ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ ಅವರ ಹಿಂದೆ ಹಲವು ಚಿತ್ರಗಳ ನಿರ್ಮಾಪಕರು ಕ್ಯೂನಲ್ಲಿ ನಿಂತಿದ್ದಾರೆ. ಹಾಗೆ ಕ್ಯೂ ನಿಂತಿರುವವರಲ್ಲಿ ಒಬ್ಬರು ಸಚಿನ್ ರವಿ. ಅವರು ಶಿವಣ್ಣ ಅವರಿಗಾಗಿ ಅಶ್ವತ್ಥಾಮ ಅನ್ನೋ ಸಿನಿಮಾ ಮಾಡ್ತಾರೆ ಅನ್ನೋದು ವರ್ಷಗಳ ಹಿಂದಿನಿಂದಲೂ ಚಾಲ್ತಿಯಲ್ಲಿರೋ ಸುದ್ದಿ. ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸಿನಿಮಾ ನಿರ್ಮಾಣ ಮಾಡಬೇಕಿತ್ತು.
ಆ ಕಾಲಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ ಇದು. ಯಾಕೆಂದರೆ ಶಿವಣ್ಣ ಅವರ ಜೊತೆ ಈ ಸಿನಿಮಾವನ್ನ ಸಚಿನ್ ರವಿ ಅನೌನ್ಸ್ ಮಾಡುವ ಮೊದಲು ಅನೂಪ್ ಭಂಡಾರಿ ಕೂಡ ಸುದೀಪ್ ಅವರಿಗಾಗಿ ಅಶ್ವತ್ಥಾಮ ಹೆಸರಿನ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈ ಕಾರಣಕ್ಕೆ ಎರಡು ಅಭಿಮಾನಿ ಬಣದ ನಡುವೆ ಟ್ವೀಟ್ ವಾರ ನಡೆದಿತ್ತು. ಕಾಲಾನುಕ್ರಮೇಣ ಹಾಗೇ ತಣ್ಣಗಾಯಿತು ಕೂಡ. ಇದೀಗ ಸಿನಿಮಾ ನಿರ್ಮಾಪಕರು ಬದಲಾಗಿದ್ದಾರೆ. ಹೀರೋ ಬದಲಾಗಿದ್ದಾರೆ. ಸಿನಿಮಾ ನಿರ್ಮಾಣ ಮಾಡುತ್ತಿರುವ ಚಿತ್ರರಂಗವೇ ಬದಲಾಗಿ ಹೋಗಿದೆ.
ಹೌದು, ಈ ಚಿತ್ರವನ್ನೀಗ ನಿರ್ಮಾಣ ಮಾಡ್ತಿರೋದು ಗಿಲ್ಲಿ ನಾಯಕಿಯಾಗಿದ್ದ ರಕುಲ್ ಪ್ರೀತ್ ಸಿಂಗ್ ಅವರ ಗಂಡ ಜಾಕಿ ಭಗ್ನಾನಿ. ಡೈರೆಕ್ಟರ್ ಸಚಿನ್ ರವಿ. ಈ ಹೆಸರು ಕೇಳದವರು ಯಾರು..? ಅವನೇ ಶ್ರೀಮನ್ನಾರಾಯಣ ಚಿತ್ರದ ಸೃಷ್ಟಿಕರ್ತ ಈ ಸಚಿನ್ ರವಿ. ಅವನೇ ಶ್ರೀಮನ್ನಾರಾಯಣ ತಾಂತ್ರಿಕವಾಗಿ ಚೆನ್ನಾಗಿತ್ತಾದರೂ.. ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲಲಿಲ್ಲ ಎನ್ನುವುದು ಸತ್ಯ. ಆದರೆ.. ಚಿತ್ರದ ಕ್ವಾಲಿಟಿ ಬಗ್ಗೆ ಎರಡು ಮಾತಿಲ್ಲ. ಇದೀಗ ಆ ಸಚಿನ್ ಸುವರ್ಣ ಬಾಲಿವುಡ್ ಮೆಟ್ಟಿಲೇರಿದ್ದಾರೆ.
