ಅಯೋಧ್ಯೆಯಲ್ಲಿ ರಾಮಮಂದಿರ. ಮುಂದಿನ ವರ್ಷ 22ರಂದು ನನಸಾಗುತ್ತಿದೆ. ಇದು ಶತಮಾನಗಳ ಹೋರಾಟದ ಫಲ. ರಾಮಮಂದಿರ ಹೋರಾಟದಲ್ಲಿ ಇತಿಹಾಸದಲ್ಲಿ ಅದೆಷ್ಟೇ ಜನ ಬಂದು ಹೋದರೂ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿಯವರ ಪಾತ್ರ ದೊಡ್ಡದು. ರಾಮಮಂದಿರ ಹೋರಾಟದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಪೇಜಾವರ ವಿಶ್ವೇಷ ತೀರ್ಥ, ಅನಂತಕುಮಾರ್ ಸೇರಿದಂತೆ ಹಲವರು ಇದ್ದರೂ ಅಡ್ವಾಣಿ, ಜೋಷಿಯವರ ಪಾಲು ದೊಡ್ಡದು. ಆದರೆ ಈಗ ಅದೇ ವಿವಾದಕ್ಕೆ ಕಾರಣವಾಗಿದೆ.
ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರನ್ನು ರಾಮಮಂದಿರ ಉದ್ಘಾಟನೆಗೆ ಬರುವುದು ಬೇಡ ಎಂದು ಮನವಿ ಮಾಡಿದ್ದೇವೆ ಎಂದು ರಾಮ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿಕೆ ನೀಡಿದ್ದೇ ತಡ, ವಿವಾದ ಭುಗಿಲೆದ್ದಿತು. ಬಿಜೆಪಿಯ ಹಿರಿಯ ಮುತ್ಸದ್ಧಿ ಸಂಸ್ಥಾಪಕ ಸದಸ್ಯರಾದ ಲಾಲ್‌ಕೃಷ್ಣ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿಯವರಿಗೆ ತಮ್ಮ ವಯಸ್ಸಿನ ಕಾರಣಕ್ಕೆ ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸದಿರುವಂತೆ ಮನವಿ ಮಾಡಲಾಗಿದೆ. ಅದಕ್ಕೆ ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ . ಎರಡೂ ಕುಟುಂಬದವರನ್ನು ಸಂಪರ್ಕಿಸಿ ಅವರ ವಯಸ್ಸನ್ನು ಪರಿಗಣಿಸಿ, ಅವರನ್ನು ಸಮಾರಂಭಕ್ಕೆ ಬರದಂತೆ ವಿನಂತಿ ಮಾಡಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ.


ವಿವಾದಕ್ಕೆ ಕಾರಣ ಏನೆಂದು ಹುಡುಕಿದರೆ ದೇವೇಗೌಡ, ದಲೈಲಾಮ ಮೊದಲಾದವರನ್ನು ಆಹ್ವಾನಿಸಿರುವುದು ತಿಳಿಯುತ್ತದೆ. ಮಾಜಿ ಪ್ರಧಾನಿಗಳೂ ಆಗಿರುವ ದೇವೇಗೌಡರಿಗೆ ಕೂಡಾ 90 ವರ್ಷ ವಯಸ್ಸಾಗಿದೆ. 90 ವರ್ಷದ ದೇವೇಗೌಡರಿಗೆ ಇಲ್ಲದ ನಿರ್ಬಂಧ, ಮುರಳಿ ಮನೋಹರ ಜೋಷಿ (90 ವರ್ಷ) ಹಾಗೂ ಎಲ್.ಕೆ.ಅಡ್ವಾಣಿ (96 ವರ್ಷ)ಯವರಿಗೆ ಮಾತ್ರ ಏಕೆ? ಇಷ್ಟಕ್ಕೂ ಉತ್ತರ ಪ್ರದೇಶ ಹಾಗೂ ಕೇಂದ್ರ ಎರಡೂ ಕಡೆ ಬಿಜೆಪಿಯದ್ದೇ ಸರ್ಕಾರ. ಹಿರಿಯ ನಾಯಕರ ಬಗ್ಗೆ ವಿಶೇಷ ಆದ್ಯತೆ ಕೊಡಲಾರದಷ್ಟು ಸಮಸ್ಯೆ ಇದೆಯೇ ಎನ್ನುವುದು ಇನ್ನೊಂದು ಪ್ರಶ್ನೆ.
ವಿಶ್ವ ಹಿಂದೂ ಪರಿಷತ್ ಮುಖಂಡರು ಎಲ್ ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರಿಗೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಆಹ್ವಾನ ನೀಡಲಾಗಿದೆ. ಇಬ್ಬರನ್ನು ಭೇಟಿಯಾಗಿ ಆಹ್ವಾನಿಸಲಾಗಿದೆ. ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಹಾಗೂ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಈ ವೇಳೆ ಇಬ್ಬರು ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.



