ಅಶ್ವಿನಿ ಪುನೀತ್ ರಾಜ್ʻಕುಮಾರ್ ಅವರ ಬಗ್ಗೆ ತಲೆತಿರುಕನೊಬ್ಬ ಮಾಡಿದ ಅಸಭ್ಯ.. ಅಶ್ಲೀಲ.. ಅವಹೇಳನಕಾರಿ ಪೋಸ್ಟಿಗೂ.. ಸನಾತನ ಧರ್ಮಕ್ಕೂ ಏನು ಸಂಬಂಧ..? ಇಂತಾದ್ದೊಂದು ಪ್ರಶ್ನೆ ಹುಟ್ಟುಹಾಕಿರುವುದು ಸಿಎಂ ಸಿದ್ದರಾಮಯ್ಯ ಮಾಡಿರುವ ಒಂದು ಟ್ವೀಟ್. ಏಕೆಂದರೆ.. ಸಿದ್ದರಾಮಯ್ಯ ಅವರ ಪೋಸ್ಟ್ ಇಟ್ಟುಕೊಂಡು ಇದು ಅಶ್ವಿನಿ ಪುನೀತ್ ಅವರ ಬಗ್ಗೆ ಮಾಡಿದ ಅವಹೇಳನಕ್ಕೆ ಸಿದ್ದರಾಮಯ್ಯ ರಿಯಾಕ್ಷನ್ ಎಂದು ಮೀಡಿಯಾಗಳಲ್ಲಿ ಸುದ್ದಿಯಾಗುತ್ತಿದೆ. ಆದರೆ.. ಸಿದ್ದರಾಮಯ್ಯ ಟ್ವೀಟ್ʻನಲ್ಲಿ ಎಲ್ಲಿಯೂ ಇಂತಹ ಮಾತುಗಳಿಲ್ಲ. ಅಶ್ವಿನಿ ಪುನೀತ್ ರಾಜ್ʻಕುಮಾರ್ ಅವರ ಬಗ್ಗೆ ಮಾಡಿರುವ ಟ್ವೀಟ್ʻಗೆ ಪ್ರತಿಕ್ರಿಯೆ ಎಂಬ ಒಂದಕ್ಷರವೂ ಇಲ್ಲ.
ಇತ್ತೀಚೆಗೆ ಗಜಪಡೆ ಎಂಬ ಪ್ರೊಫೈಲ್ʻನಲ್ಲಿ ಅಶ್ವಿನಿ ಪುನೀತ್ ಅವರ ಬಗ್ಗೆ ಅಸಭ್ಯವಾಗಿ ಕಮೆಂಟ್ ಮಾಡಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಪೊಲೀಸ್ ಕಂಪ್ಲೇಂಟ್ ಕೂಡಾ ಆಗಿದೆ. ಆದರೆ.. ಇದೂವರೆಗೆ ಯಾರೊಬ್ಬರ ವಿರುದ್ಧವೂ ಕ್ರಮ ಆದ ಸುದ್ದಿ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿ ಕ್ರಮ ಆಗಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಅಂತಹುದೇ ಮನಸ್ಥಿತಿಯ ಇನ್ನಷ್ಟು ಜನ ಎದ್ದು ಕುಳಿತಿದ್ಧಾರೆ.
ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿರುವ ಟ್ವೀಟ್ʻನಲ್ಲಿ
ಅಶ್ವಿನಿಯವರ ಅಥವಾ ಗಜಪಡೆಯವರ ಉಲ್ಲೇಖ ಇಲ್ಲ. ಅದು ನೇರವಾಗಿ ಯಾರಿಗೆ ಹೇಳಿದ ಮಾತು ಎನ್ನುವುದು ಅರ್ಥವಾಗುವುದಿಲ್ಲ. ರಾಜಕೀಯ ಚುನಾವಣೆ ಹಿನ್ನೆಲೆಯಲ್ಲಿ ಇದು ಸನಾತನ ಧರ್ಮ ಬೆಂಬಲಿಸುವವರ ವಿರುದ್ಧ ಎನ್ನುವುದು ಒಂದು ವಾದವಾದರೆ.. ಈ ಟ್ವೀಟ್ ನೋಡಿರುವವರಿಗೆ ಇದು ಅಶ್ವಿನಿ ಪುನೀತ್ ಅವರಿಗೆ ಕೊಟ್ಟ ಬೆಂಬಲ ಎಂಬಂತೆ ಕಾಣುತ್ತಿದೆ. ಸಿದ್ದರಾಮಯ್ಯ ಟ್ವೀಟ್ʻನಲ್ಲಿ ‘ಹೆಣ್ಣಿಗೆ ಸ್ವಾತಂತ್ರ್ಯವನ್ನು ನಿರಾಕರಿಸಿ ಗುಲಾಮಳನ್ನಾಗಿ ಮಾಡಿ ಮನೆಯೊಳಗೆ ಕೂರಿಸಿದ ಮನುವಾದದ ಸಂಕೋಲೆಯನ್ನು ಮಹಿಳೆಯರೇ ಕಿತ್ತುಹಾಕಿ ಸ್ವತಂತ್ರರಾಗುತ್ತಿದ್ದಾರೆ. ಸಂವಿಧಾನದತ್ತ ಸ್ವಾತಂತ್ರ್ಯದೊಂದಿಗೆ ಪುರುಷರಿಗೆ ಸರಿಸಮಾನರಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಯುತ್ತಿದ್ದಾರೆ. ಪತಿಯನ್ನು ಕಳೆದುಕೊಂಡು ಹೆಣ್ಣುಮಕ್ಕಳು ಕೂಡಾ ವೈಯಕ್ತಿಕ ಬದುಕಿನ ನೋವುಗಳನ್ನು ನುಂಗಿಕೊಂಡು ಸಾಮಾಜಿಕ ಮತ್ತು ಔದ್ಯಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾದರಿಯಾಗುತ್ತಿದ್ದಾರೆ.
ಈ ಸಾಮಾಜಿಕ ಬದಲಾವಣೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿಯವರಂತಹ ಮಹನೀಯರ ಸಮಾಜ ಸುಧಾರಣೆಯ ಕೊಡುಗೆಯೂ ಇದೆ. ಹೀಗಿದ್ದರೂ ಇತಿಹಾಸದ ಚಕ್ರವನ್ನು ಹಿಂದಕ್ಕೆ ಎಳೆದೊಯ್ಯುವ ಪ್ರಯತ್ನವನ್ನು ಕೆಲವು ಕಿಡಿಗೇಡಿಗಳು ನಡೆಸುತ್ತಿದ್ದಾರೆ. ಇತ್ತೀಚೆಗೆ ಕೆಲವು ಗೊಡ್ಡು ಸಂಪ್ರದಾಯವಾದಿಗಳು ಪತಿಯನ್ನು ಕಳೆದುಕೊಂಡ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಅಪಮಾನಿಸಿ ತಮ್ಮ ವಿಕೃತಿಯನ್ನು ಮೆರೆಯುತ್ತಿರುವುದು ಖಂಡನೀಯ.
ಇದು ಸಂವಿಧಾನವನ್ನು ತಿರಸ್ಕರಿಸಿ ಮನುವಾದವನ್ನು ಪುರಸ್ಕರಿಸಬೇಕೆಂದು ಕೆಲವು ಸಮಾಜ ವಿರೋಧಿ ಶಕ್ತಿಗಳು ಹಾಕುತ್ತಿರುವ ಕೂಗಿನ ಫಲ. ಹೆಣ್ಣುಮಕ್ಕಳ ತುಚ್ಛೀಕರಣವನ್ನು ನಮ್ಮ ಸರ್ಕಾರ ಖಂಡಿತ ಸಹಿಸುವುದಿಲ್ಲ, ಇದಕ್ಕೆ ಕಾರಣಕರ್ತರಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಆದರೆ.. ಈ ಟ್ವೀಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಸಿದ್ದರಾಮಯ್ಯ ಅವರ ಟ್ವೀಟ್ ನೋಡಿದರೆ.. ಸನಾತನ ಧರ್ಮ/ಹಿಂದೂ ಧರ್ಮ ಪ್ರೇಮಿಗಳನ್ನು ಬಯ್ಯುವುದಕ್ಕೆ ಎಂದು ಅರ್ಥವಾಗುತ್ತದೆ.
