ರಾಜ್ಯ ರಾಜಕೀಯದಲ್ಲಿ ಏನಾಗುತ್ತೋ.. ಬಿಡುತ್ತೋ.. ಹೇಳಿಕೆಗಳ ಭರ್ಜರಿ ಸಮರವಂತೂ ಜೋರಾಗಿ ನಡೆಯುತ್ತಿದೆ. ರಾಜ್ಯ ಸರ್ಕಾರ ಬೀಳುತ್ತೆ ಅಂತಿದ್ದಾರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ. ಆಪರೇಷನ್ ಮಾಡೋಕೆ ಬಿಜೆಪಿ ಟ್ರೈ ಮಾಡ್ತಿದೆ ಅಂತಾ ಹೇಳಿರೋದು ಸ್ವತಃ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್. ಪ್ರಕರಣ ಗಂಭೀರವಾಗಿಯೇ ಇದೆ ಎನ್ನುವುದಕ್ಕೆ ಇದು ಸಾಕ್ಷಿ. ಆದರೆ ವಾಸ್ತವದಲ್ಲಿ ಇದು ಸಾಧ್ಯವೇ?
ರಮೇಶ್ ಜಾರಕಿಹೊಳಿ : Ramesh Jarakiholi ಬೆಳಗಾವಿ ರಾಜಕಾರಣ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದಲೇ ರಾಜ್ಯ ಸರ್ಕಾರ ಪತನ ಆಗಲಿದೆ. ಶೀಘ್ರದಲ್ಲೇ ಡಿ.ಕೆ.ಶಿವಕುಮಾರ್ ಮಾಜಿ ಮಂತ್ರಿಯಾಗಲಿದ್ದಾರೆ. ಹೈಕೋರ್ಟ್‌ನಲ್ಲಿ ಪ್ರಕರಣವೊಂದರಲ್ಲಿ ಆಗಲಿರುವ ಹಿನ್ನಡೆಯಿಂದ ಮಾಜಿಯಾಗಲಿದ್ದಾರೆ . ಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಪತನವಾಗಬಹುದು. ಒಂದೇ ರಾತ್ರಿಯಲ್ಲಿ ಎಲ್ಲವೂ ಬದಲಾಗಬಹುದು. ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಿಲ್ಲ. ಆದರೂ ಡಿ.ಕೆ.ಶಿವಕುಮಾರ್ ನಾಟಕ ಮಂಡಳಿ ಬಿಜೆಪಿಯ ಹೆಸರು ಕೆಡಿಸುತ್ತಿದೆ. ಗ್ಯಾರಂಟಿ ಯೋಜನೆ ಈಡೇರಿಸಲಾಗದೆ ಬಿಜೆಪಿ ವಿರುದ್ಧ ಆಪರೇಷನ್ ಕಮಲದ ಆರೋಪ ಮಾಡುತ್ತಿದ್ದಾರೆ. ಏನೇ ಇದ್ದರೂ ದಾಖಲೆ ಬಿಡುಗಡೆ ಮಾಡಲಿ.
ಸತೀಶ್ ಜಾರಕಿಹೊಳಿ : Satheesh jarakiholi ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಬದಲಾಗಲ್ಲ. ಐದು ವರ್ಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಸರ್ಕಾರ ಆಡಳಿತ ಮಾಡುತ್ತದೆ . ರಮೇಶ್ ಅದ್ಯಾಕೆ ಹಾಗೆ ಹೇಳಿದ್ದಾರೋ ನನಗೆ ಗೊತ್ತಿಲ್ಲ.
ಡಿಕೆ ಶಿವಕುಮಾರ್ : DK Shivakumar ರಾಜ್ಯದ ಜನ ಚುನಾವಣೆಯಲ್ಲಿ ಏನು ತೀರ್ಪು ನೀಡಬೇಕೋ ನೀಡಿದ್ದಾರೆ. ನಮಗೆ ಮಾಡಲು ಅನೇಕ ಕೆಲಸಗಳಿವೆ. ಆ ಕೆಲಸ ಮಾಡುತ್ತಿದ್ದೇವೆ. ಅನಗತ್ಯ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ. ಆಪರೇಷನ್ ಬಗ್ಗೆ ಎಲ್ಲ ಮಾಹಿತಿಯೂ ಗೊತ್ತಿದೆ. ಯಾರು, ಯಾರನ್ನ ಯಾವಾಗ ಭೇಟಿಯಾಗಿದ್ದರು. ಯಾವ ಆಮಿಷ ಒಡ್ಡಿದ್ದರು ಎಲ್ಲವೂ ಗೊತ್ತಿದೆ. ಆದರೆ ಅವರ ಯಾವುದೇ ಪ್ರಯತ್ನ ಫಲ ನೀಡಲ್ಲ.
ಅಶ್ವತ್ಥ್ ನಾರಾಯಣ್ : Aswath narayan ಪ್ರತಿಪಕ್ಷದವರು ಅಂದರೆ ಕೆಲಸ ಇಲ್ಲದವರು ಅಂತ ಅಂದುಕೊಂಡಿದ್ದೀರಾ? ನಿಮ್ಮ ಶಾಸಕರಿಗೆ ಇಷ್ಟು ಅಂತ ಬೆಲೆ ಕಟ್ಟುತ್ತಿದ್ದೀರಾ? ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತ ನಡೆಸಲು ವಿಫಲ ವಿಫಲ ಆಗಿದ್ದನ್ನು ಮರೆ ಮಾಚಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದೀರಾ ನಾವು ನಿಮ್ಮ ಸರ್ಕಾರವನ್ನು ಯಾವ ರೀತಿ ಉರುಳಿಸುತ್ತೇವೆ ಅಂತ ಹೇಳಿ. ನಮ್ಮ ಬಳಿ ಇರುವುದೇ 66 ಶಾಸಕರು. ಹೇಗೆ ಸರ್ಕಾರ ಬೀಳಿಸಲು ಸಾಧ್ಯ ?
