ಕನ್ನಡದಲ್ಲಿ ಮತ್ತೊಂದು ಹಿಟ್ ಸಿನಿಮಾ ಬಂದಿದೆ. ಘೋಸ್ಟ್ ನಂತರ ಟಗರುಪಲ್ಯ ಕೂಡಾ ಹಿಟ್ ಆಗಿದೆ. ಡಾಲಿ ಧನಂಜಯ್ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ. ಅಪ್ಪಟ ಚಾಮರಾಜ ನಗರ ಶೈಲಿಯ ಮಳವಳ್ಳಿ ಸೊಗಡಿನ ಸಂಭಾಷಣೆ, ಅಲ್ಲಿಯದ್ದೇ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಹಳೆಯ ಯಶಸ್ವಿ ಚಿತ್ರಗಳ ಖದರು, ಈ ಟಗರುಪಲ್ಯಕ್ಕೆ ಸಿಕ್ಕಿದೆ. ಅಂದಹಾಗೆ ಸಿನಿಮಾ ತಂಡ ಚಿತ್ರದ ಟಿಕೆಟ್ ದರವನ್ನ ಹೆಚ್ಚಿಸಿಲ್ಲ. ಹೀಗಾಗಿ ಕೋಟಿ ಕೋಟಿ ಕೋಟಿ ಕಲೆಕ್ಷನ್ನುಗಳಾಗಿಲ್ಲ. ಆದರೆ ಬಿಡುಗಡೆಯಾದ ಎಲ್ಲ ಕಡೆ ಹೌಸ್ʻಫುಲ್ ಆಗಿದೆ. ಮತ್ತು ಈ ಹೌಸ್ʻಫುಲ್ ಬೋರ್ಡ್ ಕಂಟಿನ್ಯೂ ಆಗುವ ಎಲ್ಲ ಸೂಚನೆಗಳೂ ಸಿಕ್ಕಿವೆ.
ಒಂದು ಸಿನಿಮಾ ಗೆಲ್ಲಬೇಕೆಂದರೆ ಓವರಾಲ್ ಕ್ವಾಲಿಟಿ ಚೆನ್ನಾಗಿರಬೇಕು. ಈ ವಿಷಯದಲ್ಲಿ ಡಾಲಿ ಧನಂಜಯ ಪಕ್ಕಾ ಆಗಿಬಿಟ್ಟಿದ್ದಾರೆ. ಒಬ್ಬ ನಿರ್ಮಾಪಕರಾಗಿ ಕಥೆಗೆ ಏನು ಬೇಕು ಅನ್ನೋದನ್ನ ಚೆನ್ನಾಗಿ ಅರಿತಂತೆ ಕೆಲಸ ಮಾಡುತ್ತಿದ್ದಾರೆ. ಇದೆಲ್ಲದರ ಪರಿಣಾಮ ಮತ್ತೆ ಮತ್ತೆ ನಿರ್ಮಾಪಕರಾಗಿ ಗೆಲ್ಲುತ್ತಿದ್ದಾರೆ. ಟಗರುಪಲ್ಯ ಕೂಡಾ ಗೆದ್ದಿದೆ.
ಟಗರುಪಲ್ಯದಲ್ಲಿ ಅಚ್ಚರಿ ಮೂಡಿಸಿರುವುದು ಅಮೃತಾ ಪ್ರೇಮ್. ನೆನಪಿರಲಿ ಪ್ರೇಮ್ ಸುಮ್ಮನೆ ಕಣ್ಣೀರು ಹಾಕಲಿಲ್ಲ. ಚಿತ್ರದ ಕ್ಲೈಮಾಕ್ಸ್‌ನಲ್ಲಿ ಇಡೀ ಚಿತ್ರವನ್ನು ಆವರಿಸಿಕೊಳ್ಳೋ ಅಮೃತಾ, ಹೊಸ ಹೀರೋಯಿನ್ ಎಂಟ್ರಿಯನ್ನು ಭರ್ಜರಿಯಾಗಿ ಸಾರಿದ್ದಾರೆ. ಅಳಿಸೋದು ಅಪ್ಪ ಪ್ರೇಮ್ ಅವರನ್ನಷ್ಟೇ ಅಲ್ಲ, ನೋಡುತ್ತಿದ್ದ ಪ್ರೇಕ್ಷಕರು ಕೂಡಾ ಕಣ್ಣೀರಾಗ್ತಾರೆ.
