ʻʻಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದʼʼ ಕಮಲ್ ಹಾಸನ್ ಅವರ ಈ ಮಾತು ಭಾರೀ ವಿವಾದ ಸೃಷ್ಟಿಸಿದೆ. ಕನ್ನಡ ಹುಟ್ಟಿದ್ದೇ ತಮಿಳು ಭಾಷೆಯಿಂದ ಎಂಬ ಕಮಲ್ ಹಾಸನ್ ಹೇಳಿಕೆ ವಿವಾದವಾಗುವುದಕ್ಕೆ ಇನ್ನೂ ಒಂದು ಕಾರಣ ಇದೆ. ಕಮಲ್ ಹಾಸನ್ ಅವರು ಆ ಮಾತು ಹೇಳಿದ್ದು ಶಿವಣ್ಣ ಕುರಿತು ಮಾತನಾಡುವಾಗ. ಕಮಲ್ ಆ ಮಾತು ಹೇಳಿದಾಗ ಶಿವಣ್ಣ ನಗುತ್ತಾರೆ. ಅಯ್ಯೋ.. ಇದು ಶಿವಣ್ಣನಿಗೆ ಗೊತ್ತಾಗಲಿಲ್ಲವಾ ಎಂಬುದು ಕೆಲವರ ಪ್ರಶ್ನೆ. ಕಮಲ್ ಹಾಸನ್ ಎದುರು ಮಾತನಾಡುವುದಕ್ಕೆ ಹೆದರಿದರು, ಇವರು ರಾಜ್ ಕುಮಾ ಅವರ ಮಗನಾ.. ಹೇಡಿ ಕಣ್ರೀ ಅಂತೆಲ್ಲ ಮಾತನಾಡಿಕೊಳ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟು ಹಾಕಿ ಟ್ರೋಲ್ ಮಾಡ್ತಿದ್ದಾರೆ. ಅದಕ್ಕೆ ಶಿವಣ್ಣ ಉತ್ತರ ಕೊಟ್ಟಿದ್ದಾರೆ.
ʻʻನಮ್ಮ ಅಥವಾ ನಮ್ಮ ಕುಟುಂಬದ ಕನ್ನಡ ಪ್ರೀತಿ ಏನು ಅನ್ನೋದು ಜಗತ್ತಗೇ ಗೊತ್ತು. ಯಾರೋ ಒಬ್ಬರು ಏನೋ ಮಾತನಾಡಿದಾಗ ಮಾತ್ರವೇ ಕನ್ನಡ ಪ್ರೇಮ ಬರೋದಲ್ಲ. ಕನ್ನಡ ಪ್ರೇಮ ಅನ್ನೋದು ಶಾಶ್ವತವಾಗಿ ಜೊತೆಯಲ್ಲಿರಬೇಕು. ನಾವು ಕನ್ನಡಕ್ಕಾಗಿ ಹೋರಾಡುತ್ತೀವಿ. ಬೇಕಾದರೆ ಕನ್ನಡಕ್ಕಾಗಿ ಸಾಯುತ್ತೀವಿ. ಸುಮ್ಮನೆ ಕೇವಲ ಮಾತಿನಲ್ಲಿ ಮಾತನಾಡಿ, ಪೋಸು ಕೊಡುವುದು ದೊಡ್ಡ ವಿಷಯ ಅಲ್ಲ. ಕನ್ನಡಕ್ಕೆ ಏನು ಮಾಡುತ್ತಿದ್ದೀವಿ ಎಂಬುದನ್ನು ನೀವೇ ಹುಡುಕಿ ನೋಡಿ. ನಿಮ್ಮ ಮನಸ್ಸನ್ನು ಕೇಳಿಕೊಂಡು ನೋಡಿ. ನಿಮಗೆ ಉತ್ತರ ಸಿಗುತ್ತದೆ ಎಂದಿದ್ದಾರೆ.
ಕನ್ನಡ ಸಿನಿಮಾಕ್ಕೆ ನೀವು ಏನು ಮಾಡಿದ್ದೀರಿ, ಯಾರೋ ಸ್ಟಾರ್ ನಟರ ಸಿನಿಮಾಗಳಿಗೆ ಬೆಂಬಲ ಕೊಟ್ಟರೆ ಮಾತ್ರ ಸಾಲದು. ಹೊಸಬರ ಸಿನಿಮಾಕ್ಕೂ ಬೆಂಬಲ ಕೊಡಿ. ನಾವು ಮಾಡುತ್ತಿರುವುದು ಸರಿಯಾ, ತಪ್ಪಾ ಎಂದು ನೀವೇ ಕೇಳಿಕೊಳ್ಳಿ, ನಿಮಗೆ ಉತ್ತರ ಸಿಗುತ್ತೆ ಎಂದಿದ್ದಾರೆ ಶಿವರಾಜ್ ಕುಮಾರ್.
