ದರ್ಶನ್ & ಗ್ಯಾಂಗ್ ಅರೆಸ್ಟ್ ಆಗುತ್ತಿದ್ದಂತೆಯೇ ದರ್ಶನ್ ಜೊತೆಗಿದ್ದವರು ದೂರವಾದರು ಎಂಬ ಭಾವನೆ ಎಲ್ಲ ಕಡೆ ವ್ಯಕ್ತವಾಯಿತು. ದರ್ಶನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ನಟರು ಹೊರಗೆ ಕಾಣಿಸಿಕೊಳ್ಳಲೇ ಇಲ್ಲ. ಇವತ್ತಿಗೂ ದರ್ಶನ್ ಅವರ ಕೇಸಿನಲ್ಲಿ ತುಟಿ ಬಿಚ್ಚದವರಿದ್ದಾರೆ. ಕೆಲವರು ಸಮರ್ಥನೆ ಮಾಡಿಕೊಂಡಿದ್ದರೆ, ಕೆಲವರು ತಪ್ಪಾಗಿದ್ದರೆ ಶಿಕ್ಷೆಯಾಗಲಿ ಬಿಡಿ ಎನ್ನುತ್ತಿದ್ದಾರೆ. ಇದೀಗ ಡಾಲಿ ಧನಂಜಯ ಅವರ ಸರದಿ.
ಕೆಲವೇ ದಿನಗಳ ಹಿಂದೆ ಡಾಲಿ ಧನಂಜಯ ಅವರ ಚಿತ್ರವೊಂದು ರಿಲೀಸ್ ಆಗಿತ್ತು. ಆ ವೇಳೆ ದರ್ಶನ್ ಅರೆಸ್ಟ್ ಆಗಿಯೂ ಆಗಿತ್ತು. ಕೆಲವೇ ತಿಂಗಳ ಹಿಂದೆ ಕಾಟೇರ ಸೆಲಬ್ರೇಷನ್ ವೇಳೆ ಮಿಡ್ ನೈಟ್ ಪಾರ್ಟಿ ಮಾಡಿದ ಪ್ರಕರಣದಲ್ಲಿ ದರ್ಶನ್ ಜೊತೆಗಿದ್ದವರಲ್ಲಿ ಡಾಲಿ ಧನಂಜಯ ಕೂಡಾ ಒಬ್ಬರು. ಡಾಲಿಯ ಕೆಲವು ಚಿತ್ರಗಳನ್ನು ದರ್ಶನ್ ಪ್ರಮೋಟ್ ಮಾಡಿಕೊಟ್ಟಿದ್ದರು.
ಆದರೆ ಈ ಪ್ರಕರಣ ಆದಾಗ ಧನಂಜಯ ಪ್ರತಿಕ್ರಿಯೆ ನೀಡಿರಲಿಲ್ಲ.
ಸಿನಿಮಾ ಬಿಡುಗಡೆ ಕುರಿತು ಮಾತನಾಡುತ್ತಿದ್ದೇವೆ, ಈ ವಿಷಯ ಯಾಕೆ ಎಂದಿದ್ದರು. ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. “ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ” ಎಂದು ಹೇಳಿದ್ದಾರೆ.