ಹಾಗಂತ ಇದು ಅಳಿಸೋ ಚಿತ್ರ ಅಲ್ಲ. ನಗಿಸೋ ಸಿನಿಮಾ. ಚಿತ್ರದ ಆರಂಭದಿಂದ ಕೊನೆಯವರೆಗೂ ನಗು ನಗುತ್ತಲೆ ಸಾಗುವ ಕಥೆ ಚಿತ್ರದ್ದು. ನಾಯಕ ನಾಗಭೂಷಣ್ ಮೊದಲೇ ಹೇಳಿದ್ದರು, ಈ ಚಿತ್ರದ ನಿಜವಾದ ಹೀರೋ ಹೀರೋಯಿನ್ ರಂಗಾಯಣ ರಘು ಮತ್ತು ತಾರಾ ಎಂದು. ಅದಕ್ಕೆ ತಕ್ಕಂತೆಯೇ ಇಡೀ ಚಿತ್ರವನ್ನು ಆವರಿಸಿಕೊಳ್ಳೋದು, ನಕ್ಕು ನಗಿಸೋದು ರಘು ಮತ್ತು ತಾರಾ. ನಾಗಭೂಷಣ್ ಇಲ್ಲಿ ನಗಿಸೋದಕ್ಕಿಂತ ಹೆಚ್ಚಾಗಿ ಭಾವುಕರಾಗಿಸ್ತಾರೆ. ಅಳಿಸೋದಿಲ್ಲ.
ನಿರ್ಧೇಶಕ ಉಮೇಶ್ ನಾನೊಬ್ಬ ಕ್ವಾಲಿಟಿ ಡೈರೆಕ್ಟರ್ ಅನ್ನೋದನ್ನ ಸಾರಿದ್ದಾರೆ. ವಾಸುಕಿ ವೈಭವ್ ಸಂಗೀತ ಮತ್ತು ನಟನೆ ಎರಡರಲ್ಲೂ ಪಾಸ್ ಆಗಿದ್ದಾರೆ. ಟೋಟಲ್ಲಾಗಿ ಹೇಳ್ಬೇಕಂದ್ರೆ ಟಗರು ಪಲ್ಯದ್ದು ಭರ್ಜರಿ ಬಾಡೂಟ.
ನಗು ನಗಿಸುತ್ತಲೇ ಕಣ್ಣೀರು ಹಾಕಿಸಿದ್ಧಾರೆ ಡೈರೆಕ್ಟರ್ ಉಮೇಶ್. ಇದರಿಂದ ಗೆದ್ದಿರೋದು ನಕ್ಕಿರೋದು ಡಾಲಿ ಧನಂಜಯ. ಟಗರುಪಲ್ಯ ಸಿನಿಮಾದ ಕಥೆ ನಡೆಯೋದೇ ಒಂದು ದಿನ. ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯುವ ಕಥೆ. ಕುಟುಂಬವೊಂದು ಊರ ದೇವರ ಹರಕೆ ತೀರಿಸಲು ಹೋದಾಗ ಏನೆಲ್ಲ ನಡೆಯುತ್ತದೆ ಅನ್ನೋದೇ ಕಥೆ. ಇದರಲ್ಲಿ ಭರ್ತಿ ನಗು ಇದೆ, ಜೊತೆಗೆ ಕಣ್ಣೀರು ಉಚಿತವಿದೆ. ಪ್ರೇಮಿಗಳ ವೇದನೆ ಇದೆ, ತಂದೆಯ ಚಿಂತನೆ, ಪೂಜಾರಪ್ಪನ ಬೋಧನೆ ಮತ್ತು ತಲೆ ಒದರದ ಟಗರು ನೀಡುವ ರೋದನೆ ಕೂಡ ಈ ಪಲ್ಯದಲ್ಲಿ ಅಡಕವಾಗಿದೆ. ಸಂಬಂಜ ಅನ್ನೋದು ದೊಡ್ದು ಕನಾ’ ಅನ್ನೋದನ್ನು ಒತ್ತಿ ಒತ್ತಿ ಹೇಳುತ್ತ, ನಗಿಸುತ್ತ ಕಥೆ ಹೇಳಿ ಗೆದ್ದಿದ್ದಾರೆ ಉಮೇಶ್. ಸಿಟಿ ಬದುಕಿನ ಬಗ್ಗೆ ಕೆಲ ಹಳ್ಳಿಗರಿಗೆ ಇರುವ ಮೋಹ, ಪ್ರತಿಷ್ಠೆಗಾಗಿ ಮದುವೆ ಮತ್ತೊಂದನ್ನು ಅತ್ಯಂತ ಅದ್ದೂರಿಯಾಗಿ ಮಾಡುವ ಪರಿಪಾಠದ ಬಗ್ಗೆ ‘ಟಗರುಪಲ್ಯ’ ತಿಳುವಳಿಕೆ ಮೂಡಿಸುತ್ತದೆ. ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬುದನ್ನು ಚಿತ್ರದ ಕೊನೆಯಲ್ಲಿ ಅರ್ಥಪೂರ್ಣವಾಗಿ ಹೇಳಲಾಗಿದೆ. ಗ್ರಾಮೀಣ ಜನರ ಧಾರ್ಮಿಕ ನಂಬಿಕೆಗಳು ಎಷ್ಟೊಂದು ಮುಗ್ಧತೆಯಿಂದ ಕೂಡಿರುತ್ತವೆ ಅನ್ನೋದನ್ನು ಸುಂದರವಾಗಿ ತೋರಿಸಲಾಗಿದೆ.



