ರಾಜ್ಯ ಬಿಜೆಪಿಯ ನಾಯಕರು ಪಕ್ಷದ ಹೋರಾಟಗಳ ಬಗ್ಗೆಯೂ ಕೂಡಾ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬಿಟ್ಟು, ಕುಮಾರಸ್ವಾಮಿ ಜೊತೆಯಲ್ಲೇ ಮಾತುಕತೆ ನಡೆಸುತ್ತಿರುವುದು ಹೊಸ ಬೆಳವಣಿಗೆ. ಏಕೆ ಎನ್ನುವುದು ಸ್ವತಃ ವಿಜಯೇಂದ್ರ ಅವರಿಗೂ ಅರ್ಥವಾದಂತೆ ಇಲ್ಲ. ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್, ಕೇಂದ್ರ ಸಚಿವ ವಿ ಸೋಮಣ್ಣ, ಚಿಕ್ಕಬಳ್ಳಾಪುರ ಸಂಸದ ಸುಧಾಕರ್.. ಎಲ್ಲರೂ ನವದೆಹಲಿಗೆ ಹೋಗಿ, ಅಲ್ಲಿ ಕುಮಾರಸ್ವಾಮಿ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ವಸತಿ ಇಲಾಖೆಯ ʻವಸತಿ ಹಂಚಿಕೆಗಾಗಿ ಹಣʼ ಹಗರಣದಲ್ಲಿ ಹೋರಾಟ ರೂಪಿಸುವ ಕುರಿತಂತೆ ಸಭೆ ಮಾಡಿದ್ದಾರೆ. ವಿಷಯ ಗಂಭೀರ ತಿರುವು ಪಡೆಯುತ್ತಿದ್ದಂತೆ ಇಲ್ಲ.. ಇಲ್ಲ.. ಇದು ಒಕ್ಕಲಿಗ ನಾಯಕರ ಸಭೆ ಎಂದು ಹೇಳುವ ಪ್ರಯತ್ನವಾಗಿದೆ. ಆದರೆ.. ವಿ ಸೋಮಣ್ಣ ಅವರು ಬಂದಿದ್ದೇಕೆ ಎಂಬ ಪ್ರಶ್ನೆ ಬಂದಾಗ.. ಕೇಂದ್ರ ಸಚಿವರ ಜೊತೆ ಕೆಲವು ಕೆಲಸಗಳಿದ್ದವು. ಅದನ್ನು ಮಾತನಾಡುವುದಕ್ಕೆ ಬಂದಿದ್ದೆವು ಎಂಬ ಉತ್ತರ ಸಿಕ್ಕಿದೆ.
ಹೊರಗೆ ಬಂದ ಕೂಡಲೇ ಆ ಮಾತು ಹೇಳಿದ್ದರೆ ಕಥೆಯೇ ಬೇರೆ. ಗೊಂದಲವಂತೂ ಸೃಷ್ಟಿಯಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಬದಲಾಯಿಸಬೇಕೇ ಬೇಡವೇ ಎಂಬ ವಿಷಯದ ಬಗ್ಗೆ ಬಿಜೆಪಿ ಹೈಕಮಾಂಡ್ ಎಂದಿನಂತೆ ಡೋಲಾಯಮಾನ ಸ್ಥಿತಿಯಲ್ಲಿಯೇ ಇರುವಾಗ, ವಿಜಯೇಂದ್ರ ಅವರನ್ನು ಅಧ್ಯಕ್ಷರಾದಾಗಿದ್ದರೂ.. ಅಧಿಕಾರವನ್ನು ಬೇರೆ ಬೇರೆ ಕಡೆ ಇಟ್ಟಿರುವ ಕೇಂದ್ರ ಬಿಜೆಪಿ ನಾಯಕರು, ವಿಜಯೇಂದ್ರ ಅವರಿಗೆ ಫ್ರೀ ಹ್ಯಾಂಡ್ ಕೊಟ್ಟಿಲ್ಲ. ವಿಶೇಷ ಎಂದರೆ.. ಬಿಜೆಪಿಯೊಳಗಿನ ಕೆಲವು ತೀರ್ಮಾನಗಳು ಕುಮಾರಸ್ವಾಮಿ ಹೇಳಿದಂತೆ ನಡೆಯುತ್ತಿವೆ ಎಂಬ ಆರೋಪಗಳೂ ಇವೆ.
