ರಾಜ್ಯ ಸರ್ಕಾರ ಮಾಡಿದ್ದೇ ಒಂದು. ಸುದ್ದಿಯಾಗಿದ್ದೇ ಮತ್ತೊಂದು. ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು ಇದು. ನಾಡಹಬ್ಬ ದಸರಾದಲ್ಲಿ ಆಯುಧ ಪೂಜೆ ಸಮಯದಲ್ಲಿ ಒಡೆಯಲಾಗುವ ಕುಂಬಳಕಾಯಿಯ ಒಳಗೆ ಹಾಗೂ ರಂಗೋಲಿಯಲ್ಲಿ ರಾಸಾಯನಿಕಯುಕ್ತ ಬಣ್ಣಗಳು, ಅರಿಶಿಣ, ಕುಂಕುಮ ಹಾಗೂ ಸುಣ್ಣ ಇತ್ಯಾದಿಗಳನ್ನು ಬಳಸುವಂತಿಲ್ಲ ಎಂದಷ್ಟೇ. ಆದರೆ ಕೆಲವು ಕಡೆ ಇದೇ ಆದೇಶವನ್ನು ರಾಜ್ಯ ಸರ್ಕಾರ ಆಯುಧಪೂಜೆಯನ್ನೇ ನಿಷೇಧಿಸಿದೆ. ಅರಿಷಿಣ, ಕುಂಕುಮ, ಕುಂಭಳಕಾಯಿಯನ್ನೇ ನಿಷೇಧಿಸಿದೆ ಎಂದು ವರದಿಯಾಗಿತ್ತು. ಆದರೆ ನಿಜವಾದ ಸುದ್ದಿ ಬೇರೆಯದೇ ಇತ್ತು.
ರಾಸಾಯನಿಕ ಕುಂಕುಮ, ಅರಿಷಿಣಕ್ಕೆ ಮಾತ್ರ ನಿರ್ಬಂಧ : ಕಾರಣ ಇದೆ
ವಿಧಾನಸೌಧ ವಿಕಾಸಸೌಧ ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆ ಸಮಯದಲ್ಲಿ ಕಛೇರಿಗಳ ಒಳಗೆ ಮತ್ತು ಕಾರಿಡಾರ್ಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಬಳಸುವುದರಿಂದ ಹಾನಿಕಾರಕವಾಗಿರುತ್ತದೆ. ಜೊತೆಗೆ, ಈ ರಾಸಾಯನಿಕ ಬಣ್ಣವು ನೆಲಹಾಸುವಿನ ಮೇಲೆ ಬಿದ್ದು ಸುಮಾರು ತಿಂಗಳುಗಳ ಕಾಲ ಹಾಗೆಯೇ ನೆಲಹಾಸುವಿನ ಮೇಲೆ ಅಂಟಿಕೊಂಡು ಉಳಿಯುತ್ತದೆ. ಇದರಿಂದ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದ ನೆಲಹಾಸುಗಳ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ. ಈ ಕುರಿತಂತೆ, ಹಿಂದಿನ ಸಾಲುಗಳಲ್ಲಿಯೂ ಸಹ ಅನೇಕ ಸುತ್ತೋಲೆಗಳನ್ನು ಹೊರಡಿಸಿದ್ದಾಗ್ಯೂ, ಕೆಲವು ಇಲಾಖೆ/ಶಾಖೆಗಳಲ್ಲಿ ಈ ಸೂಚನೆಗಳನ್ನು ಪಾಲನೆ ಮಾಡದಿರುವುದು ವಿಷಾದನೀಯವಾಗಿದೆ.
ಆದುದರಿಂದ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ 2023ರ ಅಕ್ಟೋಬರ್ ಮಾಹೆಯಲ್ಲಿ ಆಯುಧ ಪೂಜೆ ನೆರವೇರಿಸುವಾಗ ಕಛೇರಿಯ ಒಳಗೆ ಕಾರಿಡಾರ್ಗಳಲ್ಲಿ ಕುಂಬಳಕಾಯಿ ಮತ್ತು ರಂಗೋಲಿಗಳಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ಬಣ್ಣ/ಕುಂಕುಮ/ಅರಿಠಿನ/ಸುಣ್ಣ ಹಾಗೂ ಇನ್ನಿತರ ವಸ್ತುಗಳನ್ನು ಕಡ್ಡಾಯವಾಗಿ ಬಳಸದಂತೆ ಈ ಮೂಲಕ ತಿಳಿಸಲಾಗಿದೆ. ಮುಂದುವರೆದು, ಪೂಜಾ ದಿನದಂದು ಕಛೇರಿಯಿಂದ ಹೊರಡುವ ಮುನ್ನ ದೀಪಗಳನ್ನು ಹಾಗೂ ವಿದ್ಯುತ್ ಸ್ವಿಚ್ಗಳನ್ನು ನಂದಿಸಿ ತೆರಳುವಂತೆ ಸೂಚಿಸಲಾಗಿದೆ. ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ವ್ಯವಸ್ಥಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ.