ಹಾಗೆ ನೋಡಿದರೆ.. ಇತ್ತೀಚೆಗೆ ಬಿಜೆಪಿಯ ಸಂಸದೀಯ ಅಭ್ಯರ್ಥಿ ನಟಿ ಕಂಗನಾ ರಣಾವತ್ ಬಗ್ಗೆ, ಅದೇ ಕಾಂಗ್ರೆಸ್ಸಿನ ಸುಪ್ರಿಯಾ ಅವರು ಎಷ್ಟು ರೇಟು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು. ಇನ್ನು ಸುರ್ಜೇವಾಲ ಅವರು ಸಂಸದೆ ನಟಿ ಹೇಮಮಾಲಿನಿ ಅವರ ಬಗ್ಗೆ ಅಸಭ್ಯ ಪದ ಬಳಸಿದ್ದರು. ಇನ್ನು ರಾಹುಲ್ ಗಾಂಧಿ ಐಶ್ವರ್ಯಾ ರೈ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ತಪ್ಪು. ಆದರೆ.. ಅದಕ್ಕೂ ಧರ್ಮಕ್ಕೂ ಏನು ಸಂಬಂಧ..? ಅರ್ಥವಾಗದಿರುವ ಪ್ರಶ್ನೆಗೆ ಸಿದ್ದರಾಮಯ್ಯನವರೇ ಉತ್ತರ ಕೊಡಬೇಕು.
ಇಷ್ಟಕ್ಕೂ ಅಶ್ವಿನಿ ಅವರ ಬಗ್ಗೆ ಅಸಭ್ಯ ಪೋಸ್ಟ್ ಕುರಿತ ಹಿಂದೆ ಇರುವುದು ಹೀರೋಯಿಸಂ ಫ್ಯಾನ್ಸ್, ಅತಿರೇಕಕ್ಕೆ ಏರಿದ ಫ್ಯಾನ್ಸ್ ಸಮರ ಕಾರಣವೇ ಹೊರತು.. ಯಾವ ಧರ್ಮವೂ ಅಲ್ಲ.
ಇನ್ನು ಈ ಘಟನೆ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ ಏನಂತಾರೆ..
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಪ್ರತ್ರಕರ್ತರು ಪರೋಕ್ಷವಾಗಿ ಕೇಳಿದ ಪ್ರಶ್ನೆ ಪಾಸಿಟಿವ್ ಮತ್ತು ನೆಗೆಟಿವ್ನ ಹೇಗೆ ತೆಗೆದುಕೊಳ್ಳುತ್ತಿರಿ ಅನ್ನೋದು. ಅದಕ್ಕೆ ಅಶ್ವಿನಿಯವರು ನೀಡಿರುವ ಉತ್ತರ ಬೇರೆ ಆಯ್ಕೆ ಇಲ್ಲ. ಜೀವನ ಸಾಗಲೇಬೇಕು. ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ ಅನ್ನೋದು.
ಇನ್ನು ಅಶ್ವಿನಿ ಅವರ ಕುರಿತ ಅವಹೇಳನಕಾರಿ ಪೋಸ್ಟ್ ಕುರಿತಂತೆ ನಟರಾದ ಜಗ್ಗೇಶ್, ಪ್ರಥಮ್ ಮೊದಲಾದವರೂ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಆದರೆ.. ಯಾರಿಗೂ ಕಾಣದ ಸನಾತನ ಧರ್ಮದ ಪ್ರಶ್ನೆ ಸಿಎಂ ಸಿದ್ದರಾಮಯ್ಯನವರಿಗೆ ಕಂಡಿದೆ.



