ಐಶ್ವರ್ಯಾ. ಅರ್ಜುನ್ ಸರ್ಜಾ ಅವರ ಮಗಳು. ಇವರ ಮದುವೆ ತಮಿಳು ಯವನಟನ ಜೊತೆ ನಡೆಯಲಿದೆ ಎಂಬ ಸುದ್ದಿ ತಮಿಳು ಮಾಧ್ಯಮಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ತಂಬಿ ರಾಮಯ್ಯ ಎಂದೇ ಖ್ಯಾತರಾಗಿದ್ದಾರೆ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ರಾಮಯ್ಯ. ಇವರ ಪುತ್ರ ಉಮಾಪತಿ ರಾಮಯ್ಯ ಜೊತೆ ಐಶ್ವರ್ಯಾ ಸರ್ಜಾ ಮದುವೆ ಫಿಕ್ಸ್ ಆಗಿದೆಯಂತೆ.
ಉಮಾಪತಿ ರಾಮಯ್ಯ ಅವರೂ ಸಕ್ರಿಯ ನಟರಾಗಿದ್ದಾರೆ. ಕೆಲವು ಚಿತ್ರಗಳಲ್ಲಿ ಹೀರೋ ಆಗಿಯೂ ನಟಿಸಿದ್ದಾರೆ. ಉಮಾಪತಿ ರಾಮಯ್ಯ ಹಾಗೂ ಐಶ್ವರ್ಯಾ ಮೊದಲಿನಿಂದಲೂ ಪ್ರೇಮಿಗಳಾಗಿದ್ದು ಇದೀಗ ಇಬ್ಬರ ಕುಟುಂಬದವರೂ ಒಪ್ಪಿ ಜೋಡಿಯ ಮದುವೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಮದುವೆ ಬಗ್ಗೆ ಸರ್ಜಾ ಕುಟುಂಬವಾಗಲಿ ರಾಮಯ್ಯ ಕುಟುಂಬವಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ ಆದರೆ ತಮಿಳು ಚಿತ್ರರಂಗದ ಕೆಲವು ಹಿರಿಯ ಪತ್ರಕರ್ತರು ರಾಮಯ್ಯ ಕುಟುಂಬದ ಆಪ್ತರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ಪ್ರೇಮ ಬರಹ ಚಿತ್ರದ ಮೂಲಕ ಗಮನ ಸೆಳೆದ ಐಶ್ವರ್ಯಾ ಸರ್ಜಾ, 2013 ರಲ್ಲಿ ವಿಶಾಲ್ ನಟನೆಯ ಪತ್ತು ಯಾನೈ ಸಿನಿಮಾ ಮೂಲಕ ಪದಾರ್ಪಣೆ ಮಾಡಿದರು. ಕನ್ನಡದ ಪ್ರೇಮ ಬರಹ ಸಿನಿಮಾವನ್ನು ತಮಿಳಿನಲ್ಲಿ ಸೊಲ್ಲಿವಿಡಾವಾ ಹೆಸರಿನಲ್ಲಿ ಕೆಲ ದೃಶ್ಯಗಳನ್ನು ಮರುಚಿತ್ರೀಕರಿಸಿ ಬಿಡುಗಡೆ ಮಾಡಲಾಗಿತ್ತು.
ಉಮಾಪತಿ ರಾಮಯ್ಯ ಈ ವರೆಗೆ ನಾಲ್ಕು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದಾರೆ. 2017ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಉಮಾಪತಿ ಆಗಿನಿಂದ ವರ್ಷಕ್ಕೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಉಮಾಪತಿ ರಾಮಯ್ಯ ನಟಿಸಿರುವ ದೇವದಾಸ್ ಚಿತ್ರ ಇನ್ನೂ ರಿಲೀಸ್ ಆಗಬೇಕಿದೆ.



