ಕಾಟೇರ, ದರ್ಶನ್ ಅವರ ಸಿನಿಮಾ ಇಡೀ ಇಂಡಸ್ಟ್ರಿಯಲ್ಲಿ ಸದ್ದು ಮಾಡಿ ಒಂದೇ ವಾರಕ್ಕೆ ೧೦೦ ಕೋಟಿ ಕ್ಲಬ್ ಸೇರಿದೆ. ಪ್ರೊಡ್ಯೂಸರ್ ರಾಕ್ ಲೈನ್ ವೆಂಕಟೇಶ್ ಪಕ್ಕಾ ಲೆಕ್ಕವನ್ನೇನೂ ಕೊಟ್ಟಿಲ್ಲ. ಅವರು ಸಿನಿಮಾದ ಬಜೆಟ್ಟು, ಪ್ರಾಫಿಟ್ಟು, ಲಾಭ, ನಷ್ಟಗಳನ್ನ ಹಿಂದೆಯೂ ಹೇಳಿಕೊಂಡವರಲ್ಲ. ಈ ಬಾರಿಯೂ ಅಷ್ಟೇ.
ಆದರೆ ವಿತರಕ ಗುರು ದೇಶಪಾಂಡೆ ಲೆಕ್ಕ ಕೊಟ್ಟಿದ್ದಾರೆ. ಗುರು ದೇಶಪಾಂಡೆ ಅವರ ಸೋಷಿಯಲ್ ಮೀಡಿಯಾ ಪೇಜಿನಲ್ಲಿ ಚಿತ್ರ ಬಿಡುಗಡೆಯಾದ ಒಂದೇ ವಾರಕ್ಕೆ ೧೦೪+ ಕೋಟಿ ಗಳಿಕೆ ಮಾಡಿದೆ ಎಂದು ಪೋಸ್ಟರ್ ಬಂದಿದೆ. ಅಂದಹಾಗೆ ಈ ಗುರು ದೇಶಪಾಂಡೆ ಯಾರು ಅಂದರೆ ಅವರು ಕಾಟೇರ ಚಿತ್ರದ ಕಲ್ಯಾಣ ಕರ್ನಾಟಕದ ವಿತರಕರು.
ಗುರು ದೇಶಪಾಂಡೆ ಅವರನ್ನು ಚಿತ್ರರಂಗ ಗುರುತಿಸುವುದೇ ರಾಜಾಹುಲಿ ಗುರು ದೇಶಪಾಂಡೆ ಅಂತಾ. ಯಶ್ ಅವರನ್ನು ಸ್ಟಾರ್ ಮಾಡಿದ ಚಿತ್ರದ ಡೈರೆಕ್ಟರ್ ಅವರೇ. ರಾಜಾಹುಲಿ ಅಷ್ಟೇ ಅಲ್ಲ, ರುದ್ರತಾಂಡವ, ಜಂಟಲ್ʻಮನ್, ಪಡ್ಡೆ ಹುಲಿ, ಲವ್ ಯೂ ರಚ್ಚು.. ಹೀಗೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ಧಾರೆ. ನಿರ್ಮಾಣ ಮಾಡಿದ್ಧಾರೆ. ಹೊಸ ನಿರ್ದೇಶಕರ ಚಿತ್ರಗಳಿಗೆ ಬೆನ್ನೆಲುಬಾಗಿದ್ದಾರೆ. ಅಂತಹ ಗುರು ದೇಶಪಾಂಡೆ ಈ ಬಾರಿ ಕಾಟೇರ ಚಿತ್ರದ ವಿತರಣೆ ಹಕ್ಕು ಪಡೆದು ಅಲ್ಲಿಯೂ ಭರ್ಜರಿಯಾಗಿ ಗೆದ್ದಿದ್ದಾರೆ.
ಗುರು ದೇಶಪಾಂಡೆ ಅವರ ಪ್ರಕಾರ ರಿಲೀಸ್ ಆದ ಫಸ್ಟ್ ಡೇ ೧೯ ಕೋಟಿ, ೭೯ ಲಕ್ಷ ಕಲೆಕ್ಷನ್ ಮಾಡಿದ್ದ ಕಾಟೇರ, ೨ನೇ ದಿನ ೧೭ ಕೋಟಿ, ೩೫ ಲಕ್ಷ ಕಲೆಕ್ಷನ್ ಮಾಡಿದೆ. ೩ನೇ ದಿನ ೨೦ ಕೋಟಿ, ೮೪ ಲಕ್ಷ ಕಲೆಕ್ಷನ್ ಮಾಡಿದೆ. ೪ನೇ ದಿನ ೧೮ ಕೋಟಿ, ೨೬ ಲಕ್ಷ ಕಲೆಕ್ಷನ್ ಮಾಡಿದೆ. ೫ನೇ ದಿನದ ಹೊತ್ತಿಗೆ ೯ ಕೋಟಿ, ೨೪ ಲಕ್ಷ ಕಲೆಕ್ಷನ್ ಆಗಿದೆ. ಈಗ ೨ನೇ ವಾರಕ್ಕೆ ಕಾಲಿಟ್ಟಿರೋ ಸಿನಿಮಾ ಟೋಟಲ್ ಆಗಿ ೧೦೪+ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಏಳು ದಿನಕ್ಕೆ ‘ಕಾಟೇರ’ ಚಿತ್ರದ 52.77 ಲಕ್ಷ ಟಿಕೆಟ್ ಮಾರಾಟ ಆಗಿದೆ. ಥಿಯೇಟರುಗಳ ಸಂಖ್ಯೆ ಕೂಡಾ ಮೊದಲ ವಾರಕ್ಕಿಂತ ಎರಡನೇ ವಾರಕ್ಕೆ ಡಬಲ್ ಆಗಿದೆ.
ರಾಕ್ʻಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ದರ್ಶನ್, ಆರಾಧನಾ, ಶೃತಿ, ಕುಮಾರ್ ಗೋವಿಂದ್, ಜಗಪತಿ ಬಾಬು, ಬಿರಾದಾರ್, ವಿನೋದ್ ಆಳ್ವ, ಶ್ವೇತಾ ಪ್ರಸಾದ್, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಜಡೇಶ್ ಕೆ ಹಂಪಿ ಬರೆದಿರುವ ಕಥೆಗೆ ಮಾಸ್ತಿಯವರ ಸಂಭಾಷಣೆ ಇದೆ. ಕಾಟೇರ ಟೀಂನ ಕ್ಯಾಪ್ಟನ್ ತರುಣ್ ಸುಧೀರ್.



