ದರ್ಶನ್ ಅವರ ಮೇಲೆ ಕೇಳಿ ಬಂದಿರೋ ಕೊಲೆ ಕೇಸಿನಲ್ಲಿ ದರ್ಶನ್ ಅವರನ್ನು ಸಿನಿಮಾದಿಂದ ಬ್ಯಾನ್ ಮಾಡಬೇಕು ಅನ್ನೋ ಕೂಗೂ ಇದೆ. ಬ್ಯಾನ್ ಮಾಡುವುದು ಸಾಧ್ಯವೇ ಎಂಬ ಪ್ರಶ್ನೆ ಹುಡುಕಿದರೆ.. ಉತ್ತರ ಇಲ್ಲ ಎಂದೇ ಬರುತ್ತದೆ. ಈ ಹಿಂದೆ ಕನ್ನಡ ಫಿಲ್ಮ್ ಚೇಂಬರ್ ಇದೇ ದರ್ಶನ್ ವಿಚಾರದಲ್ಲಿ ನಿಖಿತಾ ತುಕ್ರಾಲ್ ಅವರನ್ನು ಬ್ಯಾನ್ ಮಾಡಿತ್ತು. ಆದರೆ, ಪಾರ್ವತಮ್ಮ ರಾಜ್ ಕುಮಾರ್ ಬುದ್ದಿ ಹೇಳಿದ ಮೇಲೆ ಬ್ಯಾನ್ ಹಿಂತೆಗೆದುಕೊಂಡಿತ್ತು. ಬೇರೆ ಬೇರೆ ಚಿತ್ರರಂಗದಲ್ಲಿ ಆಗಾಗ್ಗೆ ಬ್ಯಾನ್ ವಿಚಾರಗಳು ಸದ್ದು ಮತ್ತು ಸುದ್ದಿ ಮಾಡುತ್ತವೆ. ಈಗ ದರ್ಶನ್ ಬ್ಯಾನ್ ಮಾಡಬೇಕೆ ಎಂಬ ಪ್ರಶ್ನೆ ಕೇಳಿ ಬಂದಿದೆ.
ಬ್ಯಾನ್ ಸಾಧ್ಯವಿಲ್ಲ : ಚೇಂಬರ್ ಅಧ್ಯಕ್ಷ ಎನ್. ಎಂ. ಸುರೇಶ್
ನಮ್ಮ ವಾಣಿಜ್ಯ ಮಂಡಳಿ ತೆಗೆದುಕೊಳ್ಳುವ ನಿರ್ಧಾರ ಕಲಾವಿದರ ಸಂಘ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ. 13 ಜನ ಅರೆಸ್ಟ್ ಆಗಿದ್ದಾರೆ, ನಿಜ. ಆದರೆ ಅವರಿನ್ನೂ ಆರೋಪಿಗಳಷ್ಟೇ, ಅಪರಾಧಿಗಳಲ್ಲ. ದರ್ಶನ್ ಯಾವ್ಯಾವ ನಿರ್ಮಾಪಕನಿಗೆ ಕಮಿಟ ಆಗಿದ್ದಾರೋ.. ಏನೋ.. ಅವರ ಮೇಲೆ
ಕೆಲವು ನಿರ್ಮಾಪಕರು ಅವಲಂಬಿತರಾಗಿದ್ದಾರೆ. ಏಕಾಏಕಿ ಬ್ಯಾನ್ ಮಾಡುವುದು ಸಾಧ್ಯವಿಲ್ಲ.
