ಹುಬ್ಬಳ್ಳಿಯಲ್ಲಿ ಕ್ಯಾಂಪಸ್ಸಿನಲ್ಲೇ ಹಾಡ ಹಗಲಲ್ಲೇ ನಡೆದ ನೇಹಾ ಹಿರೇಮಠ್ ಅವರ ಬರ್ಬರ ಕೊಲೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಕೊಲೆಯಾದ ಯುವತಿ ಕಾಲೇಜ್ ಸ್ಟೂಡೆಂಟ್. ವೀರಶೈವ ಲಿಂಗಾಯತರ ಹುಡುಗಿ. ಕೊಲೆ ಮಾಡಿದವನು ಫಯಾಜ್. ನೇಹಾ ಹಿರೇಮಠ್ ಅವರ ತಂದೆ ನಿರಂಜನ್ ಹಿರೇಮಠ್ ಕಾಂಗ್ರೆಸ್ಸಿನ ಕಾರ್ಪೊರೇಟರ್. ಚುನಾವಣೆ ಹತ್ತಿರದಲ್ಲೇ ಇರುವ ಕಾರಣ ಕೊಲೆಗೆ ರಾಜಕೀಯ ಬಣ್ಣವೂ ಬಂದಿದೆ.
ವಿಚಿತ್ರ ಎಂದರೆ.. ಕಾಂಗ್ರೆಸ್ಸಿಗರೇ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿರುವುದು. ಇದಕ್ಕೆ ಕಾರಣವಾಗಿದ್ದು ಗೃಹ ಸಚಿವ ಪರಮೇಶ್ವರ್ ಅವರ ಒಂದು ಹೇಳಿಕೆ. ಪ್ರಕರಣದಲ್ಲಿ ಯಾವ ಲವ್ ಜಿಹಾದ್ ಕಾಣ್ತಿಲ್ಲ. ಅದೊಂದು ಲವ್ ಕೇಸ್, ಇಬ್ಬರ ನಡುವೆ ಲವ್ ಆಗಿ, ಬಳಿಕ ಯುವತಿ ದೂರ ಹೋಗಲು ಶುರು ಮಾಡಿದ್ದಕ್ಕೆ ಹತ್ಯೆಯಾಗಿದೆ. ವಿದ್ಯಾರ್ಥಿನಿಯ ಹತ್ಯೆಯು ಪ್ರೀತಿಯ ನಿರಾಕರಣೆಯಿಂದಾಗಿ ನಡೆದಿದೆ. ಇಬ್ಬರ ನಡುವೆ ಪರಸ್ಪರ ಪ್ರೀತಿ ಉಂಟಾಗಿ, ನಂತರ ಆ ಹೆಣ್ಣುಮಗಳು ದೂರ ಹೋಗಲು ಶುರು ಮಾಡಿದ್ದಾಳೆ. ಬಳಿಕ ಆ ಹುಡುಗ ಯುವತಿಗೆ ಚುಚ್ಚಿದ್ದಾನೆ. ಅದರಲ್ಲಿ ಲವ್ ಜಿಹಾದ್ ಕಾಣುತ್ತಿಲ್ಲ. ಇದೊಂದು ಪ್ರೇಮ ಪ್ರಕರಣವಾಗಿ ಕಾಣುತ್ತಿದೆ ಎನ್ನುವುದು ಗೃಹ ಸಚಿವರೂ ಆಗಿರುವ ಪರಮೇಶ್ವರ್ ಅವರು ನೀಡಿರುವ ಹೇಳಿಕೆ. ಕೊಲೆ ಪರ್ಸನಲ್ ರೀಸನ್ನಿನಿಂದ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಪೊರೇಟರ್ ಆಗಿರುವ ನಿರಂಜನ್ ಹಿರೇಮಠ ಅವರು, ಸಿಎಂ ಸಿದ್ದರಾಮಯ್ಯ ನಮ್ಮ ಕುಟುಂಬಕ್ಕೆ ಕಳಂಕ ತರುವ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳೇ ನಮ್ಮ ಮರ್ಯಾದೆ ತೆಗಿಬೇಡಿ ಎಂದು ಆಕ್ರೋಶ ಹೊರಹಾಕಿದ್ಧಾರೆ.