ಸಿದ್ದರಾಮಯ್ಯ : Siddaramaiah ಬಿಜೆಪಿಯವರು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆಂಬ ಮಾಹಿತಿ ಇದೆ. 50 ಕೋಟಿಯ ಆರೋಪದ ಬಗ್ಗೆ ಮಾಹಿತಿ ಇಲ್ಲ. ಆದರೆ ಬಿಜೆಪಿಯವರು ಸರ್ಕಾರವನ್ನು ಕೆಡವಲು ಯತ್ನಿಸುತ್ತಿರುವುದಂತೂ ಸತ್ಯ.
ಹೀಗೆ ಪ್ರತಿಯೊಬ್ಬ ನಾಯಕರ ಹೇಳಿಕೆಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಕಾಂಗ್ರೆಸ್ಸಿನವರ ಪ್ರಕಾರ ಸರ್ಕಾರವನ್ನು ಕೆಡವಲು ಪ್ರಯತ್ನಗಳು ನಡೆಯುತ್ತಿವೆ. ಹಲವು ಶಾಸಕರು ಆರೋಪ ಮಾಡಿದ್ದಾರೆ. ಆದರೆ ಯಾವೊಬ್ಬರ ಹೆಸರನ್ನೂ ಹೇಳುವುದಿಲ್ಲ. ಕೇಸ್ ಕೂಡಾ ಎಲ್ಲಿಯೂ ದಾಖಲಾಗಿಲ್ಲ.ಅದು ರಾಜಕೀಯದ ಮಾತಾಯ್ತು.. ಆದರೆ ಇದು ಸಾಧ್ಯವೇ..? ಮೇಲ್ನೋಟಕ್ಕೇ ಹೇಳುವಂತೆ ಅಸಾಧ್ಯ.
ಏಕೆಂದರೆ ಕಾಂಗ್ರೆಸ್ಸಿನ ಬಳಿ ಇರುವುದು 135+ ಶಾಸಕರು. ಬಹುಮತಕ್ಕೆ ಬೇಕಿರುವುದು 113. ಆದರೆ ಈ ಬಹುಮತ ಪಡೆಯಬೇಕೆಂದರೆ ಕನಿಷ್ಠ 60 ಶಾಸಕರು ರಾಜೀನಾಮೆ ಕೊಡಬೇಕು. ಮತ್ತೆ ಅಷ್ಟೂ ಜನ ಬೇರೆ ಪಕ್ಷದಿಂದ ಅಂದರೆ ಬಿಜೆಪಿಯಿಂದ ಗೆದ್ದು ಬರಬೇಕು.
ಇಲ್ಲವೇ 90+ ಶಾಸಕರು ಪ್ರತ್ಯೇಕವಾಗಿ ಗುರುತಿಸಿಕೊಳ್ಳಬೇಕು. ತಮ್ಮದೇ ವೊರಿಜಿನಲ್ ಕಾಂಗ್ರೆಸ್ ಎಂದು ಹೇಳಿಕೊಳ್ಳಬೇಕು. ಅವರಿಗೆ ಬಿಜೆಪಿ+ಜೆಡಿಎಸ್ ಬೆಂಬಲ ನೀಡಬೇಕು.
ಕಳೆದ ಬಾರಿ ಬಿಜೆಪಿ 04 ಗೆದ್ದಿದ್ದರೂ, 17 ಶಾಸಕರು ರಾಜೀನಾಮೆ ಕೊಟ್ಟು, ಕೆಲವರು ಸೋತು, ಕೆಲವರು ಗೆದ್ದು ಪರದಾಡಿಯೇ ಸರ್ಕಾರ ರಚನೆ ಮಾಡಿತ್ತು ಬಿಜೆಪಿ. ಆದರೆ ಈ ಬಾರಿ ಹಾಗಿಲ್ಲ. ಮಹಾರಾಷ್ಟ್ರ ಮಾದರಿಯೆಂದು ಹೇಳಿದರೂ, ಅಲ್ಲಿ ಯಾವುದೇ ಒಂದು ಪಕ್ಷಕ್ಕೆ ಬಹುಮತ ಇರಲಿಲ್ಲ. ಸಮ್ಮಿಶ್ರ ಸರ್ಕಾರ ಮತ್ತು ಅಲ್ಲಿ ದೊಡ್ಡ ಪಕ್ಷವಾಗಿದ್ದದ್ದು ಬಿಜೆಪಿಯೇ. ಆದರೆ ರಾಜ್ಯದ ಪರಿಸ್ಥಿತಿ ಹಾಗಿಲ್ಲ.
ಹಾಗಾದರೆ ನಿಜಕ್ಕೂ ಏನು ನಡೆಯುತ್ತಿದೆ..? ಸಿಂಪಲ್ಲಾಗ್ ಹೇಳ್ಬೇಕಂದ್ರೆ ನಾಯಕರ ಬಾಯಿ ಶೋಷಣೆ ನಡೆಯುತ್ತಿದೆ. ಮಾತಿನಲ್ಲೇ ಮಂಟಪ ಕಟ್ಟುತ್ತಿದ್ದಾರೆಯೇ ಹೊರತು, ಆಪರೇಷನ್ ಸಾಧ್ಯವಿಲ್ಲ. ಸಾಧ್ಯವಿಲ್ಲ. ಸಾಧ್ಯವಿಲ್ಲ.



