ನಾವೇನು ತಿಂಗಳೂ ತಿಂಗಳೂ ಹಣ ಕೊಡ್ತೀವಿ ಅಂತಾ ಹೇಳಿದ್ವಾ.. ನೋನೋ.. ಪ್ರತೀ ತಿಂಗಳೂ ಕೊಡ್ತೀವಿ ಅಂತಾ ಹೇಳಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ ಮರುದಿನವೇ ಗೃಹ ಲಕ್ಷ್ಮಿ ಹಣ ರಿಲೀಸ್ ಆಗಿದೆ.
ವಿಜಯನಗರದಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ಕುರಿತ ಸುದ್ದಿಗೋಷ್ಠಿಯಲ್ಲಿ ಗೃಹ ಲಕ್ಷ್ಮೀ ಹಣ ವಿಳಂಬದ ಬಗ್ಗೆ ಪತ್ರಕರ್ತರು ಹೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, . ನೋಡ್ರಿ ತಿಂಗಳು ತಿಂಗಳು ಹಣ ಕೊಡ್ತೀವಿ ಅಂತ ನಾವು ಹೇಳಿಲ್ಲ. ನೀವು ಟ್ಯಾಕ್ಸ್ ಕಟ್ಟುತ್ತಾ ಇರಬೇಕು.. ನಾವು ದುಡ್ಡು ಕೊಡ್ತಾ ಇರಬೇಕು. ಈಗ ಗುತ್ತಿಗೆ ಕೆಲಸ ಮಾಡುವವರಿಗೆ ನಾಳೆನೇ ಹಣ ಬಂದುಬಿಡುತ್ತಾ? 2, 3, 5 ವರ್ಷ ಆಗುತ್ತೆ ಅಲ್ವಾ.. ಅದೇ ರೀತಿ ಇದೂ ಕೂಡ ಬಂದಾಗ ಬರುತ್ತೆ ಎಂದು ಹೇಳಿದ್ದರು. ಆ ಹೇಳಿಕೆ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.
ಹೊಸಪೇಟೆಯಲ್ಲಿ ಸೋಮವಾರ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಡಿಕೆ ಶಿವಕುಮಾರ್ ಅವರು, ಗೃಹಲಕ್ಷ್ಮಿ ಹಣವನ್ನು ಪ್ರತಿ ತಿಂಗಳು ಕೊಡುತ್ತೇವೆ ಎಂದು ನಾವು ಹೇಳಿಲ್ಲ. ಸರ್ಕಾರದ ದುಡ್ಡು ಬರ್ತಾ ಇರಬೇಕು. ನೀವು ಟ್ಯಾಕ್ಸ್ ಕಟ್ಟುತ್ತಾ ಇರಬೇಕು ನಾವು ಅದನ್ನ ಕೊಡ್ತಾ ಇರಬೇಕು. ಕಂಟ್ರಾಕ್ಟ್ ಮಾಡುವವರಿಗೆ ಮರು ದಿನವೇ ದುಡ್ಡು ಬರುತ್ತಾ? ಒಂದು ವರ್ಷ, ಎರಡು ವರ್ಷ, ಮೂರು ನಾಲ್ಕು ವರ್ಷ ಆಗ್ತಾ ಇರುತ್ತದೆ ಎಂದಿದ್ದರು. ವಿರೋಧ ತೀವ್ರವಾಗುತ್ತಿದ್ದಂತೆಯೇ ಗೃಹ ಲಕ್ಷ್ಮಿ ಹಣ, ಫಲಾನುಭವಿಗಳಿಗೆ ವರ್ಗವಾಗಿದೆ. ಏಪ್ರಿಲ್ ಮೇ ತಿಂಗಳ ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ವರ್ಗವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಡಿಕೆಶಿ ಹೇಳಿಕೆಗೆ ಕಿಡಿಕಾರಿದ್ದ ಜೆಡಿಎಸ್ ” ಸುಳ್ಳು ಹೇಳಿ ಯಾಮಾರಿಸುವುದು ಕಾಂಗ್ರೆಸ್‌ನ ಹುಟ್ಟು ಗುಣ. ಡಿಕೆ ಶಿವಕುಮಾರ್ ಅವರೇ ನಿಮಗೆ ಎಷ್ಟು ನಾಲಿಗೆ ? ಗೃಹಲಕ್ಷ್ಮಿ ಹಣವನ್ನು ಪ್ರತಿ ತಿಂಗಳು ನೇರವಾಗಿ ಮಹಿಳೆಯರ ಖಾತೆಗೆ ಹಾಕುತ್ತೇವೆ ಎಂದು ಅಂದು ನೀವು ಹೇಳಿದ್ದೀರಿ. ಈಗ ಆ ರೀತಿ ಹೇಳೇ ಇಲ್ಲ ಎಂದು ಉಲ್ಟಾ ಹೊಡೆಯುತ್ತಿದ್ದೀರಿಲ್ಲ ನಿಮಗೆ ನಾಚಿಕೆಯಾಗಲ್ವ ? ಎಂದು ಪ್ರಶ್ನೆ ಮಾಡಿತ್ತು.
ಗೃಹಲಕ್ಷ್ಮಿ ಯೋಜನೆಯ ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ಹಣ ಬಾಕಿ ಇದ್ದು, ಯಾವಾಗ ಬಿಡುಗಡೆಯಾಗುತ್ತದೆ ಎಂದು ಫಲಾನುಭವಿ ಮಹಿಳೆಯರು ಎದುರು ನೋಡುತ್ತಿದ್ದರು. ಯುಗಾದಿ ಹಬ್ಬದ ಸಂದರ್ಭದಲ್ಲಿ ಡಿಸೆಂಬರ್, ಜನವರಿ ತಿಂಗಳು ಹಣ ಖಾತೆ ಜಮೆಯಾಗಿತ್ತು. ಆ ಬಳಿಕ ಮತ್ತೆ ಹಣ ಬಂದಿಲ್ಲ ಎನ್ನುತ್ತಾರೆ ಫಲಾನುಭವಿಗಳು. ಆದರೆ ಈಗ ಏಪ್ರಿಲ್-ಮೇ ತಿಂಗಳ ಹಣ ಕೊಟ್ಟಿದ್ದೇವೆ ಎನ್ನುತ್ತಿದೆ ಸರ್ಕಾರ. ಹಾಗಾದರೆ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳ ಹಣ ಎಲ್ಲಿ ಹೋಯ್ತು ಎಂದು ಪ್ರಶ್ನೆ ಮಾಡುತ್ತಿದ್ದಾರೆ ಫಲಾನಭವಿಗಳು. ಇದೆಲ್ಲದರ ಜೊತೆ ಖಜಾನೆಯಲ್ಲಿ ಹಣ ಇಲ್ಲ ಎಂದು ಡಿಕೆ ಪರೋಕ್ಷವಾಗಿ ಒಪ್ಪಿಕೊಂಡಂತೆ ಆಗಿದೆ.