ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಜಾತಿ ನಿಂದನೆಯ ಆರೋಪದಲ್ಲಿ ಕಲಬುರಗಿ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದಲಿತ ಸೇನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಭಂಡಾರಿ ಅವರ ದೂರಿನ ಮೇರೆಗೆ ಕೇಸ್ ರಿಜಿಸ್ಟರ್ ಮಾಡಿದ್ದಾರೆ ಪೊಲೀಸರು. ನಟಿ ನಯನಾ ವಿರುದ್ಧ ದಾಖಲಾಗಿರುವುದು ಅಟ್ರಾಸಿಟಿ ಕೇಸ್. ಅಂದರೆ ಜಾತಿ ನಿಂದನೆ ದೂರು.
ನಯನಾ ಮಾಡಿದ ತಪ್ಪು ಏನು..?
ಜುಲೈ 29ರಂದು ಮೈಸೂರಿನ ಸರಸ್ವತಿಪುರದಲ್ಲಿ, ಮೈಸೂರು ಮೆಟ್ರೊ ಮಿನಿಮಿಥಿ ಚಿಟ್ ಫಂಡ್ ಸಂಸ್ಥೆ ಕುರಿತಂತೆ ಕಾರ್ಯಕ್ರಮ ಇತ್ತು. ಆ ವೇಳೆ ನಯನಾ ಸಾಲ ಕೊಡುವವರು, ಪಡೆಯುವವರ ಬಗ್ಗೆ ಮಾತನಾಡುತ್ತಾ ಹೊಲಸು, ಹೊಲಗೇರಿ ಅನ್ನೋ ಪದವನ್ನು ಬಳಸಿದ್ದರು. ಅಷ್ಟೇ.
ಇದು ಜಾತಿಸೂಚಕ ನಿಂದನೆಯಾಗಿದ್ದು, ನಯನಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅನ್ನೋದು ದಲಿತ ಸಂಘಟನೆಯ ಒತ್ತಾಯ. ನಯನಾ ಅವರು ಮೇಲ್ಜಾತಿಯವರಾಗಿದ್ದು, ಉದ್ದೇಶಪೂರ್ವಕವಾಗಿಯೇ ಜಾತಿಯನ್ನು ನಿಂದಿಸಿದ್ದಾರೆ ಎನ್ನುವುದು ಆರೋಪ.
ಈ ಹಿಂದೆ ಉಪೇಂದ್ರ ಅವರೂ ಇದೇ ರೀತಿ ಹೊಲಗೇರಿ ಅನ್ನೋ ಪದ ಬಳಸಿದ್ದರು. ಊರು ಇದ್ದ ಕಡೆ ಹೊಲಗೇರಿ ಅನ್ನೋ ಪದ ಬಳಸಿದ್ದರು ಎಂಬ ಕಾರಣಕ್ಕೆ ಅಟ್ರಾಸಿಟಿ ಕೇಸ್ ದಾಖಲಾಗಿತ್ತು.ಕೊನೆಗೆ ಉಪೇಂದ್ರ ಕ್ಷಮೆಯಾಚನೆಯೊಂದಿಗೆ ಪ್ರಕರಣ ಇತ್ಯರ್ಥವಾಗಿತ್ತು. ಈಗ ನಯನಾ ಅವರು ಕೂಡಾ ಇದೇ ಪದ ಬಳಸಿ ಪೊಲೀಸ್ ಕೇಸ್ ಎದುರಿಸುವಂತಾಗಿದೆ.
ಅಂದಹಾಗೆ ಇತ್ತೀಚೆಗೆ ಅಟ್ರಾಸಿಟಿ ಕೇಸ್ ಎದುರಿಸುತ್ತಿರುವವರ ಸಂಖ್ಯೆ ದೊಡ್ಡದು. ಸೆಲಬ್ರಿಟಿಗಳನ್ನೇ ತೆಗೆದುಕೊಂಡರೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ದಸರಾ ಉದ್ಘಾಟನೆ ವಿವಾದದ ವೇಳೆ ದಲಿತರನ್ನು ಅವಮಾನಿಸಿದ ಆರೋಪ ಹೊತ್ತಿದ್ದಾರೆ. ಬಿಜೆಪಿ ಶಾಸಕ ರವಿಕುಮಾರ್ ಕೂಡಾ ಆರೋಪ ಹೊತ್ತಿದ್ದಾರೆ.
