30X40 ಸೈಟಿನ 3 ಫ್ಲೋರ್ ಕಟ್ಟಡಗಳಿಗೆ ಓಸಿ ವಿನಾಯ್ತಿಯಂತೆ..! ಇದಿನ್ನೂ ಪ್ರಸ್ತಾಪವಷ್ಟೇ, ಆದೇಶ ಇನ್ನೂ ಆಗಿಲ್ಲ.
ರಾಜ್ಯ ಸರ್ಕಾರಕ್ಕೆ ನಗರಾಭಿವೃದ್ಧಿ ಇಲಾಖೆ ಒಂದು ಪ್ರಸ್ತಾಪ ಸಲ್ಲಿಸಿದೆ. 1200 ಚದರಡಿ ನಿವೇಶನದಲ್ಲಿ ಮೂರಂತಸ್ತಿನ ಕಟ್ಟಡಗಳಿಗೆ ‘ಓಸಿ’ ಯಿಂದ ವಿನಾಯ್ತಿ ನೀಡಲು ‘ಮಾದರಿ ಕಟ್ಟಡ ಬೈಲಾ’ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆ ತೀರ್ಮಾನಿಸಿದೆ. ಇದಿನ್ನೂ ಪ್ರಸ್ತಾಪವಷ್ಟೇ, ಆದೇಶ ಇನ್ನೂ ಆಗಿಲ್ಲ. ವಾಸ್ತವದಲ್ಲಿ ಸರ್ಕಾರದಲ್ಲಿ ಬಿಬಿಎಂಪಿಯವರು ಸದ್ಯಕ್ಕೆ ಯಾವುದೇ ಒಸಿ ಕೊಡುತ್ತಿಲ್ಲ. ಒಸಿ ಎಂದರೆ ಸ್ವಾಧೀನಾನುಭವ ಪತ್ರ. ಆಕ್ಯುಪೇಷನ್ ಸರ್ಟಿಫಿಕೇಟ್. ಆದರೆ BWSSBಯವರು ಒಸಿ ಇಲ್ಲ ಎಂಬ ನೆಪ ಹೇಳಿ ದಂಡ ಹಾಕುತ್ತಿದ್ದಾರೆ.
ವಾಸ್ತವವಾಗಿ ಬೆಂಗಳೂರಿನ ಬಹುತೇಕ ಕಟ್ಟಡಗಳಿಗೆ ಒಸಿ ಇಲ್ಲ. ಇತ್ತೀಚೆಗೆ ಕಟ್ಟಡ ನಿರ್ಮಾಣ ಪ್ರಮಾಣ ಪತ್ರ (ಸಿಸಿ), ಸ್ವಾಧೀನಾನುಭವ ಪ್ರಮಾಣ ಪತ್ರ (ಓಸಿ) ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸದಂತೆ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ BWSSB ಸೀನಿಯರ್ ಅಧಿಕಾರಿಗಳು ಛಂಗನೆ ಎದ್ದು ಕುಳಿತಿದ್ದಾರೆ. ಆದರೆ.. ಬಿಬಿಎಂಪಿಯವರು ಒಸಿಯನ್ನೇ ಕೊಡುತ್ತಿಲ್ಲ ಎಂಬುದನ್ನು ಮರೆತು, ಸಿಕ್ಕ ಸಿಕ್ಕವರಿಗೆ ದಂಡ ದಂಡ ದಂಡ.. ಇಲ್ಲದಿದ್ರೆ ಗೊತ್ತಲ್ಲ ಎಂದು ದಂಡ ಹಾಕುತ್ತಿದ್ದಾರೆ.
ಶತದಡ್ಡ ಅಧಿಕಾರಿಗಳೂ ಅಷ್ಟೇ, ಆದೇಶ ಬಂದಿದೆ.. ನಾವು ಫಾಲೋ ಮಾಡ್ತೇವೆ ಅಂತ ಕುಳಿತಿದ್ದಾರೆ. ಧಿಮ್ಮಲೆ ರಂಗ ಅಂತಾ ರೊಚ್ಚಿಗೆದ್ದಿರೋ ಅಧಿಕಾರಿಗಳಿಗೆ ಇದು ಹೇಗೆ ಸಾಧ್ಯ ಎಂಬುದೂ ಅರ್ಥವಾಗುತ್ತಿಲ್ಲ. ವಾಸ್ತವವಾಗಿ ಒಸಿ ಕೊಡುತ್ತಿಲ್ಲ. ಇನ್ನು ಬಿ ಖಾತೆದಾರರಿಗೆ ಒಸಿ ಅಗತ್ಯವೇ ಬರುವುದಿಲ್ಲ. ಮೂರನೆಯದಾಗಿ ಈಗಾಗಲೇ ಕಟ್ಟಿ ವರ್ಷಗಗಳಾಗಿರುವವರಿಗೆ ಒಸಿ ಅಗತ್ಯವೇ ಬರುವುದಿಲ್ಲ. ಇದೆಲ್ಲವೂ ಗೊತ್ತಿದ್ದೂ.. BWSSB ಆಫೀಸರ್ಸ್ ತುಘಲಕ್ ದರ್ಬಾರ್ ಮಾಡ್ತಿದ್ದಾರೆ.
