ಇತ್ತೀಚೆಗೆ ನಡೆದ ಕೆಲವು ಘಟನೆಗಳನ್ನು ನೆನಪು ಮಾಡಿಕೊಳ್ಳಿ. ಬಳ್ಳಾರಿಯಲ್ಲಿ ನಡೆದ ಗಲಾಟೆಯಂತೂ ಕಾಂಗ್ರೆಸ್ ಹಿರಿಯ ನಾಯಕರು ಸಮರ್ಥನೆಗೂ ನಿಲುಕದ ವಿಷಯ ಅದು. ಕಾಂಗ್ರೆಸ್ ಕಾರ್ಯಕರ್ತನ ಗನ್ ಮ್ಯಾನ್ ಇಂದಲೇ ಕೊಲೆಯಾಗಿರುವ ಕಾಂಗ್ರೆಸ್ ಕಾರ್ಯಕರ್ತನ ಪ್ರಾಣಕ್ಕೆ 25 ಲಕ್ಷ ಬೆಲೆ ಕಟ್ಟಲಾಗಿದೆ. ಅದನ್ನು ಕೂಡಾ ಸಮರ್ಥನೆ ಮಾಡಿಕೊಳ್ಳೋ ಪರಿಸ್ಥಿತಿಗೆ ಬಂದು ತಲುಪಿದೆ. ಬೀದರ್‌ನಲ್ಲಿ ಗಲಾಟೆ, ಮಂಡ್ಯದಲ್ಲಿ ಮಹಾಯುದ್ಧ, ಬೆಳಗಾವಿಯಲ್ಲಿ ಜಗಳ, ವಿಜಯಪುರದಲ್ಲಿ ಕಿತ್ತಾಟ.. ಕಾಂಗ್ರೆಸ್ ಹತೋಟಿ ತಪ್ಪುತ್ತಿದೆ. ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ ಅವರ ಘನತೆಗೆ ತಕ್ಕಂತೆ, ಆ ಪಕ್ಷದ ನಾಯಕರು ವರ್ತಿಸುತ್ತಿಲ್ಲ.
ರಾಜಕೀಯವಾಗಿ ವಿರೋಧಿಸುವುದು ಬೇರೆ. ಬಳ್ಳಾರಿಗೆ ಬಂದು ನೋಡ್ತೇನೆ, ಏನ್ ಮಾಡ್ಕೋತೀಯ ಎಂದು ರೆಟ್ಟೆ ತಟ್ಟಿಯೇ ಅಖಾಡಕ್ಕೆ ಇಳಿದಿದ್ದವರು ಸಿದ್ದರಾಮಯ್ಯ. ಆ ರಾಜಕೀಯ ಸವಾಲ್ ಇತಿಹಾಸವೇ ಬೇರೆ. ಹಾಗೆ ಸವಾಲು ಹಾಕಿ, ಬಿಜೆಪಿಯನ್ನು ಸೋಲಿಸಿ, ರೆಡ್ಡಿಗಳ ದರ್ಬಾರ್ ಮಟ್ಟ ಹಾಕಿ ತಂದ ನಾಯಕರು ಯಾರು..? ಭರತ್ ರೆಡ್ಡಿಯಂತಹ ನಾಯಕರೇ ಪರ್ಯಾಯ ಮತ್ತು ಪರಿಹಾರ ಎಂದಾದರೆ, ಸಿದ್ದರಾಮಯ್ಯ ಮಾಡಿದ್ದು ಹೋರಾಟ ಅಲ್ಲ ಎನ್ನಬಹುದು. ವಿಚಿತ್ರ ಎಂದರೆ ಇತ್ತೀಚೆಗೆ ಕಾಂಗ್ರೆಸ್ ನಾಯಕರು ತಾಳ್ಮೆ ಎಂಬ ಪದವನ್ನೇ ಮರೆತಂತೆ, ಆಲೋಚನೆ ಎಂಬ ಪದವನ್ನೇ ಕೈಬಿಟ್ಟಂತೆ ವರ್ತಿಸುತ್ತಿದ್ದಾರೆ.