ಸಾರಾ ಗೋವಿಂದು : ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ
ಕೊಲೆ ಕೇಸಿನಲ್ಲಿ ಅರೆಸ್ಟ್ ಆಗಿರುವ ದರ್ಶನ್ ಅವರಿಂದ ಚಿತ್ರರಂಗದ ಗೌರವಕ್ಕೆ ಧಕ್ಕೆಯಾಗಿದೆ. ನಾವೆಲ್ಲರೂ ತಲೆ ತಗ್ಗಿಸುವಂತಾಗಿದೆ. ದರ್ಶನ್ ಅವರಿಗೆ ನೋವಾಗಿದ್ದರೆ ಕ್ರಮ ತೆಗೆದುಕೊಳ್ಳುವುದಕ್ಕೆ ಹಲವು ದಾರಿಗಳಿದ್ದವು. ಕರೆಸಿ ಬುದ್ದಿ ಹೇಳಬಹುದಿತ್ತು. ಕಾನೂನಿತ್ತು. ಪೊಲೀಸರೂ ಇದ್ದರು. ಅದನ್ನೆಲ್ಲ ಬಿಟ್ಟು ಕೊಲೆ ಮಾಡುವ ಹಂತಕ್ಕೆ ಹೋಗಿದ್ದು ತಪ್ಪು. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಡಾ.ರಾಜ್, ವಿಷ್ಣುವರ್ಧನ್ ಅವರಿದ್ದಂತಹ ಚಿತ್ರರಂಗ. ಅವರನ್ನು ನೋಡಿ ಕಲಿಯಬೇಕು. ಆದರೆ, ದರ್ಶನ್ ಬ್ಯಾನ್ ಮಾಡುವ ವಿಚಾರದಲ್ಲಿ ನಿರ್ಮಾಪಕರ ಹಿತಾಸಕ್ತಿಯನ್ನೂ ನೋಡಬೇಕಿದೆ.
ಇವರಿಬ್ಬರ ಮಾತು ಕೇಳಿದರೆ ಮೊದಲಿಗೆ ಬರುವ ಪ್ರಶ್ನೆ, ದರ್ಶನ್ ಅವರ ಮೇಲೆ ಎಷ್ಟು ಕೋಟಿ ಹೂಡಿದ್ದಾರೆ ಎನ್ನುವ ವಿಷಯ. ದರ್ಶನ್ ಅವರ ಕೈಲಿ ಸದ್ಯಕ್ಕೆ ಐದಾರು ಸಿನಿಮಾಗಳಿವೆ. ಪ್ರಕಾಶ್ ನಿರ್ದೇಶನ ಮಾಡುತ್ತಿರುವ ‘ಡೆವಿಲ್’ ಸಿನಿಮಾಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಶೂಟಿಂಗ್ ಶುರುವಾಗಿ ಕೆಲವೇ ದಿನಗಳಲ್ಲಿ ದರ್ಶನ್ ಕೈಗೆ ಪೆಟ್ಟು ಮಾಡಿಕೊಂಡಿದ್ದರಾದರೂ.. ಅದಾದ ಮೇಲೆ ಮತ್ತೆ ಆಕ್ಟಿವ್ ಆಗಿದ್ದಾರೆ. ಡಿಸೆಂಬರಿನಲ್ಲಿ ರಿಲೀಸ್ ಎಂದು ಘೋಷಿಸಿದ್ದರೂ, ಈಗ ಅದು ಕಷ್ಟ. ಸುಮಾರು ಶೇ.80ರಷ್ಟು ಶೂಟಿಂಗ್ ಮುಗಿದಿದೆ. ಈ ಚಿತ್ರಕ್ಕೆ ದರ್ಶನ್ ಕುಟುಂಬದವರದ್ದೇ ನಿರ್ಮಾಣ ಇದೆ.
ಅದನ್ನು ಹೊರತುಪಡಿಸಿ ʻವೀರ ಸಿಂಧೂರ ಲಕ್ಷ್ಮಣ’ ಎಂಬ ಐತಿಹಾಸಿಕ ಸಿನಿಮಾ ಘೋಷಣೆಯಾಗಿದೆ. ಶೈಲಜಾ ನಾಗ್ ಮತ್ತು ಬಿ ಸುರೇಶ ನಿರ್ಮಾಪಕರು. ಸ್ಕ್ರಿಪ್ಟ್ ಕೆಲಸಗಳು ಕೂಡ ಚಾಲ್ತಿಯಲ್ಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಈ ಸಿನಿಮಾ ಯಾವಾಗ ಆರಂಭವಾಗಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ
ಬಿಜೆಪಿ ಮುಖಂಡ, ದರ್ಶನ್ ಅವರ ಆಪ್ತ ಸಚ್ಚಿದಾನಂದ ಇಂಡುವಾಳು ಅವರು ನಿರ್ಮಾಪಕರಾಗಿ ಕನ್ನಡಕ್ಕೆ ಚಿತ್ರರಂಗಕ್ಕೆ ಎಂಟ್ರಿ ನೀಡುವ ಕುರಿತು ಮಾಹಿತಿ ಸಿಕ್ಕಿತ್ತು. ಅವರ ನಿರ್ಮಾಣದ ಮೊದಲ ಸಿನಿಮಾಗೆ ನಟ ದರ್ಶನ್ ಅವರೇ ಹೀರೋ ಅಂತ ಸ್ವತಃ ಸಚ್ಚಿದಾನಂದ ಜಾಹೀರಾತು ನೀಡಿದ್ದರು. ಆ ಚಿತ್ರವನ್ನು ಕೂಡ ತರುಣ್ ಸುಧೀರ್ ಅವರೇ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ಸಿನಿಮಾ ಕೂಡಾ ಈಗ ಪೆಂಡಿಂಗ್ ಲಿಸ್ಟಿಗೆ ಸೇರಿದೆ.