ಇನ್ನು ಕಮಲ್ ಹಾಸನ್ ಅವರ ಆ ಹೇಳಿಕೆಗೆ ಸಂಬಂಧಪಟ್ಟಂತೆ ʻʻವೇದಿಕೆ ಮೇಲೆ ಏನು ತಪ್ಪಾಯ್ತು ಎಂಬುದು ನನಗೂ ಗೊತ್ತಾಗಲಿಲ್ಲ. ಇಲ್ಲಿಗೆ ಬಂದು ನೋಡಿದಾಗ ಅದು ವಿವಾದ ಆಗಿತ್ತು. ಅವರೂ ಇಲ್ಲಿಯೇ ಇದ್ದರು, ಎಲ್ಲರೊಟ್ಟಿಗೆ ಮಾತನಾಡುತ್ತಿದ್ದರು. ಇಲ್ಲಿಯೇ ಅವರನ್ನು ಕೇಳಬಹುದಿತ್ತು, ಆದರೆ ಯಾಕೆ ಆಗ ಕೇಳಲಿಲ್ಲವೊ ಗೊತ್ತಿಲ್ಲ. ಕಮಲ್ ಹಾಸನ್ ಹಿರಿಯರು, ಯಾವುದು ಸರಿ ತಪ್ಪು ಎಂಬುದು ಅವರಿಗೆ ಗೊತ್ತಿರುತ್ತೆ. ಅವರಿಗೂ ಕನ್ನಡ ಭಾಷೆ ಬಗ್ಗೆ ಪ್ರೀತಿ ಇದೆ. ಸಾಕಷ್ಟು ಕನ್ನಡ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ. ಈ ಸಮಯದಲ್ಲಿ ಏನು ಮಾಡಬೇಕೊ ಅದನ್ನು ಅವರು ಮಾಡುತ್ತಾರೆ ಎಂಬ ಭರವಸೆ ನನಗೆ ಇದೆʼʼ ಎಂದು ಹೇಳಿದ್ದಾರೆ.
ಅತ್ತ ಕಮಲ್ ಹಾಸನ್ ಅವರೂ ಪ್ರಕರಣದ ಬಗ್ಗೆ ಕ್ಷಮೆ ಕೇಳಿಲ್ಲ. ನನ್ನನ್ನೂ ಸೇರಿದಂತೆ ಯಾವ ರಾಜಕಾರಣಿಗಳಿಗೂ ಭಾಷೆಯ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ.ಅಷ್ಟೊಂದು ಶಿಕ್ಷಣ ನಮಗೆ ಇಲ್ಲ. ಭಾಷೆ ಬಗ್ಗೆ ಮಾತನಾಡುವ ಕೆಲಸವನ್ನು ಭಾಷಾ ತಜ್ಞರು, ಇತಿಹಾಸಕಾರರು, ಪುರಾತತ್ವ ತಜ್ಞರಿಗೆ ಬಿಡೋಣ. ಇದು ವಿವರಣೆಯೇ ಹೊರತು, ಕ್ಷಮೆ ಅಲ್ಲ ಎಂದು ವಿವರಣೆ ಕೊಟ್ಟಿದ್ದಾರೆ.
ಡಾ.ರಾಜ್ ಅವರ ಬಗ್ಗೆಯೂ ಮಾತನಾಡಿರುವ ಕಮಲ್ ಹಾಸನ್ ರಾಜ್‌ಕುಮಾರ್ ಅಣ್ಣ ನನಗೆ ತಂದೆಯಂತೆ, ಸಹೋದರಂತೆ. ನಾವೆಲ್ಲಾ ಒಂದು ಕುಟುಂಬ. ಪ್ರೀತಿಯಿಂದ ಹೇಳಿದ ಮಾತನ್ನು ಟೀಕೆ ಮಾಡಲಾಗಿದೆ. ಅವರ ದೃಷ್ಟಿಕೋನದಿಂದ ನೋಡಿದಾಗ ಅವರದ್ದು ಹೇಳಿದ್ದು ಸರಿ ಅನ್ನಿಸಬಹುದು. ನನ್ನ ದೃಷ್ಟಿಕೋನದಿಂದ ನೋಡಿದಾಗ ನನಗೆ ನಾನು ಹೇಳಿದ್ದೇ ಸರಿ ಎನಿಸಬಹುದು. ಆದರೆ ಅದಕ್ಕೆ ಮೂರನೇ ಆಂಗಲ್ ಕೂಡ ಒಂದು ಇದೆ. ಸಂಶೋಧಕರು, ಭಾಷಾ ತಜ್ಞರು ಈ ಎರಡರಲ್ಲಿ ಯಾವುದು ಸರಿ ಎಂದು ಹೇಳಬೇಕು” ಎಂದು ಕಮಲ್ ಹಾಸನ್ ಹೇಳಿದ್ದಾರೆ.



