ಜಗತ್ತಿನ ಮೋಸ್ಟ್ ಸಕ್ಸಸ್ʻಫುಲ್ ಪ್ರೊಡ್ಯೂಸರ್ ಯಾರು..? ಎಂದು ಯಾರಾದರೂ ಅಶ್ವಿನಿ ಪುನೀತ್ ಅವರಿಗೆ ಪ್ರಶ್ನೆ ಹಾಕಿದರೆ ಅವರು ಹಿಂದು ಮುಂದು ಯೋಚಿಸದೆ ಕೊಟ್ಟಿರುವ ಉತ್ತರ ಪಾರ್ವತಮ್ಮ ರಾಜ್ ಕುಮಾರ್ ಅವರದ್ದು. ಅದಕ್ಕೆ ಅವರು ಕಾರಣವನ್ನೂ ಕೊಡ್ತಾರೆ. ಅಷ್ಟೇ ಅಲ್ಲ, ಯುವ ಹೊಸ ಸಿನಿಮಾ ಕುರಿತು ಅಪ್‌ಡೇಟ್ ಕೂಡಾ ಕೊಟ್ಟಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್, ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ. ತಮ್ಮ ಸಿನಿಮಾ ಜರ್ನಿಯ ಬಗ್ಗೆಯೂ ಮಾತನಾಡಿದ್ದಾರೆ ಅಶ್ವಿನಿ.
ʻಯುವʼ ಸಿನಿಮಾ ನಂತರ ಹೊಸ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಸುದೀರ್ಘ ಗ್ಯಾಪ್ ನಂತರ ಉತ್ತರ ಕೊಡುತ್ತಿರುವುದು ಅಶ್ವಿನಿ ಪುನೀತ್ ರಾಜ್ ಕುಮಾರ್. ಯುವ ಚಿತ್ರ ರಿಲೀಸ್ ಆದ ಬೆನ್ನಲ್ಲೇ ಯುವ ಸಾಂಸಾರಿಕ ಜೀವನವೂ ಬಿರುಗಾಳಿಗೆ ಸಿಕ್ಕು ಹದ ತಪ್ಪಿತ್ತು. ಯುವ ದಾಂಪತ್ಯ ಜೀವನ ಡಿವೋರ್ಸ್ ಹಂತ ತಲುಪಿದ್ದು, ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗಲೇ ಅಶ್ವಿನಿ ಪುನೀತ್ ತಮ್ಮ ಮಗ ʻಯುವ ರಾಜ್ ಕುಮಾರ್ʼ ಅವರಿಗಾಗಿ ಕಥೆ ಕೇಳುತ್ತಿದ್ದಾರಂತೆ. ಯುವ ಅಲಿಯಾಸ್ ಗುರು, ರಾಘವೇಂದ್ರ ರಾಜ್ ಕುಮಾರ ಮಗನಾದರೂ, ಪುನೀತ್ ತಮ್ಮ ಮಗನಂತೆಯೇ ನೋಡಿಕೊಂಡಿದ್ದರು. ಇದೀಗ ಅಶ್ವಿನಿಯವರೂ ಅದೇ ರೀತಿ ಸಾಗುತ್ತಿದ್ದಾರೆ.
ನಮ್ಮ ಕುಟುಂಬದ ಮುಂದಿನ ಭರವಸೆಯ ಹುಡುಗ ಯುವ. ಆತನಿಗಾಗಿ ಒಂದು ಕಮರ್ಷಿಯಲ್ ಸಿನಿಮಾ ಪ್ಲಾನ್ ನಡೆಯುತ್ತಿದೆ. ಕಥೆ ಕೇಳುತ್ತಿದ್ದೇನೆ ಎಂದಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್. ಈ ಹಿಂದೆ ತಾವು ನಿರ್ಮಾಣ ಮಾಡಿದ ಎಲ್ಲ ಸಿನಿಮಾಗಳೂ ಅಪ್ಪು ಓಕೆ ಮಾಡಿದ್ದ ಚಿತ್ರಗಳು. ಆಚಾರ್ & ಕೋ ಸೇರಿದಂತೆ ಎಲ್ಲ ಚಿತ್ರಗಳನ್ನೂ ನಾನು ಕೇವಲ ಎಕ್ಸಿಕ್ಯೂಟ್ ಮಾಡಿದೆ, ಅಷ್ಟೆ. ಪುನೀತ್ ಚಿತ್ರಗಳ ಕಥೆ, ತಂತ್ರಜ್ಞರು, ಕಲಾವಿದರು ಎಲ್ಲರನ್ನೂ ಓಕೆ ಮಾಡಿದ್ದರು. ಆದರೆ ಮುಂದಿನ ಹಾದಿ ಹಾಗಿರುವುದಿಲ್ಲ ಎಂದಿದ್ದಾರೆ ಅಶ್ವಿನಿ.