ಈಗ ಜನರಿಗೆ ಏನೋ ಉಪಕಾರ ಮಾಡುತ್ತಿದ್ದೇವೆ ಎಂಬಂತೆ.. 1200 ಚದರಡಿ ನಿವೇಶನದಲ್ಲಿ ಮೂರಂತಸ್ತಿನ ಕಟ್ಟಡಗಳಿಗೆ ‘ಓಸಿ’ ಯಿಂದ ವಿನಾಯ್ತಿ ನೀಡಲು ‘ಮಾದರಿ ಕಟ್ಟಡ ಬೈಲಾ’ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
1,200 ಚದರಡಿ ವಿಸ್ತೀರ್ಣದ ನಿವೇಶನದಲ್ಲಿ ನೆಲ ಅಂತಸ್ತು ಹಾಗೂ ಎರಡು ಅಂತಸ್ತು ಅಥವಾ ಸ್ಟಿಲ್ಟ್ ಪಾರ್ಕಿಂಗ್ ಮತ್ತು ಮೂರು ಅಂತಸ್ತು ವರೆಗಿನ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯ್ತಿ ನೀಡಲಾಗುತ್ತದೆ. ಜಿಬಿಎ-2024 ಕಾಯ್ದೆಯಲ್ಲಿ ಓಸಿಗೆ ವಿನಾಯಿತಿ ನೀಡಲು ಸರ್ಕಾರ ಅಧಿಸೂಚನೆ ಹೊರಡಿಸಬಹುದು ಎಂದು ಸೆಕ್ಷನ್ 241(7)ರಲ್ಲಿ ಹೇಳಲಾಗಿದೆ. ಆದರೆ, ಬಿಬಿಎಂಪಿ ಕಾಯ್ದೆ–2020, ಕೆಎಂಸಿ-1976 ಕಾಯ್ದೆ, ಕರ್ನಾಟಕ ಪುರಸಭೆ ಕಾಯ್ದೆ 1964ರಲ್ಲಿ ಈ ಅವಕಾಶ ಇಲ್ಲ.
ಮುಖ್ಯಮಂತ್ರಿ ನೇತೃತ್ವದಲ್ಲಿ ಉಪಮುಖ್ಯಮಂತ್ರಿ, ಕಾನೂನು, ಆಹಾರ ಮತ್ತು ನಾಗರಿಕ ಪೂರೈಕೆ, ಕೈಗಾರಿಕೆ, ಇಂಧನ, ಕಂದಾಯ, ನಗರಾಭಿವೃದ್ಧಿ, ಪೌರಾಡಳಿತ ಸಚಿವರೊಂದಿಗೆ ನಡೆದ ಸಭೆಯಲ್ಲಿ ಎಲ್ಲ ಕಾಯ್ದೆಗಳಲ್ಲೂ ಸಮಾನಾಂತರ ಅವಕಾಶಗಳು ಇರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದ್ದರಿಂದ ಓಸಿ ವಿನಾಯ್ತಿ ನೀಡಲು ನಿಯಮ ರಚಿಸಿ, ಕಾಯ್ದೆಗಳಿಗೆ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಬೆಸ್ಕಾಂ , ಪೌರಾಡಳಿತ, ಇಂಧನ, ಪಂಚಾಯತ್ ರಾಜ್ ಆಯುಕ್ತಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.
ಯಾರಿಗೆ ಅನ್ವಯ?
1,200 ಚದರಡಿ ವಿಸ್ತೀರ್ಣದ ನಿವೇಶನದಲ್ಲಿ ನೆಲ ಅಂತಸ್ತು, 2 ಅಂತಸ್ತು ಅಥವಾ ಸ್ಟಿಲ್ಟ್ ಪಾರ್ಕಿಂಗ್ ಮತ್ತು ಮೂರು ಅಂತಸ್ತುವರೆಗಿನ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯ್ತಿ ಸಿಗಲಿದೆ.
ಎಲ್ಲವೂ ಓಕೆ.. ಬೆಂಗಳೂರಿನಲ್ಲಿ 1200 ಚದರಡಿ ಅಥವಾ ಅದಕ್ಕಿಂತ ಕಡಿಮೆ ವಿಸ್ತೀರ್ಣದ ಸಾವಿರಾರು ಮನೆಗಳಿವೆ. ಈ ಮನೆಗಳವರು ಪ್ರತಿ ತಿಂಗಳೂ ಕಟ್ಟಿದ ಸಾವಿರಾರು ರೂಪಾಯಿ ದಂಡ ಏನಾಯ್ತು..? ಈಗಿನ್ನೂ ಪ್ರಸ್ತಾವನೆ ಅಷ್ಟೇ. ಅದು ಜಾರಿಯಾದ ಮೇಲೆ.. ತಪ್ಪು ಮಾಡಿದ್ದೇವೆ, ಕ್ಷಮಿಸಿ ಎಂದು ಸರ್ಕಾರ ದುಡ್ಡು ವಾಪಸ್ ಕೊಡುತ್ತಾ..? ಸರ್ಕಾರಕ್ಕೆ ಹೋದ ಹಣ.. ಸ್ಮಶಾನಕ್ಕೆ ಹೋದ ಹೆಣ ವಾಪಸ್ ಬರಲ್ಲ ಎನ್ನುವುದು ಸತ್ಯಸ್ಯ ಸತ್ಯ.



