ʻಶಿವ ರಾಜ್ ಕುಮಾರ್ʼಗೆ ಬೇಲ್ ಕೊಡುವುದಕ್ಕೆ ಅವರೇನು ತಪ್ಪು ಮಾಡಿದ್ದಾರೆ.. ಬಾಯಿಗೆ ಬಂದಂತೆ ಬೈದವರನ್ನೂ ಕ್ಷಮಿಸುವ ಶಿವಣ್ಣಗೆ ಬೇಲ್ ಯಾಕೆ.. ಅವರ ವಿರುದ್ಧ ಯಾವ ಕೇಸ್ ಆಗಿದೆ.. ಹೀಗೆಲ್ಲ ಪ್ರಶ್ನೆ ಕೇಳಿದರೆ.. ನೋ ಆನ್ಸರ್. ʻಬೇಲ್ʼ ಅನ್ನೋದು ಅವರ ಹೊಸ ಸಿನಿಮಾ ಟೈಟಲ್.
ನಿರ್ದೇಶಕ ಪವನ್ ಒಡೆಯರ್ ಅವರ ದೊಡ್ಡ ಕನಸು ಎಂದರೆ ಶಿವಣ್ಣನ ಸಿನಿಮಾ ನಿರ್ದೇಶಿಸಬೇಕು ಎನ್ನುವುದು. ಶಿವಣ್ಣ ಅವರು ಚಿಕಿತ್ಸೆಗೆ ಒಳಗಾಗುವ ಕೆಲವು ತಿಂಗಳ ಹಿಂದೆ ಕಥೆಯೊಂದನ್ನು ಇಟ್ಟುಕೊಂಡು ಕಾಂಟ್ಯಾಕ್ಟ್ ಮಾಡಿದ್ದರಂತೆ. ಆಗ ಶಿವಣ್ಣ ವಾಪಸ್ ಬಂದ ಮೇಲೆ ನೋಡೋಣ ಎಂದಿದ್ದರಂತೆ. ಕೊಟ್ಟ ಮಾತಿನಂತೆ ವಾಪಸ್ ಬಂದ ಮೂರೇ ತಿಂಗಳಲ್ಲಿ ಬೇಲ್ ಸಿನಿಮಾ ಟೇಕಾಫ್ ಆಗಿದೆ.
ಶಿವಣ್ಣ ಅವರ ಈಗಿನ ಏಜ್, ಲುಕ್‌ಗೆ ಹೊಂದುವಂತಹ ಪಾತ್ರ, ಇದರ ಜತೆಗೆ ಒಂದು ಸರ್‌ಪ್ರೈಸ್ ಇರಲಿದೆ. ಶೀಘ್ರದಲ್ಲೇ ಶಿವಣ್ಣ ಅವರ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡುತ್ತಿದ್ದೇವೆ. ಮುಂದಿನ ವರ್ಷದ ಮೊದಲರ್ಧದಲ್ಲೇ ಸಿನಿಮಾ ತೆರೆಗೆ ತರುವ ಪ್ಲಾನ್ ಇದೆ ಎಂದೆಲ್ಲ ಹೇಳಿಕೊಂಡಿದ್ದಾರೆ ಪವನ್ ಒಡೆಯರ್.
ಅಂದಹಾಗೆ 2004ರಲ್ಲಿ ಸುದೀಪ್ ಅವರ ನಲ್ಲ ಸಿನಿಮಾದಲ್ಲಿ ನಟಿಸಿದ್ದ ಸಂಗೀತಾ ಕ್ರಿಶ್, ಈ ಚಿತ್ರದಲ್ಲಿ ಶಿವಣ್ಣನಿಗೆ ಹೀರೋಯಿನ್. 21 ವರ್ಷಗಳ ನಂತರ ಕನ್ನಡದಲ್ಲಿ ‘ಬೇಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆ ದೀಕ್ಷಿತ್ ಶೆಟ್ಟಿ ಹಾಗೂ ಸಂಜನಾ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ನಟ ಜಯರಾಮ್, ಸಾಯಿಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿ ಸೇರಿದಂತೆ, ಸಿನಿಮಾಗೆ ದೊಡ್ಡ ಸ್ಟಾರ್ ಬಳಗವೇ ಇದೆ. ವೈದಿ ಕ್ಯಾಮೆರಾ, ಅಜನೀಶ್ ಲೋಕನಾಥ್ ಸಂಗೀತ ಇರುವ ಸಿನಿಮಾ ಬೇಲ್.