ಇನ್ನು ಜೋಗಿ ಪ್ರೇಮ್ ಅವರು ತಮ್ಮನ್ನು ಪುಡಾಂಗು ಎಂದು ಕರೆದಿದ್ದನ್ನೂ ಮರೆತು ದರ್ಶನ್ ಅವರೊಂದಿಗೆ ಹೊಸ ಸಿನಿಮಾ ಘೋಷಿಸಿದ್ದರು. ಕೆವಿಎನ್ ಬ್ಯಾನರಿನ ಈ ಸಿನಿಮಾ ಕೂಡಾ ಸದ್ಯಕ್ಕೆ ಪೆಂಡಿಂಗ್ ಆಗುತ್ತಿದೆ. ಸುಮಾರು 60 ರಿಂದ 70 ಕೋಟಿ ವ್ಯವಹಾರ ಸ್ಥಗಿತಗೊಳ್ಳಲಿದೆ.
ಚಿತ್ರರಂಗದಿಂದ ನಿಷೇಧಿಸುವುದು ಸಾಧ್ಯ ಇಲ್ಲ :
ಇಂತಹ ಸ್ಥಿತಿಯಲ್ಲಿ ದರ್ಶನ್ ಅವರನ್ನು ಬ್ಯಾನ್ ಮಾಡಬಹುದೇ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ. ಸಾಧ್ಯವಿಲ್ಲ ಎಂದೇ ಹೇಳಬೇಕು. ಏಕೆಂದರೆ..
ಯಾವುದೇ ಚಲನಚಿತ್ರ ಮಂಡಳಿಗೆ ಯಾವುದೇ ಕಲಾವಿದ ಅಥವಾ ತಂತ್ರಜ್ಞರನ್ನು ನಿಷೇಧಿಸುವ ಅಧಿಕಾರ ಇಲ್ಲ. ಅದು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ. ಚೇಂಬರ್ ಬೈಲಾ ಪ್ರಕಾರವೂ ಸಾಧ್ಯವಿಲ್ಲ. ಕಲಾವಿದರ ಸಂಘದಿಂದ ಮನವಿ ಬಂದರೆ ಪರಿಶೀಲಿಸಬಹುದು ಹಾಗೂ ಚೇಂಬರ್ ಸದಸ್ಯರಿಗೆ ಈ ನಟನನ್ನು ಹಾಕಿಕೊಂಡು ಸಿನಿಮಾ ಮಾಡಬೇಡಿ ಎಂದು ಹೇಳಬಹುದು. ಚೇಂಬರ್ ಸದಸ್ಯರೂ ಆಗಿರುವ ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞರಿಗೆ ಸೂಚನೆ ನೀಡಬಹುದು. ಅದನ್ನು ಮೀರಿಯೂ ಯಾರಾದರೂ ಸಿನಿಮಾ ಮಾಡಿದರೆ, ಅದನ್ನು ನಿಷೇಧಿಸುವ ಅಥವಾ ಬಿಡುಗಡೆ ಆಗದಂತೆ ಮಾಡುವ ಅಧಿಕಾರ ಫಿಲ್ಮ್ ಚೇಂಬರ್ʻಗೆ ಇಲ್ಲ. ಇದನ್ನು ನಟ ಅಥವಾ ನಿರ್ಮಾಪಕರು ಕೋರ್ಟಿನಲ್ಲಿ ಪ್ರಶ್ನೆ ಮಾಡಿದರೆ, ಫಿಲ್ಮ್ ಚೇಂಬರ್ʻಗೆ ತಿರುಗುಬಾಣವಾದರೂ ಆಶ್ಚರ್ಯವಿಲ್ಲ.



