ದರ್ಶನ್ ಗ್ಯಾಂಗ್ ಮೇಲಿನ ಕೊಲೆ ಆರೋಪಗಳ ಬಗ್ಗೆ ಎಲ್ಲರೂ ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಕೆಲವರು ದರ್ಶನ್ ಮಾಡಿದ್ದರಲ್ಲಿ ಏನ್ ತಪ್ಪಿದೆ ಎಂಬ ಲೆವೆಲ್ಲಿಗೂ ಹೋಗಿದ್ದಾರೆ. ಇನ್ನೂ ಕೆಲವರು ರೇಣುಕಾಸ್ವಾಮಿದೂ ತಪ್ಪಿದೆ, ಆದ್ರೆ ಕೊಲೆ ಮಾಡುವಂತಹ ಕೆಲಸ ಮಾಡಬಾರದಿತ್ತು ಎನ್ನುತ್ತಿದ್ದಾರೆ. ಇನ್ನೂ ಕೆಲವರು ದರ್ಶನ್ ಅವರ ಇತಿಹಾಸವನ್ನೆಲ್ಲ ಕೆದಕಿ ಕೆದಕಿ ಕೆಣಕುತ್ತಿದ್ದಾರೆ. ಇದೆಲ್ಲದರ ನಡುವೆ ಶಿವಣ್ಣ ರಿಯಾಕ್ಷನ್ ಏನು ಎಂಬ ಕುತೂಹಲ ಎಲ್ಲರಿಗೂ ಇತ್ತು. ಏಕೆಂದರೆ ದರ್ಶನ್ ಅವರ ಹಳೆಯ ಪ್ರಕರಣಗಳಲ್ಲಿ ಬಚಾವ್ ಆಗಿದ್ದರ ಹಿಂದೆ ಶಿವಣ್ಣ ಪಾತ್ರವೂ ಇದೆ. ಅಂದು ಶಿವಣ್ಣ ದರ್ಶನ್ ಅವರ ವಿರುದ್ಧವಾಗಿ ಹೇಳಿಕೆ ನೀಡಿದ್ದರೆ, ಆಗ ಬಿಡುಗಡೆ ಅಷ್ಟು ಸುಲಭವಾಗುತ್ತಿರಲಿಲ್ಲ. ವಿಜಯಲಕ್ಷ್ಮಿಯವರು ಕೇಸ್ ವಾಪಸ್ ತೆಗೆದುಕೊಂಡರೂ ಸಹ, ಶಿವಣ್ಣ ಹೇಳಿಕೆಯೂ ಅಷ್ಟೇ ಗಟ್ಟಿಯಾಗಿ ನಿಲ್ಲುತ್ತಿತ್ತು. ಆದರೆ.. ಅದು ಮುಗಿದ ಅಧ್ಯಾಯ.
ರೇಣುಕಾಸ್ವಾಮಿ ಹತ್ಯೆ ಕೇಸ್ ಹಾಗೂ ದರ್ಶನ್ ಗ್ಯಾಂಗ್ ಅರೆಸ್ಟ್ ಆದಾಗಿಂದ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇದ್ದ ಶಿವಣ್ಣ, ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಎಲ್ಲ ಹಣೆಬರಹ ಎಂದಿರುವ ಶಿವಣ್ಣ ನ್ಯಾಯ ಏನಿದೆಯೋ ಅದು ಸಿಗುತ್ತದೆ ಎಂದಿದ್ದಾರೆ.
ಇಂಥ ಘಟನೆಗಳು ಆಗುತ್ತವೆ. ಏನೂ ಮಾಡೋಕೆ ಆಗಲ್ಲ. ಹಣೆಬರಹ ಅಂತ ಒಂದು ಇರುತ್ತದೆ. ಆ ವಿಚಾರ ಬಂದಾಗ ನಾವು ಏನೂ ಮಾಡೋಕೆ ಆಗುವುದಿಲ್ಲ. ಆದರೆ, ಮಾತಾಡೋಕೆ ಹೋದರೂ, ನಾವು ಮಾಡುತ್ತಿರುವುದು ಸರಿಯಾಗಿ ಇದೆಯಾ ಎಂಬುದನ್ನು ಮೊದಲು ಯೋಚನೆ ಮಾಡಬೇಕು. ಅದನ್ನು ಹೊರತುಪಡಿಸಿ ನಾವು ಏನೂ ಹೇಳೋಕೆ ಆಗಲ್ಲ.‘ಈ ರೀತಿ ಆದಾಗ ನೋವಾಗುತ್ತದೆ. ಯಾಕಪ್ಪಾ ಹೀಗೆಲ್ಲ ಆಯಿತು ಅಂತ ಬೇಸರ ಆಗುತ್ತದೆ. ರೇಣುಕಾ ಸ್ವಾಮಿ ಕುಟುಂಬಕ್ಕೆ, ದರ್ಶನ್ ಅವರ ಕುಟುಂಬಕ್ಕೆ ನೋವಾಗುತ್ತದೆ. ದರ್ಶನ್ ಮಗನ ಬಗ್ಗೆ ಬೇಸರ ಆಗುತ್ತೆ. ನಾವು ಎಲ್ಲದನ್ನೂ ಎದುರಿಸಬೇಕು. ಈಗಾಗಲೇ ತನಿಖೆ ನಡೆದಾಗಿದೆ. ಏನಾಗುತ್ತದೋ ನೋಡೋಣ. ಏನಾಗಬೇಕೋ ಅದೇ ಆಗುತ್ತದೆ. ನ್ಯಾಯ ಏನಿದೆಯೋ ಅದೇ ಆಗುತ್ತದೆ. ಇದರ ಮೇಲೆ ಇನ್ನೇನೂ ಹೇಳಲು ನಾನು ಇಷ್ಟಪಡಲ್ಲ. ಎಲ್ಲವೂ ಹಣೆಬರಹ’ ಎಂದಿದ್ದಾರೆ ಶಿವರಾಜ್ಕುಮಾರ್.
ದರ್ಶನ್ ಮೊದಲ ಬಾರಿಗೆ ಜೈಲಿಗೆ ಹೋದಾಗ ವಿಜಯಲಕ್ಷ್ಮಿ ದರ್ಶನ್ ಅವರು ರಕ್ಷಣೆಗಾಗಿ ಬಂದಿದ್ದದ್ದು ಶಿವಣ್ಣ ಅವರ ಮನೆಗೆ. ಆಗ ವಿಜಯಲಕ್ಷ್ಮಿ ದರ್ಶನ್ ಅವರಿಗೆ ನೆರವು ನೀಡಿದ್ದವರು ಶಿವಣ್ಣ ದಂಪತಿ. ನಂತರ ಕೋರ್ಟಿನಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರ ಕೋರಿಕೆಯಂತೆ ದರ್ಶನ್ ಪರ ಹೇಳಿಕೆ ಕೊಟ್ಟಿದ್ದರು. ಹೀಗಾಗಿ ದರ್ಶನ್ ಹೆಂಡತಿಯ ಮೇಲಿನ ಕೇಸ್ʻನಿಂದ ಮುಕ್ತರಾಗಿದ್ದರು. ಅಕಸ್ಮಾತ್ ವಿಜಯಲಕ್ಷ್ಮಿ ಅವರಿಗೆ ದರ್ಶನ್ ಅವರು ಹಲ್ಲೆ ಮಾಡಿದ್ದು ನಿಜ ಎಂದು ಹೇಳಿಕೆ ಕೊಟ್ಟಿದ್ದರೆ, ದರ್ಶನ್ ಆ ಕೇಸಿನಿಂದ ಅಷ್ಟು ಸುಲಭವಾಗಿ ಹೊರಬರುತ್ತಿರಲಿಲ್ಲ. ಆದರೆ, ಅದೇ ದರ್ಶನ್ ಹಲವು ಕೇಸುಗಳಲ್ಲಿ ವಿನಾಕಾರಣ ದೊಡ್ಮನೆ, ಪುನೀತ್ ಹೆಸರು ತೆಗೆದು ಟಾರ್ಗೆಟ್ ಮಾಡಿದರು. ಆಗಲೂ ಏನೂ ಮಾತನಾಡದೇ ಇದ್ದ ಶಿವಣ್ಣ, ಈಗ ಹಣೆಬರಹ, ನ್ಯಾಯ ಗೆಲ್ಲಲಿ ಎಂದಿದ್ದಾರೆ.



