ಜೆಡಿಎಸ್ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ, ಗಣಿಗ ರವಿಕುಮಾರ್ ಅವರಿಗೆ ಲಾಟರಿಯಲ್ಲಿ ಶಾಸಕರಾಗಿದ್ದೀರ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಕಾರವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಶಾಸಕ ರವಿಕುಮಾರ್ ಟೂರ್ ಮಾಡಲು ಬಂದಿದ್ಯ ಟೂರ್ ಮಾಡ್ಕೊಂಡು ಹೋಗು ಎದಿರೇಟು ಕೊಟ್ಟಿದ್ದರು. ಆದರೆ.. ಹಾಗೆ ಹೇಳಿದ್ದ ಮರುದಿನವೇ ಕುಮಾರಸ್ವಾಮಿಗೆ ನಮಸ್ಕಾರ ಮಾಡಿ ಸುದ್ದಿಯಾಗಿದ್ದಾರೆ. ಅದರ ಹಿಂದೆ ಒಂದು ಲೆಕ್ಕಾಚಾರವೂ ಇದೆ.
ಟೂರ್ ಮಾಡಲು ಬಂದಿದ್ಯ ಸುಮ್ನೆ ಟೂರ್ ಮಾಡ್ಕೊಂಡ್ ಹೋಗ್ತಾ ಇರು. 3 ಸರಿ ಲಾಟರಿ ತಗೊಂಡ್ರು ಯಾಕೆ ಒಮ್ಮೆಯೂ ಸರಿ ನಂಬರ್ ಬಂದಿಲ್ಲ. ಕುರುಕ್ಷೇತ್ರ ಪಿಚ್ಚರಲ್ಲಿ ನಿಖಿಲ್ ಪಾತ್ರ ಏನು?. ನಾನು ಎರಡು ಬಾರಿ ಲಾಟರಿ ತಗೊಂಡೆ ಒಂದು ಸರಿ ಬಂಪರ್ ಹೊಡೀತು. ಅವರು 3 ಸರಿ ಲಾಟರಿ ತಗೊಂಡು ಯಾಕ್ ಕರೆಕ್ಟ್ ನಂಬರ್ ಬರ್ಲಿಲ್ಲ. ಆ ಹುಡುಗನ ಬಗ್ಗೆ ಮಾತಾಡೋದು ವೇಸ್ಟ್. ಮಾಡೋಕ್ ನಮಗೆ ಬೇಜಾನ್ ಕೆಲಸ ಇದೆ, ಅವರ ಹೇಳಿಕೆಗೆ ನಮ್ ಹುಡುಗರು ಉತ್ತರ ಕೊಡ್ತಿದ್ದಾರೆ.. ಎಂದು ಗರಂ ಆಗಿಯೇ ಮಾತನಾಡಿದ್ದರು.
ಸುಮ್ಮನೆ ಅರಚೋದು, ಕಿರುಚೋದ್ರಿಂದ ಮಂಡ್ಯ ಅಭಿವೃದ್ಧಿ ಆಗಲ್ಲ ಎಂದೆಲ್ಲ ಮಾತನಾಡಿದ್ದರು ರವಿ ಗಣಿಗ. ಅದಕ್ಕೆಲ್ಲ ಕಾರಣವಾಗಿದ್ದು ರವಿ ಗಣಿಗ ಅವರು ಲಾಟರಿ ಎಂಎಲ್‌ಎ ಎಂಬ ಒಂದೇ ಒಂದು ಹೇಳಿಕೆ. ಹೀಗೆಲ್ಲ ನಿಖಿಲ್ ಅವರಿಗೆ ಟಾಂಟ್ ಕೊಟ್ಟಿದ್ದ ರವಿ ಗಣಿಗ ಅವರು, ಅದೇ ಮಂಡ್ಯದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದು ದೊಡ್ಡ ಸಂಚಲನ ಸೃಷ್ಟಿಸಿದೆ. ಅದಕ್ಕೆಲ್ಲ ಕಾರಣವೇನು ಗೊತ್ತೇ..? ಮಂಡ್ಯದ ಜನತೆಯ ಫೀಲಿಂಗ್ಸ್.
