ಇಂಡಿಯಾ ಟುಡೇ ನ್ಯೂಸ್ ಚಾನೆಲ್ಲಿನ ಶಿವ್ ಅರೂರ್ ಅವರ ವಿಶ್ಲೇಷಣಾತ್ಮಕ ವರದಿಯನ್ನು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ, ಎಚ್ಚರಿಕೆ ಎಂದು ಟ್ವೀಟ್ ಮಾಡಿದ್ಧಾರೆ. ಚುನಾವಣೆ ಸೋತ ನಂತರ ಮತ್ತೊಮ್ಮೆ ಇವಿಎಂ ಹ್ಯಾಕ್ ಮಾತು ಕೇಳಿ ಬರುತ್ತಿದ್ದು, ದಕ್ಷಿಣ ಭಾರತ ಮತ್ತು ಉತ್ತರ ಭಾರತ ವಿಂಗಡಿಸಿ ನೋಡಲಾಗುತ್ತಿದೆ. ಕಾಂಗ್ರೆಸ್ ದೊಡ್ಡ ದೊಡ್ಡ ನಾಯಕರೇ ಕಮಲ್ʻನಾಥ್, ದಿಗ್ವಿಜಯ್ ಸಿಂಗ್, ಪಿ.ಚಿದಂಬರಂ ಪುತ್ರ ಮೊದಲಾದವರು ದಕ್ಷಿಣ ಭಾರತ, ಉತ್ತರ ಭಾರತ, ಇವಿಎಂ ಹ್ಯಾಕ್ ಎಂದೆಲ್ಲ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ನಡೆದ 5 ರಾಜ್ಯಗಳ ಎಲೆಕ್ಷನ್ನಿನಲ್ಲಿ 3ರಲ್ಲಿ ಬಿಜೆಪಿ ಗೆದ್ದಿದ್ದೇ ಈ ಎಲ್ಲ ಟೀಕೆಗಳಿಗೆ ಕಾರಣ. ಕಾಂಗ್ರೆಸ್ ಕೂಡಾ ಒಂದು ರಾಜ್ಯ ಗೆದ್ದಿದೆ. ಮಿಜೋರಾಂನಲ್ಲಿ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷ ಅಧಿಕಾರಕ್ಕೆ ಬಂದಿದೆ.
ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಮೋದಿ, ‘ಕಾಂಗ್ರೆಸ್ ಪಕ್ಷವು ಸದಾ ನಿರ್ಲಕ್ಷ್ಯ, ಸುಳ್ಳು, ಉಡಾಫೆ, ನಿರಾಶಾವಾದದಲ್ಲೇ ಸಂತೋಷವನ್ನು ಕಾಣಲಿ. ಆದರೆ ಜನತೆ ಅವರ ರಕ್ತದಲ್ಲಿ ಹುದುಗಿರುವ ಒಡೆದು ಆಳುವ ನೀತಿಯಿಂದ ಎಚ್ಚರದಿಂದಿರಬೇಕು. ಹಾಗೆಯೇ ಜನತೆಯು ಇದೇ ರೀತಿ ಮತ್ತಷ್ಟು ಅಹಂಕಾರವೆಂಬ ಮಂಜುಗಡ್ಡೆಯನ್ನು ಬುದ್ಧಿವಂತಿಕೆಯಿಂದ ಕರಗಿಸುವ ದಿನಗಳು ಮುಂದೆ ಬರಲಿವೆ’ ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದವರು 70 ವರ್ಷಗಳಿಂದ ಮಾಡುತ್ತಾ ಬಂದಿರುವುದೇ ಇದು. ಅಷ್ಟು ಸುಲಭವಾಗಿ ಚಾಳಿ ಹೋಗಲ್ಲ ಎಂದಿದ್ದಾರೆ.
ಅಲ್ಲದೆ ಸಂಸತ್ ಅಧಿವೇಶನದಲ್ಲಿಯೂ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ, ಇದು ವಿರೋಧ ಪಕ್ಷಗಳಿಗೆ ಸಿಕ್ಕಿರುವ ಸುವರ್ಣ ಅವಕಾಶ ಎನ್ನುತ್ತೇನೆ. ಅವರು ಕಳೆದ 9 ವರ್ಷಗಳಿಂದ ಹೊಂದಿರುವ ನಕಾರಾತ್ಮಕತೆಯನ್ನು ತೊಡೆದು ಹಾಕಬೇಕು ಮತ್ತು ಸಕಾರಾತ್ಮಕತೆಯಲ್ಲಿ ನಡೆಯಬೇಕು. ದಯವಿಟ್ಟು ಸಂಸತ್‌ನಲ್ಲಿ ಸೋಲಿನ ಹತಾಶೆಯನ್ನು ಪ್ರದರ್ಶಿಸಬೇಡಿ ಎಂದು ಮನವಿ ಮಾಡಿದ್ಧಾರೆ.
ದೇಶದಲ್ಲಿ ಇರುವುದು ನಾಲ್ಕು ಜಾತಿಗಳು ಮಾತ್ರ- ಮಹಿಳೆಯರು, ಯುವಜನರು, ರೈತರು ಮತ್ತು ಬಡವರು. ಸಮರ್ಪಕ ನೀತಿಗಳು ಮತ್ತು ಕೊನೆಯ ಅಂಚಿನವರೆಗೂ ತಲುಪಿಸುವ ಮೂಲಕ ಈ ಸಮುದಾಯಗಳ ಸಬಲೀಕರಣಕ್ಕೆ ಗಮನ ಹರಿಸಿದವರಿಗೆ ಸಾಕಷ್ಟು ಬೆಂಬಲ ಸಿಗುತ್ತದೆ. ಉತ್ತಮ ಆಡಳಿತವಾಗಿದ್ದರೆ, ಆಡಳಿತ ವಿರೋಧಿ ಸನ್ನಿವೇಶ ಎನ್ನುವುದು ಅಪ್ರಸ್ತುತವಾಗುತ್ತದೆ ಎಂದು ಮೋದಿ ತಿಳಿಸಿದರು. ಈ ಮೂಲಕ ವಿಧಾನಸಭ ಚುನಾವಣೆಗಳಲ್ಲಿ ಜಾತಿ ಗಣತಿಯ ಅಸ್ತ್ರ ಪ್ರಯೋಗಿಸಿ ವಿಫಲವಾದ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ಧಾರೆ.



