ಎಸ್ ನಾರಾಯಣ್ ಅವರ ಹೆಸರಲ್ಲಿ ಒಂದು ವಿಶೇಷ ದಾಖಲೆ ಇದೆ. ಆ ದಾಖಲೆಯನ್ನ ಯಾರೂ ಮುರಿಯೋಕೆ ಸಾಧ್ಯವಿಲ್ಲ.
ಡಾ.ರಾಜ್, ಶಿವಣ್ಣ, ರಾಘವೇಂದ್ರ ಹಾಗೂ ಪುನೀತ್.. ನಾಲ್ವರಿಗೂ ಆಕ್ಷನ್ ಕಟ್ ಹೇಳಿರುವ ಏಕೈಕ ನಿರ್ದೇಶಕ ಎನ್ನುವ ದಾಖಲೆ ಅವರದ್ದು. ಅಷ್ಟೇ ಅಲ್ಲ, ವಿಷ್ಣು, ರವಿಚಂದ್ರನ್, ಸುದೀಪ್, ದರ್ಶನ್, ಗಣೇಶ್, ದುನಿಯಾ ವಿಜಯ್, ವಿಜಯ್ ರಾಘವೇಂದ್ರ, ಶ್ರೀಮುರಳಿ.. ಎಲ್ಲರನ್ನೂ ನಿರ್ದೇಶಿಸಿದ್ದಾರೆ. ಅಂತಹವರಿಗೆ ದೊಡ್ಮನೆ ಹೆಸರಲ್ಲಿ ಶಾಕ್ ಕೊಟ್ಟಿದ್ದಾರೆ ಸೋಷಿಯಲ್ ಮೀಡಿಯಾ ಕಿರಾತಕರು.
ಎಸ್ ನಾರಾಯಣ್ ಅವರು ಈಗಲೂ ದೊಡ್ಮನೆಯವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಿರುವಾಗ ಎಸ್ ನಾರಾಯಣ್ ಹೆಸರಲ್ಲಿ ಎಕ್ಕ ಚಿತ್ರದ ಬಗ್ಗೆ ನೆಗೆಟಿವ್ ಪೋಸ್ಟ್ ಹಾಕುತ್ತಾರೆ ಎಂದರೆ.. ಹೌದು, ಎಸ್ ನಾರಾಯಣ್ ಅವರ ಹೆಸರಲ್ಲಿ ಅವರಿಗೇ ಗೊತ್ತಿಲ್ಲದಂತೆ ನಕಲಿ ಖಾತೆ ಸೃಷ್ಟಿಯಾಗಿದೆ. ಆ ಖಾತೆಯಲ್ಲಿ ಎಸ್ ನಾರಾಯಣ್ ಹೆಸರಲ್ಲಿ ಕೆಟ್ಟ ಕೆಟ್ಟ ಪೋಸ್ಟ್ ಹಾಕಲಾಗುತ್ತಿದೆ. ಅದರಲ್ಲೂ ಎಕ್ಕ ಸಿನಿಮಾ ಡಬ್ಬಾ ಥರಾ ಇದೆ.. ಯುವ ರಾಜ್ ಕುಮಾರ್ ನೋಡೋಕ್ ಆಗಲ್ಲ.. ಅಂತೆಲ್ಲ ಪೋಸ್ಟ್ ಮಾಡಿದ್ದಾರೆ. ಎಸ್ ನಾರಾಯಣ್ ಅವರಿಗೆ ಆಶ್ಚರ್ಯವಾಗಿರೋದೇ ಈ ಕಾರಣಕ್ಕೆ.
ಏಕೆಂದರೆ ಅವರ ಹೆಸರಲ್ಲಿ ಆ ಪೋಸ್ಟ್ ಬರುವ ಒಂದು ದಿನ ಮುಂಚೆ ಎಸ್ ನಾರಾಯಣ್ ಚಿತ್ರ ನೋಡಿದ್ದರಂತೆ. ನೋಡಿದ ಮೇಲೆ ರಾಘಣ್ಣಂಗೆ ಫೋನ್ ಮಾಡಿ, ಯುವನ ನಟನೆ ಬಗ್ಗೆ ಖುಷಿ ಹಂಚಿಕೊಂಡಿದ್ದರಂತೆ.