ಎಲ್ಲಿ ಸಿಕ್ಕರೂ ಮಾತಾಡಿ ಮಾತಾಡಿ ಅಂತಾರೆ. ನಮ್ಮ ಪರಿಸ್ಥಿತಿಗಳನ್ನು ಅರ್ಥ ಮಾಡ್ಕೋಡಬೇಕು. ಮಾತಾಡೋದು ಅಂದ್ರೆ ಏನ್ ಮಾತಾಡೋದು ಎಂದು ಪ್ರಶ್ನೆ ಮಾಡಿರುವ ಡಾಲಿ ಧನಂಜಯ ಅಲ್ಲಿ ಒಂದು ದುರಂತ ಆಗಿದೆ. ಒಂದು ಜೀವ ಹೋಗಿದೆ, ಒಂದು ತಪ್ಪಾಗಿದೆ. ಆ ಮನುಷ್ಯನ (ರೇಣುಕಾ ಸ್ವಾಮಿ) ತಂದೆ-ತಾಯಿ ಮುಖ ನೋಡಿದಾಗ, ಆ ಮನುಷ್ಯನ ಪತ್ನಿಯ ಮುಖ ನೋಡಿದಾಗ ಖಂಡಿತಾ ಯಾರಿಗಾದರೂ ಬೇಜಾರು ಆಗಿಯೇ ಆಗುತ್ತದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಆ ಜೀವಕ್ಕೆ ಏನ್ ನ್ಯಾಯ ಸಿಗಬೇಕೋ, ಅದು ಸಿಗಲೇಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಸ್ʻನ ಸಂತ್ರಸ್ತರು ನಮ್ಮ ಕುಟುಂಬದವರೋ, ಆಪ್ತರೋ ಆಗಿದ್ದರೆ ಬೇಜಾರಾಗುತ್ತದೆ. ಆರೋಪ ಹೊತ್ತವರೂ ನಮ್ಮನೆಯವರು, ಆಪ್ತರೇ ಆಗಿದ್ದಾಗಲೂ ಬೇಜಾರಾಗುತ್ತದೆ. ಈ ಕೇಸಿನಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ ಕೋಪ ಮತ್ತು ಬೇಜಾರು ಎರಡೂ ಒಟ್ಟಿಗೇ ಆಯ್ತು ಎಂದಿರುವ ಡಾಲಿ ಧನಂಜಯ ದರ್ಶನ್ ಅವರ ಸಹೋದರನಾಗಿಯೇ ಹೇಳುತ್ತಿದ್ದೇನೆ. ಅವರಿಂದ ತಪ್ಪಾಗಿದ್ದರೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.
ಇಲ್ಲಿ ಯಾವುದನ್ನೂ ಸಮರ್ಥನೆ ಮಾಡುವುದಕ್ಕೆ ಆಗುವುದಿಲ್ಲ. ಎಲ್ಲದಕ್ಕೂ ಕಾನೂನಿದೆ. ಅದರ ಮೂಲಕ ಏನು ಆಗಬೇಕು, ಅದು ಆಗುತ್ತದೆ. ಅದರ ನಡುವೆ ನಾವು ಏನು ಮಾತಾಡಿದರೂ ಉಪಯೋಗ ಇಲ್ಲ . ನಾವು ಯಾರೂ ಅಲ್ಲಿ ಏನಾಯ್ತು ಅನ್ನೋದನ್ನು ನೋಡಿಲ್ಲ. ಅದು ಕಾನೂನಿಗೆ ತಿಳಿದಿರುತ್ತದೆ. ಪಟ್ಟಣಗೆರೆ ಶೆಡ್ʻನಲ್ಲಿ ಆಗಿರುವುದನ್ನು ಯಾರೂ ಸಮರ್ಥನೆ ಮಾಡಿಕೊಳ್ಳೋಕೆ ಆಗುವುದಿಲ್ಲ.ಪದೇ ಪದೇ ಅದನ್ನೇ ಮಾತನಾಡೋದ್ರಿಂದ ಏನೂ ಉಪಯೋಗ ಎಂದು ಹೇಳಿದ್ಧಾರೆ ಡಾಲಿ ದನಂಜಯ.
ಹೌದು.. ಯಾವುದೇ ನಟರು, ರಾಜಕಾರಣಿಗಳು ಮಾತನಾಡೋದ್ರಿಂದ ದರ್ಶನ್ ಸೇರಿದಂತೆ ಯಾರಿಗೂ ಉಪಯೋಗ ಇಲ್ಲ ಎನ್ನುವುದಂತೂ ಸತ್ಯ.



