ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬದಿಗೆ ಸರಿಸಿ ಗೃಹ ಸಚಿವ ಅಮಿತ್ ಶಾ ಭಾರತದ ಪ್ರಧಾನಿಯಾಗುತ್ತಾರೆ. ಇಂಥಾದ್ದೊಂದು ಮಾತು ಹೇಳಿ ಇಡೀ ರಾಷ್ಟ್ರ ರಾಜಕೀಯದಲ್ಲಿ ಕಿಚ್ಚು ಹೊತ್ತಿಸಿದ್ದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್. ಏಕೆಂದರೆ.. ಮೋದಿಯವರಿಗೀಗ.. 73 ತುಂಬಿ 74 ನಡೆಯುತ್ತಿದೆ. 2025ನೇ ಇಸವಿಯ ಸೆಪ್ಟೆಂಬರ್ 17ಕ್ಕೆ ಮೋದಿಗೆ 75 ವರ್ಷ ಪೂರ್ಣಗೊಳ್ಳಲಿದೆ. ಅರವಿಂದ ಕೇಜ್ರಿವಾಲ್ ಈ ಮಾತು ಹೇಳಿದ್ದಕ್ಕೆ ಕಾರಣವೇ ಅದು.
75ನೇ ವರ್ಷಕ್ಕೆ ಕಾಲಿಟ್ಟ ನಂತರ ಮೋದಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಲಿದ್ದಾರೆ. ಪ್ರಧಾನಿ ಮೋದಿ ಸೆಪ್ಟೆಂಬರ್ 17 ರಂದು 75 ವರ್ಷ ಪೂರ್ಣ ಮಾಡಲಿದ್ದಾರೆ. ಆ ಬಳಿಕ ಪ್ರಧಾನಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ ಎಂದಿರುವ ಕೇಜ್ರಿವಾಲ್ 75 ವರ್ಷ ತುಂಬಿದ ನಂತರ ಯಾವುದೇ ನಾಯಕ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಿಲ್ಲ ಎಂಬ ಬಿಜೆಪಿ ಅಲಿಖಿತ ನಿಯಮವನ್ನು ಉಲ್ಲೇಖಿಸಿದ್ಧಾರೆ.
ಬಿಜೆಪಿಯವರು ನಿಮ್ಮ ಪ್ರಧಾನಿ ಯಾರು ಎಂದು ಭಾರತ ಮೈತ್ರಿಕೂಟವನ್ನು ಕೇಳುತ್ತಾರೆ, ನಾನು ಬಿಜೆಪಿಗೆ ನಿಮ್ಮ ಪ್ರಧಾನಿ ಯಾರು ಎಂದು ಕೇಳುತ್ತೇನೆ? ಪಿಎಂ ಮೋದಿ ಸೆಪ್ಟೆಂಬರ್ 17 ರಂದು 75 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ, ಬಿಜೆಪಿಯಲ್ಲಿ 75 ವರ್ಷಗಳ ನಂತರ ಪಕ್ಷದಲ್ಲಿನ ನಾಯಕರು ನಿವೃತ್ತರಾಗುತ್ತಾರೆ. ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್ ಮತ್ತು ಯಶವಂತ್ ಸಿನ್ಹಾ ಅವರು ನಿವೃತ್ತರಾಗುವಂತೆ ಒತ್ತಾಯಿಸಲಾಯಿತು ಮತ್ತು ಈಗ ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 17 ರಂದು ನಿವೃತ್ತರಾಗಲಿದ್ದಾರೆ ಎನ್ನುವುದು ಕೇಜ್ರಿವಾಲ್ ಹೇಳ್ತಿರೋ ಭವಿಷ್ಯವಾಣಿ.
ಅಷ್ಟೇ ಅಲ್ಲ.. ಬಿಜೆಪಿ ಮೊದಲು ಯೋಗಿ ಆದಿತ್ಯನಾಥ್ ಅವರನ್ನು ಬದಿಗೆ ಸರಿಸಲಿದೆ. ಮೋದಿ ಬಿಜೆಪಿ ಪ್ರಮುಖ ನಾಯಕರ ರಾಜಕೀಯವನ್ನು ಕೊನೆ ಮಾಡಲಿದ್ಧಾರೆ. ಈ ಚುನಾವಣೆಯಲ್ಲಿ ಗೆದ್ದರೆ 2 ತಿಂಗಳೊಳಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಬದಲಾವನೆ ಮಾಡಲಿದ್ದಾರೆ ಎಂದಿರುವ ಕೇಜ್ರಿವಾಲ್ ಗೃಹ ಸಚಿವ ಅಮಿತ್ ಶಾ ಭಾರತದ ಪ್ರಧಾನಿಯಾಗುತ್ತಾರೆ ಎಂದಿದ್ಧಾರೆ.
