ಆಟೋ ರಾಜ ಎಂದರೆ ಶಂಕರ್ ನಾಗ್ ನೆನಪಾಗುತ್ತಾರೆ. ಶಂಕರ್ ನಾಗ್ ಮೃತಪಟ್ಟು ದಶಕಗಳೇ ಕಳೆದಿದ್ದರೂ.. ಆಟೋ ಡ್ರೈವರುಗಳ ಪಾಲಿಗೆ ಶಂಕರ್ ನಾಗ್ ಎಂದರೆ ಇವತ್ತಿಗೂ ಅಭಿಮಾನ ಇದೆ. ಡಾ.ರಾಜ್, ವಿಷ್ಣು, ಅಂಬಿ, ರವಿಚಂದ್ರನ್, ಶಿವಣ್ಣ, ಪುನೀತ್, ದರ್ಶನ್, ಉಪೇಂದ್ರ, ಯಶ್, ಗಣೇಶ್, ವಿಜಯ್.. ಹೀಗೆ ಹಲವು ಸ್ಟಾರ್ ಹೀರೋಗಳಿದ್ದರೂ.. ನಂ.1 ಸ್ಥಾನ ಇವತ್ತಿಗೂ ಶಂಕ್ರಣ್ಣಂದೇ. ಆದರೆ.. ಹೀರೋಯಿನ್ನುಗಳಲ್ಲಿ.. ಆ ಸ್ಥಾನಕ್ಕೆ ಬಂದಿರೋರು ರಚಿತಾ ರಾಮ್.
ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ (Rachita Ram) ಈಗ ಆಟೋ ಚಾಲಕರ ಸಂಘದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ರಚಿತಾ ರಾಮ್, ಹೊಸ ಜವಾಬ್ದಾರಿಯನ್ನು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಖಾಕಿ ಬಟ್ಟೆ ಧರಿಸಿ ಆಟೋ ಮುಂದೆ ಫೋಸ್ ನೀಡಿ, ಆಟೋ ಡ್ರೈವ್ ಕೂಡಾ ಮಾಡಿದ್ದಾರೆ.
ಬೆಂಗಳೂರಿನ ಆರ್. ಆರ್. ನಗರದಲ್ಲಿರುವ ರಚಿತಾ ರಾಮ್ ಮನೆ ಮುಂದೆ ಇಂದು ಆಟೋಗಳದ್ದೇ ದರ್ಬಾರು. ನೂರಾರು ಆಟೋ ಚಾಲಕರು ವಿಶೇಷವಾಗಿ ಮಹಿಳಾ ಆಟೋ ಚಾಲಕಿಯರು ರಚಿತಾ ರಾಮ್ ಮನೆಗೆ ಹೋಗಿ ಅವರನ್ನು ಪ್ರೀತಿಯಿಂದ ಸ್ವಾಗತಿಸಿ, ಅವರಿಗೆ ಹೊಸ ಜವಾಬ್ದಾರಿಯನ್ನು ನೀಡಿದ್ರು. ಆಟೋ ಚಾಲಕರ ಪ್ರೀತಿಗೆ ಕರಗಿಹೋದ ರಚಿತಾ ರಾಮ್, ಚಪ್ಪಲಿ ತೆಗೆದು, ಖಾಕಿ ಬಟ್ಟೆಗೆ ನಮಸ್ಕಾರ ಮಾಡಿ ಅದನ್ನು ಧರಿಸಿದ್ದಲ್ಲದೆ ಆಟೋ ಹತ್ತಿ, ಆಟೋಗೆ ಕೈ ಮುಗಿದು, ಆಟೋ ಓಡಿಸುವ ಪ್ರಯತ್ನ ಮಾಡಿದ್ರು.