ಸದ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೆಹಲಿ ಪ್ರವಾಸ ಮುಗಿಸಿ ರಾಜ್ಯಕ್ಕೆ ಮರಳಿದ್ದು, ಬಿಜೆಪಿ ರಾಜ್ಯ ಪದಾಧಿಕಾರಿಗಳ ಬಗ್ಗೆ ಸುಳಿವು ನೀಡಿದ್ದಾರೆ. ಅತೀ ಶೀಘ್ರದಲ್ಲೇ ಬಿಜೆಪಿ ರಾಜ್ಯ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಎಲ್ಲಾ ಜಿಲ್ಲಾಧ್ಯಕ್ಷರ ಅಭಿಪ್ರಾಯ ಸಂಗ್ರಹಿಸಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಿದ್ದಾರೆ. ಆದ್ರೆ, ನಾನು ಯಾವುದೇ ವರಿಷ್ಠರ ಭೇಟಿಗೆ ದೆಹಲಿಗೆ ಹೋಗಿರಲಿಲ್ಲ. ನಾನು ನನ್ನ ವೈಯಕ್ತಿಕ ಕೆಲಸಗಳಿಗಾಗಿ ದೆಹಲಿಗೆ ಭೇಟಿ ನೀಡಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತ ಆರ್ ಅಶೋಕ್ ಮಧ್ಯರಾತ್ರಿಯಲ್ಲಿ ದೆಹಲಿಯಿಂದ ಬಂದು, ಮತ್ತೆ ಮಧ್ಯರಾತ್ರಿಯೇ ದೆಹಲಿಗೆ ಹೋಗಿರುವುದ ಅಚ್ಚರಿಗೆ ಕಾರಣವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಾತಿ ಕುರಿತ ನಿರೀಕ್ಷೆ ಹಾಗೂ ಸಸ್ಪೆನ್ಸ್ ಇನ್ನೂ ಎಂಡ್ ಆಗಿಲ್ಲ. ಆರ್. ಅಶೋಕ್ ದೆಹಲಿಗೆ ತೆರಳಿದ್ದು, ರಾಜ್ಯ ಬಿಜೆಪಿ ಪದಾಧಿಕಾರಿಗಳ ನೇಮಕದ ಬಗ್ಗೆ ಚರ್ಚೆ ನಡೆದಿದ್ದು, ಕೆಲ ಮಹತ್ವದ ಬದಲಾವಣೆಗೆ ಅಶೋಕ್ ಮನವಿ ಮಾಡಿದಂತಿದೆ. ಹೀಗಾಗಿ ಹೈಕಮಾಂಡ್ ಕೂಡಲೇ ವಿಜಯೇಂದ್ರ ಅವರನ್ನ ಕರೆಯಿಸಿಕೊಂಡು ಈ ಬಗ್ಗೆ ಚರ್ಚಿಸಿದೆ ಎನ್ನಲಾಗಿದೆ. ಇದರಿಂದ ವಿಜಯೇಂದ್ರ ದೆಹಲಿಯಿಂದ ವಾಪಸ್ ಆಗುತ್ತಿದ್ದಂತೆಯೇ ಪದಾಧಿಕಾರಿಗಳ ಬದಲಾವಣೆ ಬಗ್ಗೆ ಮಾತುಗಳನ್ನಾಡಿದ್ದಾರೆ.
ಜಿಲ್ಲಾಧ್ಯಕ್ಷರು ಸೇರಿದಂತೆ ತಮಗೆ ಬೇಕಾದವರನ್ನು ಪದಾಧಿಕಾರಿಗಳನ್ನಾಗಿ ಮಾಡಲಾಗಿದೆ ಎನ್ನುವ ಆರೋಪ ವಿಜಯೇಂದ್ರ ವಿರುದ್ಧ ಕೇಳಿಬರುತ್ತಲೇ ಇದ್ದವು. ಈ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಸಾಕಷ್ಟು ಬಾರಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಅಲ್ಲದೇ ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ಸಹ ತಮ್ಮ ಜಿಲ್ಲೆಯ ಅಧ್ಯಕ್ಷರ ಆಯ್ಕೆ ಬಗ್ಗೆ ಪ್ರಶ್ನಿಸಿದ್ದರು. ಅಲ್ಲದೇ ಈ ಬಗ್ಗೆ ಹೈಕಮಾಂಡ್ ನಾಯಕರ ಗಮನಕ್ಕೂ ತಂದಿದ್ದರು. ಇದಾದ ಬಳಿಕ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರನ್ನ ಬದಲಾವಣೆ ಮಾಡಲಾಗಿತ್ತು.
ಈ ಎಲ್ಲಾ ಬೆಳವಣಿಗೆಗಳ ನಂತರ ಇದೀಗ ವಿಜಯೇಂದ್ರ ದಿಲ್ಲಿಯಿಂದ ವಾಪಸ್ ಬಂದು ಪಕ್ಷದ ಪದಾಧಿಕಾರಿಗಳ ಬದಲಾವಣೆ ಬಗ್ಗೆ ಮಾತನಾಡಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಕಳೆದ ವಾರ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಜೊತೆ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಕೆಲವೊಂದಿಷ್ಟು ಚರ್ಚೆಗಳಾಗಿವೆ. ಅಮಿತ್ ಶಾ ಬಂದಿದ್ದ ವೇಳೆ ರೆಬಲ್ ಬಣವೂ ಸಭೆ ಮಾಡಿತ್ತು. ಈ ಸಭೆಯಲ್ಲಿ ಸಚಿವ ಸೋಮಣ್ಣ ಭಾಗಿಯಾಗಿದ್ದು ಕೂಡ ಚರ್ಚೆಯಾಗಿತ್ತು. ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಎಂಬಂತೆ ಆಗಿರುವುದು ಹೊಸದೇನಲ್ಲ. ಒಂದು ಕಡೆ ತಟಸ್ಥ ಗುಂಪು ಕಾರ್ಕಳದ ಶಾಸಕ ಸುನೀಲ್ ಕುಮಾರ್‌ರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಾಯ ಕೇಳಿಬರುತ್ತಿದೆ.
ಈ ಹಿನ್ನಲೆ ಅಶೋಕ್ ಹಾಗೂ ವಿಜಯೇಂದ್ರ ಇಬ್ಬರ ಭೇಟಿ ಬಹಳಷ್ಟು ಕುತೂಹಲ ಮೂಡಿಸಿದೆ.