ಪಾರಂಪರಿಕ ಕಟ್ಟಡಗಳ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿ/ನೌಕರರ ಆದ ಕರ್ತವ್ಯವಾಗಿದ್ದು, ಮೇಲೆ ತಿಳಿಸಲಾದ ಸೂಚನೆಗಳನ್ನು ಸ್ವಪ್ರೇರಿತರಾಗಿ ಪಾಲಿಸುವ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದು ಸೂಕ್ತವಾಗಿರುತ್ತದೆ. ಆದಾಗ್ಯೂ ಸ್ಪಂದಿಸದಿದ್ದಲ್ಲಿ, ಸಂಬಂಧಪಟ್ಟ ಇಲಾಖೆ/ಶಾಖೆಯವರ ಮೇಲೆ ಅನಿವಾರ್ಯವಾಗಿ ಜವಾಬ್ದಾರಿಯನ್ನು ನಿಗಧಿಪಡಿಸಬೇಕಾಗುತ್ತದೆಂದು ಈ ಮೂಲಕ ತಿಳಿಸಲಾಗಿದೆ.
ಯಾಕೆ ಇಂತಹ ಆದೇಶ ಜಾರಿಗೆ..?
ಇದು ಒಟ್ಟಾರೆ ಆದೇಶ. ಈ ಆದೇಶದ ಒಟ್ಟಾರೆ ಸಂದೇಶ ಇಷ್ಟೆ, ಕೆಮಿಕಲ್ ಇಲ್ಲದ ಕುಂಕುಮ, ಅರಿಷಿಣಗಳ ಬಳಕೆಗೆ ನಿಷೇಧ ಇಲ್ಲ ಎನ್ನುವುದು. ಕೆಮಿಕಲ್ ಇರುವ ಅರಿಷಿಣ, ಕುಂಕುಮ ಬಳಸಿದರೆ ಅದು ಸರ್ಕಾರಿ ಕಚೇರಿ, ವಿಧಾನಸೌಧದ ಗೋಡೆ, ನೆಲಹಾಸುಗಳಲ್ಲಿ ಹಾಗೆಯೇ ಉಳಿಯುತ್ತದೆ ಎನ್ನುವುದು ಎಚ್ಚರಿಕೆ. ಇದನ್ನು ಈ ಹಿಂದೆಯೂ ಮಾಡಲಾಗಿತ್ತು. ಈಗ್ಯಾಕೆ ವಿವಾದ ಎನ್ನುವುದು ಸರ್ಕಾರದ ಪ್ರಶ್ನೆ. ಅಲ್ಲದೆ ಪೂಜೆ, ಆಚರಣೆಗಳಿಗೆ ಯಾವುದೇ ನಿರ್ಬಂಧ ಇಲ್ಲ.
ಇನ್ನು ತ್ಯಾಜ್ಯಗಳನ್ನು ಎಲ್ಲೆಂದರೆ ಅಲ್ಲಿ ಎಸೆಯಬೇಡಿ ಎನ್ನುವುದರಲ್ಲೂ ತಪ್ಪು ಹುಡುಕುವುದೇಕೆ. ಮತ್ತೊಂದು ವಿಷಯವೆಂದರೆ, ಇತ್ತೀಚೆಗೆ ಬಿಸಿಲು ಹೆಚ್ಚಿರುವ ಕಾರಣ ಅಗ್ನಿ ಅನಾಹುತಗಳು ಹೆಚ್ಚಾಗುತ್ತಿವೆ. ಪೂಜೆ ಮುಗಿಸಿ ಮನೆಗೆ ಹೋದ ನಂತರ ವಿದ್ಯುದ್ದೀಪ ಅಥವಾ ದೀಪಗಳು ಉರಿಯುತ್ತಿದ್ದರೆ ಅಪಾಯ ಆಗಬಹುದು ಎಂಬ ಮುನ್ನೆಚ್ಚರಿಕೆಯೇ ಹೊರತು, ದೀಪಗಳನ್ನು ಉರಿಸಲೇಬೇಡಿ ಎಂದಲ್ಲ.