ನಾನು ಎಕ್ಕ ಸಿನಿಮಾ ಬಗ್ಗೆ ನನ್ನ ಅಭಿಪ್ರಾಯ ಹಂಚಿಕೊಂಡು, ಯುವನಿಗೆ ಹೇಳಿ ಎಂದಿದ್ದೆ. ಆದರೆ.. ಅದಾದ ಮರುದಿನವೇ ನನ್ನ ಹೆಸರಲ್ಲಿ ಎಕ್ಕ ಚಿತ್ರದ ಬಗ್ಗೆ ಏನೇನೋ ಕೆಟ್ಟದಾಗಿ ಬರೆದು ಪೋಸ್ಟ್ ಮಾಡಿದ್ದರು. ನನ್ನ ಸೋಷಿಯಲ್ ಮೀಡಿಯಾವನ್ನು ನಾನೇ ಹ್ಯಾಂಡಲ್ ಮಾಡುತ್ತೇನೆ. ನನ್ನ ಫೋನ್ ಕೂಡಾ ಯಾರಿಗೂ ಕೊಡಲ್ಲ. ಅದು ನನ್ನ ಅಕೌಂಟ್ ಅಲ್ಲ. ಇದು ಗಮನಕ್ಕೆ ಬಂದ ಕೂಡಲೇ ದೂರು ಕೊಡೋಕೆ ಬಂದೆ ಎಂದು ಹೇಳಿಕೊಂಡಿದ್ದಾರೆ ಎಸ್ ನಾರಾಯಣ್.
ಹಾಗಾದರೆ ಎಕ್ಕ ಚಿತ್ರದ ಸಕ್ಸಸ್ ಕೆಲವರಿಗೆ ಸಹಿಸಿಕೊಳ್ಳೋಕೆ ಆಗ್ತಾ ಇಲ್ವಾ..? ಅನುಮಾನವೇ ಇಲ್ಲ. ಇಂತಾದ್ದೊಂದು ಸಂಚು ನಡೀತಿರೋದು ನಿಜ. ಇದು ಎಸ್ ನಾರಾಯಣ್ ಅವರ ಗಮನಕ್ಕೆ ಬಂದಿದ್ದೇ ತಡ.. ಪೊಲೀಸರ ಮೊರೆ ಹೋಗಿದ್ದಾರೆ.
ಆಗಲೇ ನನ್ನ ಹೆಸರಿನ ಆ ಫೇಕ್ ಅಕೌಂಟ್ ಸುಮಾರು ಆರೇಳು ತಿಂಗಳಿಂದ ಆಕ್ಟಿವ್ ಆಗಿದೆ. ಅಪ್ಪು, ಶಿವಣ್ಣ, ಸುದೀಪ್, ಯಶ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನನ್ನ ಸ್ನೇಹಿತರೊಬ್ಬರು ನೋಡಿ, ಇದನ್ನು ಗಮನಕ್ಕೆ ತಂದರು. ಕೂಡಲೇ ದೂರು ಕೊಡೋಕೆ ಬಂದೆ ಎಂದಿದ್ದಾರೆ ಎಸ್ ನಾರಾಯಣ್.
ಇದು ಎಸ್ ನಾರಾಯಣ್ ಅವರಿಗೆ ಹೊಸದೇನಲ್ಲ. 2021ರಲಿ ಒಮ್ಮೆ ಅವರ ಅಕೌಂಟ್ ಹ್ಯಾಕ್ ಆಗಿತ್ತು. ಅವರ ಹೆಸರಲ್ಲಿ ಅವರ ಗೆಳೆಯರಿಗೆ ಮೆಸೇಜ್ ಮಾಡಿ ದುಡ್ಡು ಕೇಳುತ್ತಿದ್ದರು. ಆಗ ಒಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಹಂಚಿಕೊಂಡಿದ್ದ ಎಸ್ ನಾರಾಯಣ್, ನಾನು ಯಾರಿಗೂ ಹಣ ಕೇಳಿಲ್ಲ. ಯಾರೂ ಹಣ ಕೊಡಬೇಡಿ. ಅಕಸ್ಮಾತ್ ಕೊಟ್ಟರೆ ನಾನು ಜವಾಬ್ದಾರಿ ಅಲ್ಲ ಎಂದು ಪೋಸ್ಟ್ ಮಾಡಿದ್ದರು. ಈಗ ಮತ್ತೊಮ್ಮೆ ಅವರದ್ದೇ ಹೆಸರಲ್ಲಿ ಮತ್ತೊಂದು ಅಕೌಂಟ್ ಸೃಷ್ಟಿಸಿ, ಯುವ ರಾಜ್ ಕುಮಾರ್ ಅವರ ಎಕ್ಕ ಬಗ್ಗೆ ನೆಗೆಟಿವ್ ಕಮೆಂಟ್ಸ್ ಹಾಕಿಸುತ್ತಿದ್ದಾರೆ.
ಎಸ್ ನಾರಾಯಣ್ ಅವರಿಗೆ.. ನನ್ನ ಹೆಸರಲ್ಲಿ ಫೇಕ್ ನ್ಯೂಸ್ ಕ್ರಿಯೇಟ್ ಆಗ್ತಿದೆ ಅನ್ನೋ ಆಕ್ರೋಶ. ಆದರೆ.. ದೊಡ್ಮನೆ ಅಭಿಮಾನಿಗಳಿಗೆ ಎಕ್ಕ ಚಿತ್ರದ ಗೆಲುವನ್ನು ಸಹಿಸಿಕೊಳ್ಳದೇ ಇರೋರು ಯಾರು ಎಂಬ ಪ್ರಶ್ನೆಗೆ ಉತ್ತರ ಬೇಕಿದೆ.



