ವಿವಾದದಲ್ಲಿ ಮುಚ್ಚಿ ಹೋಗಿದೆ.
ಪ್ರತಿಪಕ್ಷದ ವೈಫಲ್ಯದ ಸದ್ದೂ ಇಲ್ಲ..!
ಇನ್ನು ರಾಜ್ಯದಲ್ಲಿ ಪ್ರತಿಪಕ್ಷ ಎಂದು ಬಿಜೆಪಿ ಇದೆ. ಜೆಡಿಎಸ್ ಇದೆ. ಆದರೆ.. ಯಾವ ಪಕ್ಷಗಳೂ ಸದ್ದು ಸುದ್ದಿ ಮಾಡ್ತಿಲ್ಲ. ಅವು ಅಸ್ಥಿತ್ವದಲ್ಲಿ ಇವೆಯೋ.. ಇಲ್ಲವೋ.. ಗೊತ್ತಾಗುತ್ತಿಲ್ಲ. ಅವರು ಮೀಡಿಯಾ ಮುಂದೆ ಮೈಕುಗಳ ಮುಂದೆ ʻಉಗ್ರ ವೋರಾಟʼದಲ್ಲಿ ಬ್ಯುಸಿಯಾಗಿದ್ದಾರೆ.
ಎಲ್ಲವನ್ನೂ ಮಸಿ ನುಂಗಿತು ಎನ್ನುವಂತೆ RSS ಮ್ಯಾಟರ್ ಬಂದು.. ಎಲ್ಲವನ್ನೂ ಮುಚ್ಚಿ ಹಾಕಿದೆ.