ತಮಗೆ ಅತ್ತೆ ಪಾರ್ವತಮ್ಮನವರೇ ಸ್ಫೂರ್ತಿ. ನನ್ನ ಪ್ರಕಾರ ಪಾರ್ವತಮ್ಮ ರಾಜ್ ಕುಮಾರ್ ಜಗತ್ತಿನ ಚಿತ್ರರಂಗದ ಅತ್ಯಂತ ಎತ್ತರದಲ್ಲಿರುವ ನಿರ್ಮಾಪಕಿ. ಪ್ರೊಡ್ಯೂಸರ್ ನಂ.1. ಏಕಂದ್ರೆ ಅವರು ಓಕೆ ಮಾಡಿದ್ದ ಚಿತ್ರಗಳಲ್ಲಿ ಶೇ.94 ರಷ್ಟು ಬ್ಲಾಕ್ ಬಸ್ಟರ್ ಚಿತ್ರಗಳು ಎನ್ನುವುದರಲ್ಲೇ ಅವರ ಪರ್ಫೆಕ್ಷನ್ ಇದೆ. ಅಷ್ಟರಮಟ್ಟಿಗಿನ ಯಶಸ್ಸು ಇಡೀ ಜಾಗತಿಕ ಚಿತ್ರರಂಗದಲ್ಲಿ ಯಾರಿಗೂ ಸಿಕ್ಕಿಲ್ಲ ಎಂದಿದ್ದಾರೆ ಅಶ್ವಿನಿ. ಹೀಗಾಗಿ ತಾವು ಕೂಡಾ ಪಾರ್ವತಮ್ಮನವರ ಹಾದಿಯಲ್ಲೇ ಸಾಗುವ ಸುಳಿವು ಕೊಟ್ಟಿದ್ದಾರೆ ಅಶ್ವಿನಿ ಪುನೀತ್.
ಮೊದಲೆಲ್ಲ ನಾನು ಅಪ್ಪು ಬೆನ್ನ ಹಿಂದೆ ಇರುತ್ತಿದ್ದೆ. ಹೊರಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ತೆರೆಯ ಹಿಂದೆ ಹ್ಯಾಪಿಯಾಗಿದ್ದೆ. ನಾನು, ಗಂಡ ಮತ್ತು ಮಕ್ಕಳ ನಡುವೆ ಖುಷಿ ಖುಷಿಯಾಗಿದ್ದೇ. ಆದರೆ ಅನಿರೀಕ್ಷಿತವಾಗಿ ಹೊಣೆ ಹೊರಬೇಕಾಗಿ ಬಂತು. ಜವಾಬ್ದಾರಿ ಸ್ವೀಕರಿಸಿದ್ದೇನೆ. ನಾನೀಗ ಮೊದಲಿನಂತೆ ಇಲ್ಲ. ಹೊರಗೆ ಕಾಣಿಸಿಕೊಳ್ಳೋದು ಹೆಚ್ಚಾಗಿದೆ. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ. ಜನರ ಜೊತೆ ಬೆರೆಯುತ್ತೇನೆ. ನೋಡಿದವರೆಲ್ಲ ನಿಮ್ಮಲ್ಲಿ ನಾವು ಅಪ್ಪುವನ್ನು ನೋಡ್ತಿದ್ದೇವೆ ಅಂತಾರೆ. ಅವರ ಪ್ರೀತಿಗೆ ನಾನು ಧನ್ಯಳಾಗಿದ್ದೇನೆ ಎಂದಿದ್ದಾರೆ ಅಶ್ವಿನಿ. ಅಷ್ಟೇ ಅಲ್ಲ, ಕಥೆಗಳನ್ನು ತಮ್ಮ ಇಬ್ಬರು ಮಕ್ಕಳು, ಹತ್ತಿರದ ಸಂಬಂಧಿಕರ ಜೊತೆ ಚರ್ಚಿಸುತ್ತಿದ್ದಾರಂತೆ.
ಪುನೀತ್ ಪಿಆರ್‌ಕೆ ಸಂಸ್ಥೆಯನ್ನು ಹುಟ್ಟುಹಾಕಿದ್ದೇ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವುದಕ್ಕೆ. ಅವರಿಗೆ ಅದರಲ್ಲಿ ಹಿಡಿತವೂ ಇತ್ತು.ಅನುಭವವೂ ಇತ್ತು. ನನಗೆ ಹೊಸದು. ಹೀಗಾಗಿ ಸ್ವಲ್ಪ ವಿಳಂಬವಾಗುತ್ತದೆ ಎಂದು ಸಮುಜಾಯಿಷಿಯನ್ನೂ ಕೊಟ್ಟಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್.
ಒಟ್ಟಿನಲ್ಲಿ ಯುವ ರಾಜ್ ಕುಮಾರ್ ಹೊಸ ಸಿನಿಮಾ ಪಿಆರ್‌ಕೆ ಬ್ಯಾನರಿಂದಲೇ ಬರುತ್ತದೆ ಎನ್ನುವುದು ಖಚಿತವಾಗಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ಪ್ರೊಡ್ಯೂಸರ್ ಆಗುತ್ತಿದ್ದಾರೆ. ಕಥೆ, ನಿರ್ದೇಶಕ ಯಾರು ಎನ್ನುವುದು ಮಾತ್ರ ಈಗಲೂ ಸಸ್ಪೆನ್ಸ್ ಆಗಿಯೇ ಇದೆ.