ಇದು ಸಾಧ್ಯವೇ.. ಈ ಮಾತಿಗೆ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಹೇಳಿರುವುದು ಬೇರೆ. ಮತ್ತೆ ಪೂರ್ಣಾವಧಿಗೆ ಮೋದಿಯೇ ಪ್ರಧಾನಿ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ಧಾರೆ. ಕೇಜ್ರಿವಾಲ್ ಅವರು ಬಿಜೆಪಿ ಗೆದ್ದರೆ ಅಮಿತ್ ಶಾ ಪ್ರಧಾನಿಯಾಗುತ್ತಾರೆ ಎಂದಿದ್ದಾರೆ. ಆದರೆ ಕೇಜ್ರಿವಾಲ್ ಆ್ಯಂಡ್ ಕಂಪನಿ ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ನಾನು ಹೇಳಲು ಬಯಸುತ್ತೇನೆ, ಬಿಜೆಪಿಯ ಸಂವಿಧಾನದಲ್ಲಿ ಅಂತಹ ಯಾವುದೇ (75 ವರ್ಷಕ್ಕೆ ನಿವೃತ್ತಿ) ಉಲ್ಲೇಖ ಇಲ್ಲ. ಮೋದಿಯವರು ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಮತ್ತು ಭವಿಷ್ಯದಲ್ಲಿ ಪ್ರಧಾನಿ ಮೋದಿಯವರೇ ದೇಶವನ್ನು ಮುನ್ನಡೆಸುತ್ತಾರೆ, ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ’ ಎಂದು ಸ್ಪಷ್ಟಪಡಿಸಿದ್ಧಾರೆ. ಮೋದಿ ಅವರೇ ಬಾರಿಗೆ ಪ್ರಧಾನಿಯಾಗುತ್ತಾರೆ ಮತ್ತು ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಇದರಲ್ಲಿ ಬಿಜೆಪಿ, ಎನ್‌ಡಿಎನಲ್ಲಿ ಸಂದೇಹವಿಲ್ಲ ಎನ್ನುವುದು ರಾಜನಾಥ್ ಸಿಂಗ್ ಸ್ಪಷ್ಟನೆ.
ಆದರೆ.. ಅಮಿತ್ ಶಾ ಅವರು ಬಿಜೆಪಿಯ ಸಂವಿಧಾನದಲ್ಲಿ 75 ವರ್ಷಕ್ಕೆ ನಿವೃತ್ತಿ ಅನ್ನೋ ಮಾತೇ ಇಲ್ಲ ಎಂದಿದ್ಧಾರಲ್ಲ. ಅದು ಸುಳ್ಳು. ಈ ಹಿಂದೆ ಅಮಿತ್ ಶಾ ಈ ಮಾತನ್ನು ಬಹಿರಂಗ ವೇದಿಕೆಗಳಲ್ಲಿಯೇ ಹೇಳಿದ್ಧಾರೆ. ಯಡಿಯೂರಪ್ಪ ರಾಜೀನಾಮೆ ಕೊಟ್ಟಿದೂ ಅದೇ ಕಾರಣಕ್ಕಾಗಿ.ಆದರೆ.. ಇದು ಕಡ್ಡಾಯವಾಗಿ ಎಲ್ಲರಿಗೂ ಜಾರಿಯಾಗಿಲ್ಲ. ಬಿಜೆಪಿ ಸ್ಥಳೀಯ ರಾಜಕಾರಣದ ಅಗತ್ಯಕ್ಕೆ ತಕ್ಕಂತೆ ವಯಸ್ಸಿನ ಮಿತಿ ಹಾಕುತ್ತದೆ.. ಹಾಗೂ ತೆಗೆದೂ ಹಾಕುತ್ತದೆ. ಶಿಸ್ತಿನ ಪಕ್ಷ ಎಂದು ಬಿಜೆಪಿ ಹೇಳಿಕೊಳ್ಳುತ್ತದಾರೂ.. ಆಗಾಗ್ಗೆ ಶಿಸ್ತುಗಳನ್ನು ಅನೂಕೂಲಕ್ಕೆ ತಕ್ಕಂತೆ ಮುರಿಯುತ್ತದೆ.