ಬಳ್ಳಾರಿಯಲ್ಲಿ ನಡೆದ ತಮ್ಮದೇ ಪಕ್ಷದ ಕಾರ್ಯಕರ್ತ ರಾಜಶೇಖರ ರೆಡ್ಡಿ ಕೊಲೆ ಪ್ರಕರಣದಲ್ಲಂತೂ ನಾಚಿಕೆ ಇಲ್ಲದೆ ಸಮರ್ಥನೆಗಿಳಿದು ಬಿಟ್ಟಿದ್ದಾರೆ. ಇಷ್ಟೊಂದು ನಾಚಿಕೆ ಬಿಡಬಾರದಿತ್ತು. ಭರತ್ ರೆಡ್ಡಿ ಎಂಬ ಹುಂಬ ಶಾಸಕನನ್ನು ಸಮರ್ಥನೆ ಮಾಡಿಕೊಳ್ಳುವ ಪರಿಸ್ಥಿತಿಗೆ ಡಿಕೆ ಶಿವಕುಮಾರ್ ಇಳಿಯಬಾರದಿತ್ತು. ಸಿದ್ದರಾಮಯ್ಯ, ಪರಮೇಶ್ವರ್ ಅವರಂತಹ ಸೀನಿಯರುಗಳಿಗೆ ಇದು ಘನತೆ ಅಲ್ಲ.
ಅದು ಒಂದು ಹಂತಕ್ಕೆ ಇರುವಾಗಲೇ ಬೀದರಿನಲ್ಲಿ ಬಿಜೆಪಿ ಶಾಸಕ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ಬಿಜೆಪಿ ಎಂಎಲ್ಎ ಸಿದ್ದು ಪಾಟೀಲ್ ಮತ್ತು ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಹೊಡೆದಾಟಕ್ಕೆ ಹೋಗಿದ್ದಾರೆ. ಈಶ್ವರ್ ಖಂಡ್ರೆ ಮೂಕ ಸಾಕ್ಷಿ. ಬೈದಾಡಿಕೊಂಡಿರುವ ಕೆಟ್ಟ ಕೆಟ್ಟ ಮಾತುಗಳನ್ನು ಕೇಳಿದರೆ ಕಿವಿ ತುಂಬಾ ರಕ್ತ ಬಂದೀತು.
ಪಕ್ಕದ ರಾಯಚೂರಿಗೆ ಹೋದರೆ ವಿಧಾನಪರಿಷತ್ ಸದಸ್ಯ ಬಾದರ್ಲಿ ಅವರಿಗೆ ಶಿಷ್ಟಾಚಾರದ ಪ್ರಕಾರ ಕೊಡಬೇಕಾದ ಗೌರವ ಕೊಡುತ್ತಿಲ್ಲ. ಅದು ಗಲಾಟೆಯಾಗಿದೆ.
ಬೆಳಗಾವಿಯಲ್ಲಿ ಲಕ್ಷ್ಮಣ ಸವದಿ ಮನೆಗೆ ಹೋಗಿದ್ದ ಬ್ಯಾಂಕ್ ಮ್ಯಾನೇಜರ್ ಒಬ್ಬರ ಮೇಲೆ ಹಲ್ಲೆಯಾಗಿದೆಯಂತೆ. ಅದು ಈಗ ಬೆಳಗಾವಿಯಲ್ಲಿ ಬೆಂಕಿ ಹೊತ್ತಿಸಿದೆ. ಕೇಂದ್ರ ಸಚಿವ ವಿ ಸೋಮಣ್ಣ ಅವರ ಮೇಲೆ ಸಚಿವ ಶಿವರಾಜ್ ತಂಗಡಗಿ ಮತ್ತವರ ಬೆಂಬಲಿಗರು ಕುರ್ಚಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಲ್ಪ ಹಿಂದಕ್ಕೆ ಹೋದರೆ ಪ್ರದೀಪ್ ಈಶ್ವರ್ ಮತ್ತು ಪ್ರತಾಪ್ ಸಿಂಹ ನಡುವೆ ನಡೆದ ಆರ್ಭಟ, ಅಶ್ಲೀಲ ಪದಗಳ ಹೋರಾಟ, ಬೈಗುಳಗಳನ್ನು ಕರ್ನಾಟಕದ ಜನತೆ ನೋಡಿದ್ದಾರೆ.
ರಾಜಕೀಯ ಹೋರಾಟ ಬೇರೆ. ಕರ್ನಾಟಕ ರಾಜಕೀಯವೇ ಲೋ ಲೆವೆಲ್‌ಗೆ ಇಳಿದರೆ ಏನ್ ಮಾಡೋದು..?