ಮಂಡ್ಯದ ಜನ ಒಂಥರಾ ವಿಚಿತ್ರ ಸ್ವಭಾವದವರು. ಪ್ರೀತಿಯೂ ಹೆಚ್ಚು. ದ್ವೇಷವೂ ಹೆಚ್ಚು. ಮಂಡ್ಯದಲ್ಲಿ ಒಕ್ಕಲಿಗರೇ ನಿರ್ಣಾಯಕ. ಈ ಜನರದ್ದು ಒಂಥರಾ ವ್ಯಕ್ತಿತ್ವ. ಅವರು ದೇವೇಗೌಡರು, ಕುಮಾರಸ್ವಾಮಿಗೆ ವೋಟು ಹಾಕದೇ ಹೋಗಬಹುದು. ಆದರೆ.. ಅಗೌರವ ಮಾಡುವವರಲ್ಲ. ವಯಸ್ಸು, ಹಿರಿತನಕ್ಕೆ ಗೌರವ ಕೊಡುತ್ತಾರೆ. ರವಿ ಗಣಿಗ ಅವರ ವಯಸ್ಸು ಚಿಕ್ಕದು. ಅಂತಹವರು ನಿಖಿಲ್ ಬಗ್ಗೆ ಮಾತನಾಡಿದ್ದಕ್ಕೆ ಬೇಸರವಿಲ್ಲ. ಆದರೆ.. ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಅಪಮಾನಕಾರಿಯಾಗಿ ಮಾತನಾಡುವುದನ್ನು ಸಹಿಸುವುದಿಲ್ಲ. ಹೀಗಾಗಿಯೇ ಹಲವರು ಬುದ್ದಿ ಹೇಳಿದ್ರಂತೆ. ರಾಜಕೀಯ ಬೇರೆ. ಗೌರವ ಕೊಡುವುದು ಬೇರೆ. ಹಿರಿತನಕ್ಕೆ ಗೌರವ ಕೊಡು. ದುರಹಂಕಾರ ತೋರಿಸಬೇಡ ಎಂದು ಕೆಲವರು ಬುದ್ದಿ ಹೇಳಿದ್ರಂತೆ. ಕುಮಾರಸ್ವಾಮಿ ಅವರ ಜೆಡಿಎಸ್ ಶಾಸಕರು ಸೋತಿರಬಹುದು. ಕುಮಾರಸ್ವಾಮಿ ಪ್ರಭಾವ ಕಡಿಮೆಯಾಗಿಲ್ಲ ಎನ್ನವುದು ಲೋಕಸಭೆಯಲ್ಲಿ ಗೊತ್ತಾಗಿದೆ. ಹೀಗೆ ಇರುವಾಗ.. ದೊಡ್ಡವರಿಗೆ ಗೌರವ ಕೊಡಬೇಕು ಎಂಬ ಮನಸ್ಥಿತಿಯವರೂ ಪಕ್ಷದಿಂದ ದೂರವಾದರೆ.. ಕಷ್ಟ ಎಂದು ಬುದ್ದಿ ಹೇಳಿದ್ರಂತೆ. ಇದೆಲ್ಲದರ ಪರಿಣಾಮ.. ರವಿ ಗಣಿಗ ಕುಮಾರಸ್ವಾಮಿ ಕಾಲಿಗೆ ಬಹಿರಂಗವಾಗಿ ನಮಸ್ಕಾರ ಮಾಡಿದ್ದಾರೆ. ದಿಶಾ ಸಭೆಯಲ್ಲಿ ಭಾಗಿಯಾಗಲು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದಂತೆ ಮಂಡ್ಯದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅವರು ಎದ್ದುನಿಂತು ಕೈಮುಗಿದು, ಕಾಲು ಮುಟ್ಟಿ ನಮಸ್ಕರಿಸಿದ್ದಾರೆ.