”ಬೇಲ್’ ಸಿನಿಮಾಗೆ ವೆಂಕಟ್ ಕೊನಂಕಿ ಅವರು ಕೈ ಜೋಡಿಸಿರೋದು ನೂರನೇ ಬಲ ತಂದಿದೆ. ಭಾರತದ ಸದ್ಯದ ಅತಿ ದೊಡ್ಡ ಹಾಗೂ ಅತ್ಯಂತ ಬಿಝಿ, ಅಷ್ಟೇ ಪ್ಯಾಷನೇಟ್ ನಿರ್ಮಾಪಕ. ಇವರೊಂದಿಗೆ ಶಿವಣ್ಣ ಸಿನಿಮಾ ದೊಡ್ಡ ನನಗೆ ಜವಾಬ್ದಾರಿ” ಎಂದಿದ್ದಾರೆ ನಿರ್ದೇಶಕ ಪವನ್ ಒಡೆಯರ್.
ಡಾ. ಶಿವರಾಜ ಕುಮಾರ್ ಇಲ್ಲಿಯವರೆಗೂ ಮಾಡದ ಪಾತ್ರಗಳಿಲ್ಲ, ಮಿಂಚದ ಲುಕ್‌ಗಳಿಲ್ಲ. ಅವರಿಗೊಂದು ಸಿನಿಮಾ ಮಾಡೋದು ಪ್ರತಿಯೊಬ್ಬ ನಿರ್ದೇಶಕರ ಕನಸು. ಈಗ ನಿರ್ದೇಶಕ ಪವನ್ ಒಡೆಯರ್‌ರ ಆ ಕನಸು ‘ಬೇಲ್’ ಸಿನಿಮಾದ ಮೂಲಕ ನನಸಾಗುತ್ತಿದೆ. ಅನಾರೋಗ್ಯದಿಂದ ಚೇತರಿಸಿಕೊಂಡು ವಾಪಸ್ಸಾದ ಶಿವಣ್ಣರ ಎನರ್ಜಿ ಈಗ ಡಬಲ್ ಆಗಿದೆ. ಅವರ ನಾಲ್ಕು ಸಿನಿಮಾಗಳು ಮೂರೇ ತಿಂಗಳ ಅಂತರದಲ್ಲಿ ಮುಹೂರ್ತ ಕಂಡಿವೆ.
ಅಂದ ಹಾಗೆ ಬೇಲ್ ಮಾಸ್ ಸಿನಿಮಾ ಅಲ್ಲ. ಹಾಗಂತ ಕಂಪ್ಲೀಟ್ ಕ್ಲಾಸ್ ಕೂಡಾ ಅಲ್ಲ. ಸಿನಿಮಾದ ಬಹುಪಾಲು ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಲಿದೆ. ಉಳಿದಂತೆ ಮಂಡ್ಯ, ಸಕಲೇಶಪುರ, ಕರ್ನಾಟಕದ ಕರಾವಳಿ ಭಾಗದಲ್ಲಿ, ಹೈದರಾಬಾದ್, ಮುಂಬೈ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ಕಡೆ ಚಿತ್ರೀಕರಣ ನಡೆಯಲಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಚಿತ್ರೀಕರಣ ಬಹುತೇಕ ಮುಗಿಸುವ ಪ್ಲಾನ್ ಹಾಕ್ಕೊಂಡಿದೆ ಬೇಲ್ ಟೀಂ.



