ಸುಳ್ಳು ಸುದ್ದಿಗಳ (Fake news) ಹಾವಳಿ ಮಿತಿ ಮೀರುತ್ತಿದೆ. ಎಷ್ಟೋ ಬಾರಿ ಘಟನೆಯೇ ನಡೆದಿರುವುದಿಲ್ಲ. ಯಾರೂ ಹೇಳಿಕೆಯನ್ನೇ ಕೊಟ್ಟಿರುವುದಿಲ್ಲ. ಆದರೂ ಅವರು ಹಂಗಂದ್ರು..ಇವರು ಹಿಂಗಂದ್ರು ಅನ್ನೋ ಸುಳ್ಳು ಸುದ್ದಿಗಳಿಗೆ ಬರವಿಲ್ಲ. ಮಣಿಪುರದಂತಾ (Manipur riots) ಒಂದು ರಾಜ್ಯ ಹೊತ್ತಿ ಉರಿದಿದ್ದೇ ಇಂತಹ ಸುಳ್ಳು ಸುದ್ದಿಯಿಂದ (Fake news) ಎನ್ನುವುದು ಅಷ್ಟೇ ಸತ್ಯ. ಹೀಗಿರುವಾಗಲೇ ರಾಜ್ಯ ಸರ್ಕಾರ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಹೊಸ ಮಾರ್ಗಸೂಚಿ ಸಿದ್ಧಪಡಿಸಿಕೊಂಡಿದೆ. ಅಷ್ಟೆ ಅಲ್ಲ, 3 ವಿಶೇಷ ತಂಡಗಳನ್ನೂ ರಚನೆ ಮಾಡಿದೆ. ವಿಶೇಷವೆಂದರೆ ಇದನ್ನು ಮಾಡುವುದಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದರು ಎನ್ನುವ ಮೂಲಕ, ಎದುರಾಳಿಗಳ ಟೀಕೆಗೂ ಅಲ್ಲಿಯೇ ಉತ್ತರವನ್ನೂ ಕೊಟ್ಟಿದೆ.
ಸಾಮಾಜಿಕ ಜಾಲತಾಣಗಳಲ್ಲಿ (social media) ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಹೊಸ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಶೀಘ್ರದಲ್ಲಿ ಪ್ರತ್ಯೇಕ ತಂಡ ರಚಿಸಿ ಆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ಪ್ರಮುಖವಾಗಿ ತಪ್ಪು ಮಾಹಿತಿ ಹರಡುವುದು, ಸಮಾಜದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತಹ ಸುದ್ದಿಗಳನ್ನು ಹಂಚಿಕೊಂಡರೆ ಅದನ್ನು ಪತ್ತೆ ಹಚ್ಚಿ, ಅದರ ಬಗ್ಗೆ ಜನರನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiah) ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr.G Parameshwar) ಅವರು ಈ ವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಿದ್ದು, ಜಾರಿಗೆ ಅನುಮತಿಸಿದ್ದಾರೆ. ಆದರೂ ಕೆಲ ಸಣ್ಣಪುಟ್ಟ ಕೆಲಸಗಳಿದ್ದು ಅದನ್ನು ಪೂರ್ಣಗೊಳಿಸಿ ಶೀಘ್ರದಲ್ಲಿ ಜಾರಿ ಮಾಡಲಾಗುವುದು ಎಂದಿದ್ದಾರೆ ಪ್ರಿಯಾಂಕ್ ಖರ್ಗೆ.
