ದೃಶ್ಯ 1 : ಒಂದು ಫೋಟೋ. ಅತ್ತ ಕಡೆ ಅಮಿತ್ ಶಾ, ಇತ್ತ ಕಡೆ ಡಿಕೆ ಶಿವಕುಮಾರ್. ನಡುವೆ ಸದ್ಗುರು ಜಗ್ಗಿ ವಾಸುದೇವ್. ಗಾಸಿಪ್ ಜೋರಾಗಿದೆ.
ದೃಶ್ಯ 2 : ಮಹಾಕುಂಭಮೇಳದಲ್ಲಿ ಕುಟುಂಬ ಸಮೇತರಾಗಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ. ಯೋಗಿ ಆದಿತ್ಯನಾಥ್ ಅವರು ಮಾಡಿದ್ದ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ.
ದೃಶ್ಯ 3 : ಹಿಂದೂ ಆಗಿಯೇ ಹುಟ್ಟಿದ್ದೇನೆ. ಹಿಂದೂ ಆಗಿಯೇ ಸಾಯುತ್ತೇನೆ ಎಂಬ ಹೇಳಿಕೆ
ಕಾಂಗ್ರೆಸ್ಸಿಗರೇ ಸಿಡಿಯುತ್ತಿರುವುದು ಏಕೆ..?
ದೃಶ್ಯ-01ರ ವಿವರಣೆಗೆ ಬಂದರೆ ಅಮಿತ್ ಶಾ ಮತ್ತು ಜಗ್ಗಿ ವಾಸುದೇವ್ ಅವರ ಜೊತೆಗೆ ವೇದಿಕೆ ಹಂಚಿಕೊಂಡಿರುವುದು. ಇದೇ ಜಗ್ಗಿ ವಾಸುದೇವ್ ಅವರು ಈ ಹಿಂದೆ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಿದ್ದರು. ಅರವಿಂದ ಕೇಜ್ರಿವಾಲ್ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ. ಆದರೆ ರಾಹುಲ್ ಗಾಂಧಿ ಯಾವುದರ ಬಗ್ಗೆ ಮಾತನಾಡ್ತಾರೆ ಗೊತ್ತಾಗಲ್ಲ. ಇಷ್ಟಕ್ಕೂ ರಾಹುಲ್ ಗಾಂಧಿ ಯಾರು ಎನ್ನುವುದೇ ನನಗೆ ಗೊತ್ತಿಲ್ಲ ಎಂದು ಟೀಕೆ ಮಾಡಿದ್ದರು. ಇಂಡಿಯಾ ಟುಡೇ ಸಂದರ್ಶನದಲ್ಲಿ ಸದ್ಗುರು ನೀಡಿದ್ದ ಹೇಳಿಕೆ ಭಾರೀ ವೈರಲ್ ಆಗಿತ್ತು. ಕಾಂಗ್ರೆಸ್ಸಿಗರು ಸಿಡಿಯುತ್ತಿರುವುದೇ ಅದಕ್ಕೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿವಿ ಮೋಹನ್ ʻʻಜಾತ್ಯತೀತ ಪಕ್ಷದ ಅಧ್ಯಕ್ಷನಾಗಿ ಮತ್ತು ಜಾತ್ಯತೀತ ಸರ್ಕಾರದ ಡಿಸಿಎಂ ಆಗಿ, ನಮ್ಮ ನಾಯಕ ರಾಹುಲ್ ಗಾಂಧಿಜಿಯನ್ನು ಅಪಹಾಸ್ಯ ಮಾಡುವ ಯಾರಿಗಾದರೂ ಸಾರ್ವಜನಿಕವಾಗಿ ಧನ್ಯವಾದ ಹೇಳುವುದು ಮತ್ತು ಕೃತಜ್ಞತೆ ವ್ಯಕ್ತಪಡಿಸುವುದು ನಮ್ಮ ಪಕ್ಷ ಸೈದ್ಧಾಂತಿಕ ನೆಲೆಯನ್ನು ದುರ್ಬಲಗೊಳಿಸುತ್ತದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ರಾಷ್ಟ್ರದ ಭರವಸೆಯ ಸಂಕೇತ ಅವರ ವಿರುದ್ಧ ಅಪಹಾಸ್ಯ ಮಾಡಿದ ವ್ಯಕ್ತಿ ಜಗ್ಗಿ ವಾಸುದೇವ್ ಮಾತ್ರವಲ್ಲ ಅವರ ಅಭಿಪ್ರಾಯಗಳು ಯಾವಾಗಲೂ ಆರ್‌ಎಸ್‌ಎಸ್‌ನ ಸಿದ್ದಾಂತಕ್ಕೆ ಹೊಂದಿಕೆಯಾಗುತ್ತವೆ. ಈ ರೀತಿಯ ಮನಸ್ಥಿತಿಯವರು ಕರೆಯುವ ಕಾರ್ಯಕ್ರಮಕ್ಕೆ ಹೋಗುವುದು ಅವರಿಗೆ ಧನ್ಯವಾದ ತಿಳಿಸುವುದು ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆʼʼ ಎಂದು ಟೀಕೆ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಯಲ್ಲಿ ಶಿವರಾತ್ರಿ ಜಾಗರಣೆ ಮಾಡುವುದು ತಪ್ಪು ಸಂದೇಶ ರವಾನಿಸುತ್ತಿದೆ ಎನ್ನುವುದು ಅವರ ಆಕ್ರೋಶ. ಆದರೆ ಇದಕ್ಕೆಲ್ಲ ಉತ್ತರ ಕೊಟ್ಟಿರುವ ಡಿಕೆ ಶಿವಕುಮಾರ್ ʻʻಕುಂಭಮೇಳದಲ್ಲಿ ಭಾಗಿಯಾಗಿದ್ದಕ್ಕಾಗಿ ನಾನು ಬಿಜೆಪಿಗೆ ಹತ್ತಿರ ಆಗುತ್ತಿದ್ದೇನೆ ಎಂದು ಕೆಲವು ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ನಾನು ಹುಟ್ಟು ಕಾಂಗ್ರೆಸ್ಸಿಗ. ಕುಂಭ ಮೇಳಕ್ಕೆ ನಾನು ಭೇಟಿ ಕೊಟ್ಟಿರುವುದು ನನ್ನ ನಂಬಿಕೆ ಇಂತಹ ಊಹಾಪೋಹಗಳು ನನ್ನ ಹತ್ತಿರವೂ ಸುಳಿಯುವುದು ಬೇಡ, ಬಿಜೆಪಿ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಡಿʼʼ ಎಂದು ಹೇಳಿದ್ದಾರೆ.
ಕಾಂಗ್ರೆಸ್ಸಿನಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಕೆಲವು ನಾಯಕರು ಓಪನ್ ಆಗಿ ಹೇಳಿಕೆ ಕೊಡುತ್ತಿರುವುದಕ್ಕೂ, ಈ ರೀತಿಯ ಘಟನೆಗಳಿಗೂ ತಾಳೆಯಾಗುತ್ತಿವೆ. ಒಂದಂತೂ ಸ್ಪಷ್ಟ. ಅದು ಡಿಕೆ ಶಿವಕುಮಾರ್ ಅವರ ಪಕ್ಷ ನಿಷ್ಠೆ. ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ವಿರುದ್ಧ ʻತಮ್ಮದೇ ಪಕ್ಷದ ನಾಯಕರನ್ನು ಸೋಲಿಸಿದʼ ಆರೋಪಗಳಿವೆ. ಆದರೆ ಡಿಕೆ ಶಿವಕುಮಾರ್ ವಿಷಯದಲ್ಲಿ ಹಾಗಿಲ್ಲ. ತಮಗೆ ಇಷ್ಟವಿಲ್ಲದವರಿಗೆ ಟಿಕೆಟ್ ಕೊಟ್ಟಿದ್ದರೂ ಗೆಲ್ಲಿಸಿಕೊಂಡು ಬರುತ್ತಾರೆ. ಅದನ್ನು ಅವರ ವಿರೋಧಿಗಳೂ ಒಪ್ಪುತ್ತಾರೆ.



