ಧನ್ಯಾ ರಾಮ್ʻಕುಮಾರ್. ಪುನೀತ್ ರಾಜ್ʻಕುಮಾರ್ ಅವರ ಅಕ್ಕ ಪೂರ್ಣಿಮಾ ಮತ್ತು ನಟ ರಾಮ್ʻಕುಮಾರ್ ಅವರ ಮಗಳು. ಧನ್ಯಾ ಅವರ ಮೊದಲ ಸಿನಿಮಾ ನಿನ್ನ ಸನಿಹಕೆ ಸಿನಿಮಾವನ್ನು ಅಣ್ಣಾವ್ರ ಮಕ್ಕಳೆಲ್ಲ ಸೇರಿ ಪ್ರಮೋಟ್ ಮಾಡಿದ್ದರು. ಸಿನಿಮಾ ಬಾಕ್ಸಾಫೀಸಿನಲ್ಲಿ ದೊಡ್ಡ ಮಟ್ಟದ ಹಿಟ್ ಆಗದಿದ್ದರೂ, ಧನ್ಯಾ ನಟನೆಯಲ್ಲಿ ಗಮನ ಸೆಳೆದಿದ್ದರು. ಇದೀಗ ಅವರ 2ನೇ ಸಿನಿಮಾ ಕಾಲಾಪತ್ಥರ್ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ.
ಕಾಲಾಪತ್ಥರ್. ಕೆಂಡಸಂಪಿಗೆ, ಕಾಲೇಜ್ ಕುಮಾರ ಖ್ಯಾತಿಯ ವಿಕ್ಕಿ ವರುಣ್ ಹೀರೋ ಆಗಿರುವ ಸಿನಿಮಾ. ಈ ಸಿನಿಮಾದಲ್ಲಿ ನಾಯಕಿಯಾಗಿರೋದು ಧನ್ಯಾ ರಾಮ್ʻಕುಮಾರ್. ಈ ಚಿತ್ರದ ಹಾಡನ್ನು ರಿಲೀಸ್ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಕೈಜೋಡಿಸಿದ್ದಾರೆ ಅಶ್ವಿನಿ ಪುನೀತ್ ರಾಜ್ʻಕುಮಾರ್. ಇತ್ತೀಚೆಗೆ ಈ ಚಿತ್ರದ ‘ಗೋರುಕನ ಗಾನ..’ ಸಾಂಗ್ ರಿಲೀಸ್ ಆಗಿದ್ದು, ಹಾಡನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ನಟಿ ತಾರಾ ಅನುರಾಧಾ ಬಿಡುಗಡೆ ಮಾಡಿದ್ದಾರೆ.
ಗೋರುಕನ ಗಾನ..’ ಎಂಬ ಈ ವಿಶೇಷ ಸಾಂಗ್ಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ಡಾ ವಿ ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ, ‘ಸರಿಗಮಪ’ ಖ್ಯಾತಿಯ ಗಾಯಕಿ ಶಿವಾನಿ ಈ ಹಾಡನ್ನು ಹಾಡಿರುವುದು.
ಇನ್ನೊಂದು ವಿಶೇಷವೆಂದರೆ ಈ ಚಿತ್ರಕ್ಕೆ ಡೈರೆಕ್ಟರ್ ಸ್ವತಃ ವಿಕ್ಕಿ ವರುಣ್. ಇದು ನಮ್ಮ ಚಿತ್ರದ ಮೊದಲ ಹಾಡು. ಈ ಹಾಡಿನ ಮೂಲಕ ಮಂಗಳಮುಖಿಯರು ನಮ್ಮ ಸಿನಿಮಾದ ಕಥೆ ಹೇಳುತ್ತಾರೆ ಎಂದಿದ್ದಾರೆ ವಿಕ್ಕಿ ವರುಣ್. ನಿರ್ದೇಶಕನಾಗಬೇಕು ಎಂಬುದು ನನ್ನ ಕನಸು. ಆ ಕನಸನ್ನು ನನಸು ಮಾಡಿದ ನಿರ್ಮಾಪಕರಿಗೆ ನಾನು ಆಭಾರಿ ಆಗಿದ್ದೇನೆ. ‘ದುನಿಯಾ’ ಸೂರಿ ಅವರ ಬಳಿ 10 ವರ್ಷ ಕೆಲಸ ಮಾಡಿರುವ ಅನುಭವದಿಂದ ಡೈರೆಕ್ಷನ್ ನನಗೆ ಅಷ್ಟೇನೂ ಕಷ್ಟ ಎನಿಸಲಿಲ್ಲ ಎಂದಿದ್ದಾರೆ ವಿಕ್ಕಿ ವರುಣ್. ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಮತ್ತು ನಾಗರಾಜ್ ಬಿಲ್ಲಿನಕೋಟೆ ಈ ಸಿನಿಮಾ ನಿರ್ಮಾಪಕರು.
ಸಾಹಿತ್ಯ ಬರೆದಿರುವ ನಾಗೇಂದ್ರ ಪ್ರಸಾದ್ ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಅವರನ್ನು ಹೊಗಳಿದರು. ದೇಸೀ ಶೈಲಿಯಲ್ಲಿ ಸಂಗೀತ ನೀಡುವ ಪ್ರಮುಖರಲ್ಲಿ ಒಬ್ಬರು ಅನೂಪ್ ಸಿಳೀನ್. ಗೋರುಕಾನ ಗಾನ ಎಂದರೆ ಸುವ್ವಿ ಎಂಬ ಅರ್ಥವೂ ಇದೆ. ಇದು ಸೋಲಿಗರು ಬಳಸುವ ಪದ ಎಂಬ ಮಾಹಿತಿಯನ್ನೂ ನೀಡಿದರು. ಹಾಡಿನ ರಿಲೀಸ್ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್, ತಾರಾ ಅವರಷ್ಟೇ ಅಲ್ಲದೆ ಸಿಂಪಲ್ ಸುನಿ, ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್, ಉದ್ಯಮಿಗಳಾದ ಆನಂದ್, ಜಗದೀಶ್ ಚೌಧರಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.
ಹಾಡಿನ ಲಿರಿಕಲ್ ವಿಡಿಯೋಗೆ ಆಗಮಿಸಿದ್ದ ಪೂರ್ಣಿಮಾ ಮಗಳ ನಟನೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಅಷ್ಟೇ ಅಲ್ಲ, ಧನ್ಯಾಗೆ ಈ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದ್ದು ಅದೃಷ್ಟ ಎಂದೂ ಹೇಳಿದರು.



