ಪ್ರೀತಿ..ಪ್ರೇಮ..ವಿರಹದ ಉಯ್ಯಾಲೆಯಲ್ಲಿ ಬಾನ ದಾರಿಯಲ್ಲಿ (Bana dariyalli) ಸಾಗುವ ಕಥೆ ಬಾನದಾರಿಯಲ್ಲಿ ಚಿತ್ರದ್ದು. ಅವಳು ಲೀಲಾ (Leela). ರುಕ್ಮಿಣಿ (Rukmini vasanth). ಮಾಸ್ಟರ್ ಲೋಹಿತ್ (Puneeth Rajkumar) ಹಾಡಿರುವ ಬಾನದಾರಿಯಲ್ಲಿ ಹಾಡೆಂದರೆ ಇಷ್ಟ. ಆ ಹಾಡು ಗುನುಗುತ್ತಲೇ ಅಪ್ಪನ ತೊಡೆ ಮೇಲೆ ಕನಸು ಕಾಣುವ ಹುಡುಗಿ ರುಕ್ಮಿಣಿ ವಸಂತ್. ಅವನು ಸಿದ್ಧ್. ಗಣೇಶ್. (golden star ganesh) ಕ್ರಿಕೆಟರ್. ಆಕೆಯನ್ನು ನೋಡುತ್ತಿದ್ದಂತೆಯೇ ಉದ್ಭವವಾಗುವ ಪ್ರೀತಿಗೆ ಆಕೆ ಹಾಕುವ ಷರತ್ತು ಒಂದೇ. ಅಪ್ಪನನ್ನು ಒಪ್ಪಿಸು.
ಅಪ್ಪನನ್ನೂ ಒಪ್ಪಿಸಿ ಪ್ರೀತಿ ಮಾಡೋದಕ್ಕೆ ಪರ್ಮಿಷನ್ ತೆಗೆದುಕೊಳ್ಳೋ ಸಿದ್ಧ ಅಂದ್ರೆ ಗಣೇಶ್ ಪ್ರೀತಿ ಪ್ರೇಮದ ಉತ್ಸವದಲ್ಲಿ ನಡೆಯುವಾಗ ನಡೆಯಬಾರದ ಘಟನೆಯೊಂದು ಜರುಗಿ ಸಿನಿಮಾ ದಿಢೀರನೆ ದುಃಖದ ಹಳಿಗೆ ಬರುತ್ತದೆ.
ಪ್ರೀತಮ ಗುಬ್ಬಿ ಕಥೆ ಹೇಳುವುದೇ ಹೀಗೆ. ಎಲ್ಲವೂ ಸರಳ..ಸುಂದರ..ಮನಮೋಹಕ ಎನ್ನುವಾಗಲೇ ಪ್ರೇಕ್ಷಕರಿಗೆ ಕಣ್ಣೀರು ಸುರಿಸುತ್ತಾರೆ. ಹಾಗಂತ ಗೊಳೋ ಎಂದು ಅಳುವ ಕಣ್ಣೀರೂ ಅಲ್ಲ. ಎದೆಯೊಳಗೆ ತಲ್ಲಣ ಹುಟ್ಟಿಸುವ ಭಾವನೆ ಬಡಿದೆಬ್ಬಿಸುವ ದುಃಖ ಅಷ್ಟೆ. ಇಷ್ಟೆಲ್ಲ ಆಗುವಾಗ ಟ್ರಾವೆಲ್ ಬ್ಲಾಗರ್ ಕಾದಂಬರಿ (Kadambari) ಪಾತ್ರದಲ್ಲಿ ರೀಷ್ಮಾ ನಾಣಯ್ಯ (Reeshma nanaiah) ಎಂಟ್ರಿಯಾಗುತ್ತೆ. ಅವರ ಲವಲವಿಕೆ, ರಂಗಾಯಣ ರಘು (rangayana raghu) ಮೇಲೆ ಹುಟ್ಟುವ ವಾತ್ಸಲ್ಯ ಎಲ್ಲವೂ ಚಿತ್ರವನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯುತ್ತೆ.
ಪ್ರೀತಿ ಎಂದರೆ ಹುಡುಗ ಮತ್ತು ಹುಡುಗಿಯ ಮಧ್ಯೆ ನಡೆಯುವದಷ್ಟೇ ಅಲ್ಲ. ಅದನ್ನೂ ಮೀರಿದ ಸಂಬಂಧ ಎನ್ನುವುದನ್ನು ಹೇಳುತ್ತಾರೆ ಪ್ರೀತಂ. ಅದನ್ನು ಹೇಳುವಾಗ ಕಡಲ ಕಿನಾರೆ, ಆಫ್ರಿಕಾದ ನಯನಮನೋಹರ ಕಾಡು. ಕಿವಿಗಿಂಪಾಗುವ ಹಾಡು ಎಲ್ಲವನ್ನೂ ತರುತ್ತಾರೆ. ಹೀಗಾಗಿಯೇ ಪ್ರೇಕ್ಷಕರು ನಗು ನಗುತ್ತಲೇ ಚಿತ್ರಮಂದಿರಕ್ಕೆ ಹೋಗಿ, ಒಂದಿಷ್ಟೂ ಭಾವುಕತೆಯೊಂದಿಗೆ ನಗು ನಗುತ್ತಲೆ ಬರುತ್ತಾರೆ. ಕಣ್ಣಲ್ಲಿ ಕಾಣೋದು ಪ್ರೀತಿಯನ್ನು ನೋಡಿದ ಅನುಭವ.
ಪ್ರೀತಿ ಪ್ರೇಮವನ್ನು ಕಾಮದ ಸುಳಿವಿಲ್ಲದೆ ತೋರಿಸುವ ಪ್ರೀತಂ ಗುಬ್ಬಿ, ಇಲ್ಲಿಯೂ ಪ್ರೇಮದ ಕಥೆಯನ್ನೇ ಹೇಳಿದ್ದಾರೆ. ಜವಾಬ್ದಾರಿಯ ಕಥೆಯನ್ನೂ ತೋರಿಸಿದ್ದಾರೆ. ಯುವ ಜನಾಂಗಕ್ಕೆ ಚಿತ್ರದಲ್ಲೊಂದು ಸಂದೇಶವೂ ಇದೆ. ಆದರೆ ಭಾಷಣ ಅಲ್ಲ. ಸಂದೇಶವೂ ಇದೆ. ಪ್ರೀತಿ ಪ್ರೇಮದ ಅಮಲಿನಲ್ಲಿರುವವರಿಗೆ ಅರ್ಥವಾಗಬೇಕಷ್ಟೆ.