ನನ್ನ ಮಗಳ ಕೊಲೆಯ ಹಿಂದೆ ಇನ್ನೂ ನಾಲ್ಕು ಜನರಿದ್ದು, ಅವರನ್ನು ಬಂಧಿಸುವ ಕೆಲಸ ಆಗಬೇಕು. ಬಂಧಿತನಾಗಿರುವ ಯುವಕನನ್ನು ಎನ್ಕೌಂಟರ್ ಮಾಡಬೇಕು ಎಂದಿರುವ ನಿರಂಜನ್ ಎಲ್ಲರ ಹೆಸರುಗಳನ್ನೂ ಪೊಲೀಸರಿಗೆ ಕೊಟ್ಟಿದ್ದಾರಂತೆ.
ಈ ಘಟನೆ ಕೇವಲ ಒಂದೇ ದಿನದಲ್ಲಿ ನಡೆದಿದ್ದಲ್ಲ. ಗ್ಯಾಂಗ್ ಬಹಳ ದಿನಗಳಿಂದ ಸಂಚು ರೂಪಿಸಿತ್ತು. ಅವರು ನನ್ನ ಮಗಳನ್ನು ಬಲೆಗೆ ಬೀಳಿಸಲು ಅಥವಾ ಅವಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಈ ಹಿನ್ನೆಲೆಯಲ್ಲಿ ಆಕೆಗೆ ಬೆದರಿಕೆ ಹಾಕಿದ್ದಾರೆ. ಆದರೆ, ಅವರ ಬೆದರಿಕೆಗೆ ನನ್ನ ಮಗಳು ಸೊಪ್ಪು ಹಾಕಿರಲಿಲ್ಲ ಎಂದಿರುವ ನಿರಂಜನ್ ಮಾನ್ಯ ಸಿದ್ದರಾಮಯ್ಯನವರೇ ನಿಮ್ಮನ್ನು ಯಾರೋ ದಾರಿ ತಪ್ಪಿಸುತ್ತಿದ್ದಾರೆ. ನಾನು ಕಾಂಗ್ರೆಸ್ ಕಾರ್ಪೊರೇಟರ್. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನನ್ನ ಕುಟುಂಬದ ಬಗ್ಗೆ ನೀವೇ ಹೀಗೆ ಮಾತನಾಡಿದ್ರೆ ಹೇಗೆ? ನಾವು ಕಣ್ಣೀರು ಹಾಕುತ್ತಿದ್ದೇವೆ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ನನ್ನ ಕುಟುಂಬದ ಮರ್ಯಾದೆ ತೆಗಿಬೇಡಿ ಎಂದು ಮನವಿ ಮಾಡಿದ್ಧಾರೆ.
ಕಾಂಗ್ರೆಸ್ ಸರ್ಕಾರ ನನ್ನ ಮಗಳ ಹೆಣದ ಮೇಲೆ ರಾಜಕೀಯ ಮಾಡುವುದಕ್ಕೆ ಹೊರಟಿದೆ ಎಂದಿದ್ದಾರೆ. ಅಲ್ಲದೆ ತಮ್ಮನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಪ್ರಲ್ಹಾದ್ ಜೋಷಿಯವರಿಗೆ ನಿಮ್ಮ ಮೇಲೆ ಭರವಸೆ ಇದೆ ಎನ್ನುವ ಮೂಲಕ ತಮ್ಮದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ಧಾರೆ.
ಇದೇ ವೇಳೆ ನೇಹಾ ಹಿರೇಮಠ್ ಅವರು, ಕೊಲೆ ಮಾಡಿದ ಫಯಾಜ್ ಜೊತೆ ಇದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಆ ಮೂಲಕವೂ ನಮ್ಮ ಕುಟುಂಬದ ತೇಜೋವಧೆ ಮಾಡಲಾಗುತ್ತಿದೆ. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಸ್ಥಳೀಯ ನಾಯಕರು ನನಗೆ ಸಾಂತ್ವನ ಹೇಳಿದ್ದಾರೆ. ರಾಜ್ಯಮಟ್ಟದ ನಾಯಕರು ಸಾಂತ್ವನ ಹೇಳದಿದ್ದರೂ ಪರವಾಗಿಲ್ಲ. ತೇಜೋವಧೆ ಕೈಬಿಡಬೇಕು ಎಂದು ನಿರಂಜನ್ ಹಿರೇಮಠ್ ಮನವಿ ಮಾಡಿಕೊಂಡಿದ್ಧಾರೆ ತಂದೆ ನಿರಂಜನ್ ಹಿರೇಮಠ್.