ತೆಲುಗು ನಟ, ರಶ್ಮಿಕಾ ಮಂದಣ್ಣ ಅವರ ಭಾವೀ ಪತಿ ವಿಜಯ್ ದೇವಕೊಂಡ ‘ರೆಟ್ರೋ’ ಎಂಬ ಚಲನಚಿತ್ರದ ಪೂರ್ವ-ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಬುಡಕಟ್ಟು ಸಮುದಾಯದವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ SC/ST ಕಾಯ್ದೆಯಡಿ ಪ್ರಕರಣ ಎದುರಿಸ್ತಿದ್ದಾರೆ.
ಹಿಂದಿಯಲ್ಲಿ ಕಪಿಲ್ ಶರ್ಮಾ ನಟರಾದ ರಣದೀಪ್ ಹೂಡಾ, ಮುಕೇಶ್ ಖನ್ನಾ ಮತ್ತು ನಟಿ ಯುವಿಕಾ ಚೌಧರಿ, ಕ್ರಿಕೆಟರ್ ರವೀಂದ್ರ ಜಡೇಜಾ.. ಸೇರಿದಂತೆ ಕೆಲವು ಭಾರತೀಯ ಸೆಲೆಬ್ರಿಟಿಗಳು ಜಾತಿ ನಿಂದನೆ ಕೇಸ್ ಎದುರಿಸುತ್ತಲೇ ಇದ್ದಾರೆ.
ಭಾರತದಲ್ಲಿ ಜಾತಿ ನಿಂದನೆ (ಕ್ಯಾಸ್ಟ್ ಡಿಸ್‌ಕ್ರಿಮಿನೇಷನ್) ಸಾಮಾಜಿಕ ಸಮಸ್ಯೆಯಾಗಿ ಮುಂದುವರಿದಿದೆ. ಭಾರತದಲ್ಲಿ ಜಾತಿ ನಿಂದನೆ (Casteist abuse/Caste slur) ಎಂದು ಪರಿಗಣಿಸಲಾಗುವ ಪದಗಳು ಮುಖ್ಯವಾಗಿ SC/ST (Prevention of Atrocities) Act, 1989 ಮತ್ತು IPC ಸೆಕ್ಷನ್ 153A, 505(2) ಅಡಿಯಲ್ಲಿ ಕಾನೂನು ರೀತಿಯ ಅಪರಾಧಗಳಾಗಿವೆ.
ಯಾವ್ಯಾವ ಪದಗಳನ್ನು ಬಳಸಬಾರದು..?
ಚಂಡಾಲ, ಚಾಂಡಾಲ, ಮಾದಿಗ, ಮಾದಿಗಾ.. ಹೊಲೆಯ, ಹೊಲೇರವನೇ, ಹೊಲಗೇರಿ, ಹೊಲಸು ಹೊಲೆಯ, ಚಲವಾದಿ, ಚಪ್ಪಲಿ ಹೊಲೆಯೋನೇ (ಚಮ್ಮಾರ), ಹೇಲು ಹೊರೋನೇ (ಭಂಗೀ), ಕಿರಾತಕ, ಬೇಡ, ದೊಕ್ಲೋರು.. ಇತ್ಯಾದಿ ಜಾತಿಗಳನ್ನು ಉದ್ದೇಶಿಸಿ ಹೇಳುವ ಪದಗಳು ಜಾತಿನಿಂದನೆ ಕೇಸ್ ತಂದೊಡ್ಡಬಹುದು. ಎಚ್ಚರದಿಂದ ಇರಬೇಕು. ಗೌರವ ಕೊಟ್ಟು ಮಾತನಾಡಿಸಬೇಕು.
ಆದರೆ ಇದೇ ಜಾತಿ ನಿಂದನೆ ಮೇಲ್ಜಾತಿಯವರನ್ನು ಬೈದರೆ ಅಪ್ಲೈ ಆಗುವುದಿಲ್ಲ. ಅದೂ ಗೊತ್ತಿರಲಿ.



