ಕಾಟೇರ. ಈ ಚಿತ್ರದ ಬಗ್ಗೆ ಒಂದಷ್ಟು ವಿಶೇಷ ಹಾಗೂ ಕುತೂಹಲಗಳಿವೆ. ಕ್ರಾಂತಿ ಸಿನಿಮಾ ಫ್ಲಾಪ್ ಆದ ಮೇಲೆ ಬರುತ್ತಿರುವ ದರ್ಶನ್ ಅವರ ಮೊದಲ ಸಿನಿಮಾ ಕಾಟೇರ.
ದರ್ಶನ್ ಅವರಿಗೆ ರಾಬರ್ಟ್ʻನಂತಹ ಹಿಟ್ ಕೊಟ್ಟ ತರುಣ್ ಸುಧೀರ್ ನಿರ್ದೇಶಿಸುತ್ತಿರುವ ಸಿನಿಮಾ ಕಾಟೇರ.
ರಾಕ್ʻಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಹಲವು ವರ್ಷಗಳ ನಂತರ ನಟಿಸಿರುವ ಸಿನಿಮಾ. 2008ರಲ್ಲಿ ದರ್ಶನ್ ಅವರ ಯೋಧ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈಗ ಕಾಟೇರ.
ಮಾಲಾಶ್ರೀ ಮಗಳು ಆರಾಧನಾ ಇದೇ ಮೊದಲ ಬಾರಿಗೆ ನಾಯಕಿಯಾಗಿರುವ ಸಿನಿಮಾ.
ರಾಕ್ʻಲೈನ್ ವೆಂಕಟೇಶ್ ಪ್ರೊಡ್ಯೂಸರ್ ಆದ ಮೊದಲ ಸಿನಿಮಾಗೆ ಮಾಲಾಶ್ರೀ ಹೀರೋಯಿನ್. ಬೆಳ್ಳಿಮೋಡಗಳು ಚಿತ್ರ ರಾಕ್ʻಲೈನ್ ವೆಂಕಟೇಶ್ ನಿರ್ಮಾಣದ ಮೊದಲ ಸಿನಿಮಾ.
ಹೀಗೆ ಹಲವು ವಿಶೇಷಗಳಿರೋ ಕಾಟೇರ ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದೇ ತಡ, ಹಾಡು ಪಸಂದಾಗೈತೆ ಎಂದು ಮೆಚ್ಚಿಕೊಂಡೋರ ಸಂಖ್ಯೆಯೇ ಒಂದೂವರೆ ಲಕ್ಷ ದಾಟಿದೆ. ನೋಡುಗರ ಸಂಖ್ಯೆಯೂ ಅಷ್ಟೇ..ಕೋಟಿಗಳನ್ನು ದಾಟಿದೆ. ಹಾಡಿನಲ್ಲಿರೋದು ಹೀರೋನ ಪ್ರೀತಿಗೆ ಬಿದ್ದ ಹುಡುಗಿಯ ಒಲವಿನ ಹಾಡು.
ನೋಡ್ತಾ ನೋಡ್ತಾ ಆಗೋಗೈತೆ ಶ್ಯಾನೆ ಪಿರೂತಿ..
ನೋಡ್ತಾ ನೋಡ್ತಾ ಆಗೋಗೈತೆ ಶ್ಯಾನೆ ಪಿರೂತಿ..
ಪಕ್ಕದಲ್ ನಿಂತ್ರೆ ಶಿವ ನೀನೇ.. ನಾನು ಪಾರ್ವತಿ..
ಪಸಂದಾಗವ್ನೇ.. ಶ್ಯಾನೆ ಪಸಂದಾಗವ್ನೆ..
ಅಪ್ಪಟ ಹಳ್ಳಿ ಶೈಲಿಯಲ್ಲಿರೋ ಹಾಡು, ಹಳ್ಳಿ ಸ್ಟೈಲಿನ ಕುಣಿತ ಪಸಂದಾಗೈತೆ. ಚೇತನ್ ಕುಮಾರ್ ಬರೆದಿರುವ ಸಾಹಿತ್ಯಕ್ಕೆ ಸಂಗೀತ ನೀಡಿರುವುದು ಹರಿಕೃಷ್ಣ. ಅಷ್ಟೇ ಸಖತ್ತಾಗಿ ಹಾಡಿರೋದು ಮಂಗ್ಲಿ. ಡುಯೆಟ್ ಸಾಂಗ್ ಅನ್ನು ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಕಟ್ಟಿಕೊಡಲಾಗಿದೆ. ಭೂಷಣ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಒಂದಷ್ಟು ಡ್ಯಾನ್ಸರ್ಸ್ ನಾಯಕಿಗೆ ಸಾಥ್ ಕೊಟ್ಟಿದ್ದಾರೆ. ನೂರಾರು ಡ್ಯಾನ್ಸರ್ಸ್ ಬಳಸಿಕೊಂಡು ಮೇಲುಕೋಟೆ ಸುತ್ತಾ ಮುತ್ತಾ ಬಹಳ ಅದ್ಧೂರಿಯಾಗಿ ಹಾಡನ್ನು ಸೆರೆ ಹಿಡಿಯಲಾಗಿದೆ.