ಕನ್ನಡದಲ್ಲಿ ಬಹುತೇ ಎಲ್ಲ ಹೀರೋಗಳೂ ಆಟೋ ಡ್ರೈವರ್ ಕ್ಯಾರೆಕ್ಟರ್ ಮಾಡಿದ್ದಾರೆ. ಆದರೆ.. ಹೀರೋಯಿನ್ನುಗಳ ವಿಚಾರಕ್ಕೆ ಬಂದರೆ.. ಜಯಮಾಲಾ, ಮಾಲಾಶ್ರೀ ಅವರಂತಹ ಕೆಲವರನ್ನು ಬಿಟ್ಟರೆ ಆಟೋ ಡ್ರೈವರ್ ಕ್ಯಾರೆಕ್ಟರ್ ಮಾಡಿಲ್ಲ. ಜಯಮಾಲಾ ಆಟೋ ಡ್ರೈವರ್ ಕ್ಯಾರೆಕ್ಟರ್ ಮಾಡಿರೋದು ಕೂಡಾ ಶಂಕರ್ ನಾಗ್ ಸಿನಿಮಾದಲ್ಲಿ ಎನ್ನುವುದು ವಿಶೇಷ. ಇನ್ನು ರಚಿತಾ ರಾಮ್ ಕೂಡಾ ಆಟೋ ಡ್ರೈವರ್ ಪಾತ್ರ ಮಾಡಿಲ್ಲ. ಆದರೆ.. ರಿಯಲ್ ಲೈಫಿನಲ್ಲಿ ಆಟೋ ಡ್ರೈವರುಗಳ ಸಂಘದ ರಾಯಭಾರಿಯಾಗಿದ್ದಾರೆ.
ʻʻಅತಿರಥ ಮಹಾರಥ ಸಾರಥಿಗಳಿಗೆ ನನ್ನ ಸಮಸ್ಕಾರ, ನನ್ನನ್ನು ಆಟೋ ಚಾಲಕರ ಸಂಘದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದ್ದಕ್ಕೆ ಧನ್ಯವಾದಗಳುʼʼ ಎಂದಿದ್ದಾರೆ ರಚಿತಾ. ರಚಿತಾ ರಾಮ್ ಅವರು ತಮ್ಮ ರಾಯಭಾರಿಯಾಗಿದ್ದನ್ನು ಅನೇಕ ಮಹಿಳಾ ಆಟೋ ಚಾಲಕಿಯರೂ ಸ್ವಾಗತಿಸಿದ್ದಾರೆ. ಬೆಂಗಳೂರಿನಲ್ಲಿ ಅಟೋ ಅಥವಾ ಕ್ಯಾಬ್ ಡ್ರೈವಿಂಗ್ ಎನ್ನುವುದು ಕೇವಲ ಗಂಡಸರ ವೃತ್ತಿಯಾಗಿ ಉಳಿದಿಲ್ಲ. ನೂರಾರು ಮಹಿಳೆಯರು ಆಟೋ, ಕ್ಯಾಬ್ ಓಡಿಸಿಕೊಂಡು ಹೆಮ್ಮೆಯಿಂದ ಬದುಕುತ್ತಿದ್ದಾರೆ. ಮೊದಲಿನಂತೆ ಆಟೋ ಓಡಿಸುವ ಹೆಣ್ಣು ಮಕ್ಕಳನ್ನು ಸ್ಪೆಷಲ್ ದೃಷ್ಟಿಯಿಂದ ನೋಡುವ ಮನಸ್ಥಿತಿ ಹೋಗಿದ್ದು, ನಾಗರಿಕರೂ ಅದನ್ನು ಸಹಜವಾಗಿ ಸ್ವೀಕರಿಸೋಕೆ ಶುರು ಮಾಡಿದ್ದಾರೆ. ಹೀಗಿರುವ ಹೊತ್ತಿನಲ್ಲೇ ರಚಿತಾ ರಾಮ್, ಆಟೋ ರಾಣಿಯಾಗಿದ್ದಾರೆ. ಒಟ್ಟಿನಲ್ಲಿ ಆಟೋ ಚಾಲಕರ ಸಂಘಕ್ಕೆ ಡಿಂಪಲ್ ಕ್ವೀನ್ ಕ್ಯೂಟ್ ಕ್ವೀನ್ ʻಬ್ರಾಂಡ್ ಅಂಬಾಸಿಡರ್ʼ ಸಿಕ್ಕಿದ್ದಾರೆ.