ಮೂರು ತಂಡ.. ಮೂರು ಕೆಲಸ.. ಒಂದೇ ಉದ್ದೇಶ : ಸುಳ್ಳು ಸುದ್ದಿ ಪತ್ತೆ ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಲು ಮೂರು ತಂಡಗಳನ್ನು ರಚಿಸಲಾಗುವುದು. ಸುಳ್ಳು ಸುದ್ದಿ ಪತ್ತೆ ಮಾಡಿ, ಅದರ ಸತ್ಯಾಸತ್ಯತೆ ಪರಿಶೀಲಿಸಲು ಫ್ಯಾಕ್ಟ್ಚೆಕ್ (Fact check)ತಂಡ, ಅದಾದ ನಂತರ ಫ್ಯಾಕ್ಟ್ಚೆಕ್ ತಂಡ ಸುಳ್ಳು ಸುದ್ದಿ ಪತ್ತೆ ಮಾಡಿರುವುದು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಅನಾಲಿಟಿಕ್ (Fake news anolysis) ತಂಡ ಹಾಗೂ ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೆಪಾಸಿಟಿ ಬಿಲ್ಡಿಂಗ್ ತಂಡವನ್ನು ರಚಿಸಲಾಗುವುದು . 3 ತಂಡಗಳ ಮೇಲುಸ್ತುವಾರಿಗೆ ಓವರ್ಸೈಟ್ ಸಮಿತಿ, ಆ ಸಮಿತಿ ಮಾಡುವ ಶಿಫಾರಸುಗಳನ್ನು ಪರಿಶೀಲಿಸಲು ರಿವ್ಯೂ ಎಸ್ಪಿಒಸಿ ಸಮಿತಿ ಹಾಗೂ ಉಳಿದೆರಡು ಸಮಿತಿಗಳು ಮಾಡುವ ಶಿಫಾರಸುಗಳನ್ನು ಸುಳ್ಳು ಸುದ್ದಿ ಪತ್ತೆ ಹಾಗೂ ಜಾಗೃತಿಗಾಗಿ ರಚಿಸಲಾಗಿರುವ ಮೂರು ತಂಡಗಳೊಂದಿಗೆ ಸಮನ್ವಯ ಸಾಧಿಸಲು ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗುತ್ತದೆ . ಓವರ್ಸೈಟ್ ಸಮಿತಿಯಲ್ಲಿ ಐಟಿ-ಬಿಟಿ ಇಲಾಖೆಯ ಮುಖ್ಯಸ್ಥರು (IT BT heads), ಗುಪ್ತಚರ ಇಲಾಖೆ ಎಡಿಜಿಪಿ (Intelligence) ಅಥವಾ ಸಿಐಡಿ ಎಡಿಜಿಪಿ (CID ADGP), ಡಿಐಪಿಆರ್ನ ಪ್ರತಿನಿಧಿ, ಕೈಟ್ಸ್ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ, ಐಐಎಸ್ಸಿಯ ಇಇಸಿಎಸ್ ವಿಭಾಗದ ಡೀನ್, ಹೆಚ್ಚುವರಿ ಅಡ್ವೋಕೇಟ್ ಜನರಲ್, ಸಿವಿಕ್ ಸೊಸೈಟಿಯ ಪ್ರತಿನಿಧಿಗಳು ಸದಸ್ಯರಾಗಿರಲಿದ್ದಾರೆ. ಅದೇ ರೀತಿ ರಿವೀವ್ ಎಸ್ಪಿಒಸಿಯಲ್ಲಿ ಗುಪ್ತಚರ ಇಲಾಖೆಯ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಗೃಹ ಇಲಾಖೆ ಸೂಚಿಸುವಂತಹ ಅಧಿಕಾರಿಗಳು ಸದಸ್ಯರಾಗಿರಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸರ್ಕಾರ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಬರುವಂತೆ ಮಾಡಲಾಗುವ ಪೋಸ್ಟ್ಗಳನ್ನಷ್ಟೇ ಪರಿಶೀಲನೆ ನಡೆಸಲಾಗುವುದು. ರಾಜಕೀಯ ಅಥವಾ ವೈಯಕ್ತಿಕ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸುವುದಿಲ್ಲ. ಮೂರು ಹಂತದಲ್ಲಿ ಪರಿಶೀಲಿಸಲಾಗುತ್ತಿದ್ದು, ತಪ್ಪು ಮಾಹಿತಿ ನೀಡುವುದು, ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಹರಡುವುದು ಹಾಗೂ ಸಮಾಜದಲ್ಲಿ ಗಲಭೆ ಉಂಟಾಗುವುದಕ್ಕೆ ಕಾರಣವಾಗುವಂತಹ ಸುಳ್ಳು ಪೋಸ್ಟ್ಗಳನ್ನು ಪತ್ತೆ ಮಾಡಲಾಗುತ್ತದೆ. ಹೀಗೆ ಪತ್ತೆ ಮಾಡುವ ಸುಳ್ಳು ಸುದ್ದಿಯನ್ನೊಳಗೊಂಡ ಪೋಸ್ಟ್ಗಳನ್ನು ಗುರುತು ಮಾಡಿ ಅವುಗಳನ್ನು ನಂಬದಂತೆ ಜನರಿಗೆ ತಿಳಿಸಲಾಗುವುದು. ಅಲ್ಲದೆ, ಸಮಾಜದ ಸಾಮರಸ್ಯ ಕದಡುವುದಕ್ಕಾಗಿಯೇ ಸುಳ್ಳು ಸುದ್ದಿ (Fake news) ಪೋಸ್ಟ್ ಮಾಡುವವರ ವಿರುದ್ಧ ಸರ್ಕಾರ ಕಾನೂನು ರೀತಿ ಕ್ರಮ ಕೈಗೊಳ್ಳಲಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.
ಸುಳ್ಳು ಸುದ್ದಿ ಪತ್ತೆ ಮಾಡುವ ಕಾರ್ಯಕ್ಕೆ ಯಾವುದೇ ರೀತಿಯ ಹೊಸ ಕಾಯ್ದೆ ಅಥವಾ ಈಗಿರುವ ಕಾಯ್ದೆಗೆ ತಿದ್ದುಪಡಿ ತರುವುದಿಲ್ಲ. ಬದಲಿಗೆ ಈಗಾಗಲೇ ಚಾಲ್ತಿಯಲ್ಲಿರುವ ಕಾಯ್ದೆಗಳನ್ನು ಬಳಸಿ ಕೆಲಸ ಮಾಡಲಾಗುವುದು. ಐಟಿ ಕಾಯ್ದೆ 2000, ಐಟಿ ಕಾಯ್ದೆ (ತಿದ್ದುಪಡಿ) 2008, ಇಂಡಿಯಲ್ ಪೀನಲ್ ಕೋಡ್, ನೈಸರ್ಗಿಕ ವಿಕೋಪ ನಿರ್ವಹಣೆ ಕಾಯ್ದೆ 2005ರ ಅಡಿಯಲ್ಲಿ ಕೆಲಸ ಮಾಡಲಾಗುತ್ತದೆ ಎಂದು ಪ್ರಿಯಾಂಕ್ ಹೇಳಿದರು.
ಪ್ರಧಾನಿ ಸೂಚನೆಯಂತೆ ಕೆಲಸ ಮಾಡಿದ್ದೇವೆ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದರ ವಿರುದ್ಧ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು (CJI-Chief justice of india), ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು (Election commission) ಸೇರಿದಂತೆ ಹಲವರು ಈ ಹಿಂದೆ ಕಳವಳ ವ್ಯಕ್ತಪಡಿಸಿದ್ದಾರೆ. ಸುಳ್ಳು ಸುದ್ದಿ ಹರಡುವುದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ (PM Narendra modi) ಅವರು 2022ರ ಅಕ್ಟೋಬರ್ 22ರಂದು ಟ್ವೀಟ್ ಮಾಡಿ ಸುಳ್ಳು ಸುದ್ದಿಯ ಫ್ಯಾಕ್ಟ್ ಚೆಕ್ ಮಾಡುವುದು ಅತ್ಯವಶ್ಯ ಎಂದು ತಿಳಿಸಿದ್ದರು. ಅವರ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.