ಹಾಡಿನುದ್ದಕ್ಕೂ ದರ್ಶನ್ ಲುಂಗಿ, ಅಂಗಿಯಲ್ಲಿ ಕಾಣಿಸಿಕೊಂಡಿದ್ದು ಆರಾಧನಾ ಲಂಗಾ ದಾವಣಿಯಲ್ಲಿ ಕಂಗೊಳಿಸಿದ್ದಾರೆ. ಮಾಲಾಶ್ರೀ ಅವರಲ್ಲಿ ಅಭಿಮಾನಿಗಳು ನಂಜುಂಡಿ ಕಲ್ಯಾಣ, ರಾಮಾಚಾರಿಯ ಮಾಲಾಶ್ರೀಯನ್ನು ಹುಡುಕುತ್ತಿದ್ಧಾರೆ. ಮಾಲಾಶ್ರೀ ಅವರ ಮಗಳು ಕೂಡಾ ಮಾಲಾಶ್ರೀ ಅವರಷ್ಟೇ ಚೆಂದದ ನಗು, ಸೌಂದರ್ಯ ಹೊಂದಿದ್ದಾರಾ..? ನಿರ್ಧಾರ ನೋಡುಗರ ಕಣ್ಣಿಗೆ ಬಿಟ್ಟಿದ್ದು. ಮಾಲಾಶ್ರೀ ಮಗಳು ಎಂದೇ ಗುರುತಿಸಿಕೊಂಡಿರೋ ಆರಾಧನಾ, ಕಾಟೇರ ರಿಲೀಸ್ ಆದ ನಂತರವೂ ಮಾಲಾಶ್ರೀ ಮಗಳು ಎಂದೇ ಗುರುತಿಸಿಕೊಂಡರೆ ಅದು ಆರಾಧನಾ ಅವರ ಸೋಲು. ದರ್ಶನ್ ಅವರಂತಹ ಸ್ಟಾರ್ ನಟರ ಚಿತ್ರದ ಮೂಲಕ ಲಾಂಚ್ ಆಗುತ್ತಿರೋ ಆರಾಧನಾ, ನೋಡುವುದಕ್ಕೆ ಚೆಂದವೇನೋ ಇದ್ಧಾರೆ. ಆದರೆ ಹಳ್ಳಿ ಹುಡುಗಿ ಪಾತ್ರಕ್ಕೆ ಸೂಟ್ ಆಗಿದ್ಧಾರಾ..? ಹಾಡು ನೋಡಿದವರಿಗೆ ಅಂಥಾದ್ದೊಂದು ಪ್ರಶ್ನೆ ಮೂಡಿದರೆ ತಪ್ಪಲ್ಲ. ಆದರೆ ಕಾಟೇರ ರಿಲೀಸ್ ಆದ ನಂತರವೇ ನಿರ್ಧಾರ ಹೇಳಬೇಕು.
ಇತ್ತೀಚೆಗೆ ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿತ್ತು. ದರ್ಶನ್ ಬೀಡಿ ಸೇದುವ ಸ್ಟೈಲ್, ಸ್ವ್ಯಾಗ್ ಅಭಿಮಾನಿಗಳ ಮನಗೆದ್ದಿತ್ತು. ವರ್ಷದ ಕೊನೆಗೆ ಬರುತ್ತಿರುವ ‘ಕಾಟೇರ’ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.
ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿರೋದು ಉಳುವವನೆ ಭೂಮಿಯ ಒಡೆಯ.. ಕಾಲದ ಕಥೆ. ರಾಕ್ʻಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ, ಸದ್ಯಕ್ಕೆ ಕನ್ನಡದಲ್ಲಷ್ಟೇ ರಿಲೀಸ್ ಆಗುತ್ತಿದೆ. ‘ಸಲಾರ್’, ‘ಡಂಕಿ’ ಸಿನಿಮಾಗಳ ರಿಲೀಸ್ ಬೆನ್ನಲ್ಲೇ ‘ಕಾಟೇರ’ ಸಿನಿಮಾ ತೆರೆಗೆ ಬರ್ತಿದೆ. ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್.



