ಚುನಾವಣೆಗೂ ಮೊದಲು ಲಕ್ಷ್ಮಣ ಸವದಿ (Lakshamana Savadi) ಹಾಗೂ ಜಗದೀಶ್ ಶೆಟ್ಟರ್ (jagadeesh Shetter) ಬಿಜೆಪಿಗೆ ಗುಡ್ ಬೈ ಹೇಳಿದರು. ಯಡಿಯೂರಪ್ಪ (BS Yeddyurappa) ಅಧಿಕಾರದಿಂದ ಕೆಳಗಿಳಿದರು. ಬಸವರಾಜ ಬೊಮ್ಮಾಯಿ (Basavaraja Bommayi) ಸಿಎಂ ಆದರಾದರೂ, ಅವರ ಶಕ್ತಿ ಸಾಮಥ್ರ್ಯ ಶಿಗ್ಗಾಂವಿಯಿಂದ ಹೊರಗೆ ಪ್ರದರ್ಶನಗೊಳ್ಳಲಿಲ್ಲ. ಇದೀಗ ಎಲೆಕ್ಷನ್ ಮುಗಿದು ಬಿಜೆಪಿ ಸೋತು ಸುಣ್ಣವಾಗಿದೆ. ಇನ್ನೂ ಆಕ್ರೋಶ ತಗ್ಗಿಲ್ಲ.
ರೇಣುಕಾಚಾರ್ಯ(Renukacharya), ವಿ.ಸೋಮಣ್ಣ(V Somanna), ಶಂಕರ ಪಾಟೀಲ್ ಮನೇನಕೊಪ್ಪ (Shanakara pateela munenakoppa) , ಇದೀಗ ಪ್ರದೀಪ್ ಶೆಟ್ಟರ್ (Pradeep Shetter ) .. ಎಲ್ಲರೂ ಅಸಮಾಧಾನಿತರೇ. ಅಣ್ಣ ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟರೂ, ಪ್ರದೀಪ್ ಶೆಟ್ಟರ್ ಬಿಜೆಪಿಯಲ್ಲೇ ಉಳಿದಿದ್ದರು. ಅವರೂ ಈಗ ಆಕ್ರೋಶ ಹೊರಹಾಕಿದ್ದಾರೆ.
ಪ್ರದೀಪ್ ಶೆಟ್ಟರ್ ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಬಿಟ್ಟು ಬಕೆಟ್ ಹಿಡಿದವರಿಗೆ ಮನ್ನಣೆ ನೀಡಲಾಗುತ್ತಿದೆ. ಅಲ್ಲದೇ ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ ವಿಧಾನಪರಿಷತ್ ಸದಸ್ಯನಾಗಿದ್ದರೂ ನನ್ನನ್ನು ಕೆಲವು ಕಾರ್ಯಕ್ರಮಗಳಿಗೆ ಕಡೆಗಣಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿಲ್ಲ. ಇಂತಹ ನಾಲ್ಕೈದು ಕಾರ್ಯಕ್ರಮಗಳಲ್ಲಿ ಕಡೆಗಣನೆ ಮಾಡಿದ್ದಾರೆ. ಇದು ನನಗೆ ಬೇಸರ ತಂದಿದೆ. ಯಾಕೆ ಹೀಗೆ ಆಗುತ್ತಿದೆ ಎಂದು ಅರ್ಥ ಆಗುತ್ತಿಲ್ಲ. ಆದರೆ ವೀರಶೈವ ಲಿಂಗಾಯತ ನಾಯಕರಿಗೆ ನಾಯಕತ್ವ ಕೊಟ್ಟರೆ ಮಾತ್ರ ಬಿಜೆಪಿ ಗೆಲ್ಲಲು ಸಾಧ್ಯ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ವೀರಶೈವ ಲಿಂಗಾಯತರಿಗೆ ಕೊಡಬೇಕು. ಈ ಎಲ್ಲಾ ವಿಚಾರಗಳ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಲಿಂಗಾಯತ ನಾಯಕರನ್ನು ನಿರ್ಲಕ್ಷಿಸುತ್ತಿರುವ ಬಹಿರಂಗವಾಗಿ ಅಸಮಾಧಾನ ವ್ಯಕ್ತ ಪಡಿಸಿದ್ದರು. ಇನ್ನು ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದ ರೇಣುಕಾಚಾರ್ಯ ಅವರಿಗೆ ನೋಟಿಸ್ ನೀಡಲಾಗಿದೆ. ಆದರೆ ನೋಟಿಸ್ ನೀಡಿರುವುದು ತಮಗೆ ಮಾತ್ರ, ಉಳಿದವರಿಗೆ ಏಕಿಲ್ಲ ಅನ್ನೋ ಪ್ರಶ್ನೆಗೆ ಬಿಜೆಪಿಯ ನಾಯಕರಲ್ಲಿ ಉತ್ತರ ಇಲ್ಲ. ವಿ.ಸೋಮಣ್ಣ ಕೂಡಾ ಅಸಮಾಧಾನಿತರೇ.
ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲವೇ ಆಗುತ್ತಿದೆ. ನೋ ಲೀಡರ್ಸ್.. ಈ ಅಸಮಾಧಾನ ಅತೃಪ್ತಿಗಳಿಗೆಲ್ಲ ಸೆಂಟ್ರಲ್ ಬಿಜೆಪಿಯದ್ದು ಡೋಂಟ್ ಕೇರ್ ಮಾತು.