ಅಶ್ವತ್ಥಾಮ ಅನ್ನೋ ಚಿತ್ರಕ್ಕೆ ಸಚಿನ್ ರವಿ ಡೈರೆಕ್ಟರ್. ಆ ಚಿತ್ರಕ್ಕೆ ಹೀರೋ ಶಾಹಿದ್ ಕಪೂರ್. ಸಚಿನ್ ರವಿ ಹಾಗೂ ಶಾಹಿದ್ ಕಪೂರ್ ಚಿತ್ರಕ್ಕೆ ‘ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್’ ಎನ್ನುವ ಶೀರ್ಷಿಕೆ ಫಿಕ್ಸ್ ಆಗಿದೆ. ಜಗತ್ತಿನಲ್ಲಿರುವ ಏಳು ಚಿರಂಜೀವಿಗಳಲ್ಲಿ ಅಶ್ವತ್ಥಾಮ ಕೂಡ ಒಬ್ಬ ಎನ್ನುವ ನಂಬಿಕೆ ಪುರಾಣಗಳಲ್ಲಿದೆ. ಅಶ್ವತ್ಥಾಮನಿಗೆ ಶ್ರೀಕೃಷ್ಣ ಶಾಪ ಕೊಟ್ಟಿದ್ದಾನೆ. ಪಾಂಡವರ ಮಕ್ಕಳು ಹಾಗೂ ಗರ್ಭದಲ್ಲಿದ್ದ ಉತ್ತರೆಯ ಮಗುವನ್ನು ಬ್ರಹ್ಮಾಸ್ತ್ರ ಪ್ರಯೋಗಿಸಿ ಕೊಂದ ಅಶ್ವತ್ಥಾಮ, ಇವತ್ತಿಗೂ ಮುಕ್ತಿ ಸಿಗದೆ ಅಲೆದಾಡುತ್ತಿದ್ದಾನೆ ಎನ್ನುವುದು ಪುರಾಣದ ನಂಬಿಕೆ.
ಮಹಾಭಾರತದ ಅಶ್ವತ್ಥಾಮನ ಇಂದಿಗೂ ಇದ್ದಾನೆ ಅನ್ನೋದು ನಂಬಿಕೆ. ಸಿನಿಮಾದಲ್ಲಿ ಬರುವ ಅಶ್ವತ್ಥಾಮ ವರ್ತಮಾನದಲ್ಲಿ ಅಮರತ್ವದ ಪರಿಕಲ್ಪನೆಯನ್ನು ಶೋಧಿಸುವ ಕೆಲಸ ಮಾಡುತ್ತಾನೆ. ಅಮರತ್ವ ನನಗೆ ಕುತೂಹಲಕಾರಿ ಪರಿಕಲ್ಪನೆ. ಅದು ಬಹಳಷ್ಟು ಭಾವನೆಗಳು ಮತ್ತು ನಾಟಕೀಯ ಸನ್ನಿವೇಶಗಳನ್ನು ಪ್ರಚೋದಿಸುತ್ತದೆ ಎಂದು ಹೇಳಿಕೊಂಡಿದ್ದಾರೆ ಸಚಿನ್ ರವಿ.
‘ಅಶ್ವತ್ಥಾಮ’ ಚಿತ್ರವನ್ನು ‘ಪೂಜಾ ಎಂಟರ್ಟೇನ್ಮೆಂಟ್’ ನಿರ್ಮಾಣ ಮಾಡುತ್ತಿದೆ. ವಿಷ್ಣು ಭಗ್ನಾನಿ, ಜಾಕಿ ಭಗ್ನಾನಿ ಹಾಗೂ ದೀಪ್ತಿಕಾ ದೇಶಮುಖ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.
ಆದರೆ.. ಇದು ಶಿವಣ್ಣ ಅವರಿಗಾಗಿಯೇ ಮಾಡಿದ ಕಥೆಯಾ.. ಅಥವಾ ಬೇರೆಯ ಕಥೆಯಾ.. ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.



