ಶಿವಣ್ಣ ಅವರ ಅಕ್ಕರೆಯಿಂದ ಸೃಷ್ಟಿಯಾದ ಸಿನಿಮಾ ಅಪ್ಪು. ಶಿವಣ್ಣರ ಅಚ್ಚುಮೆಚ್ಚಿನ ತಮ್ಮನಾಗಿದ್ದವರು ಅಪ್ಪು. ಅಂತಹ ಅಪ್ಪು ಚಿತ್ರರಂಗ ಪ್ರವೇಶ ಅದ್ಧೂರಿಯಾಗಿರಬೇಕು, ಕಥೆ ಸಖತ್ ಆಗಿರಬೇಕು ಎಂದೆಲ್ಲ ಕನಸು ಕಂಡಿದ್ದ ಶಿವಣ್ಣ ಅವರಿಗೆ ಚಿತ್ರದ ಟೈಟಲ್ ಕೇಳಿಯೇ ಶಾಕ್ ಆಗಿತ್ತು. ಏಕೆಂದರೆ ಚಿತ್ರಕ್ಕೆ ನಿರ್ದೇಶಕರು ಅಂದುಕೊಂಡಿದ್ದ ಟೈಟಲ್ ಈಡಿಯಟ್. ಆದರೆ ಶಿವಣ್ಣ ಅವರ ಹಠಕ್ಕೆ ಡೈರೆಕ್ಟರ್ ಪುರಿ ಜಗನ್ನಾಥ್ ಮಣಿಯಲೇಬೇಕಾಯ್ತು.
ಅಪ್ಪು ಇದೇ ಮಾರ್ಚ್ 14ಕ್ಕೆ ರಿಲೀಸ್ ಆಗುತ್ತಿದೆ. ದಿ.ಪುನೀತ್ ರಾಜ್ ಕುಮಾರ್ ಹೀರೋ ಆಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾ ಇದು. ಆಗಲೇ ಶೋಗಳು ಬುಕ್ ಆಗುತ್ತಿವೆ. ಒಂದು ಹೊಸ ಚಿತ್ರಕ್ಕೆ ಯಾವ ರೀತಿ ಸ್ವಾಗತ ಸಿಗುತ್ತದೋ.. ಅದೇ ರೀತಿಯ ಸೆನ್ಸೇಷನ್ ಸೃಷ್ಟಿಯಾಗಿದೆ. ಇನ್ನು ಚಿತ್ರದ ಕೆಲವು ವಿಶೇಷ ಸಂಗತಿಗಳೂ ಹೊರಬರುತ್ತಿವೆ. ಇನ್ನು ಅಪ್ಪು ಚಿತ್ರಕ್ಕೆ ಕಾಳಜಿ ವಹಿಸಿದ್ದವರು ಶಿವಣ್ಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅಂತಹ ಶಿವಣ್ಣ ಈ ಚಿತ್ರಕ್ಕೆ ನಿರ್ದೇಶಕರ ಮನಸ್ಸಿನಲ್ಲಿದ್ದ ಟೈಟಲ್ ಬೇಡ ಎಂದು ಹಠ ಹಿಡಿದಿದ್ದರಂತೆ.
ಅಪ್ಪು ಚಿತ್ರಕ್ಕೆ ನಿರ್ದೇಶಕ ಪುರಿ ಜಗನ್ನಾಥ್ ಇಟ್ಟಿದ್ದ ಹೆಸರು ಈಡಿಯಟ್. ಆದರೆ ಶಿವಣ್ಣ ಅವರಿಗೆ ಆ ಟೈಟಲ್ ಇಷ್ಟವಾಗಲಿಲ್ಲ.
ತಮ್ಮನ ಮೊದಲ ಚಿತ್ರಕ್ಕೆ ಆ ರೀತಿಯ ಟೈಟಲ್ ಬೇಡ. ಅವನನ್ನು ಈಡಿಯಟ್ ಎಂದು ಮೊದಲ ಚಿತ್ರದಲ್ಲೇ ಇಟ್ಟರೆ ಸರಿ ಇರಲ್ಲ ಎನ್ನುತ್ತಿದ್ದ ಶಿವಣ್ಣಗೆ ತಮ್ಮನನ್ನು ಈಡಿಯಟ್ ಎಂದು ಕರೆಯುವುದನ್ನು ಅರಗಿಸಿಕೊಳ್ಳೋಕೆ ಆಗಿರಲಿಲ್ಲ. ನಾವೆಲ್ಲ ಮನೆಯಲ್ಲಿ ಅಪ್ಪು ಎಂದೇ ಕರೆಯುತ್ತೇವೆ. ಅದೇ ಟೈಟಲ್ ಇಡೋಣ ಎಂದು ವಾದಿಸಿ ಹಿಡಿದ ಹಠ ಸಾಧಿಸಿಬಿಟ್ಟರಂತೆ ಶಿವಣ್ಣ.
ಒಂದು ಹಂತದಲ್ಲಿ ನಿರ್ದೇಶಕರ ವಾದಕ್ಕೆ ದೊಡ್ಡವರಾದ ಡಾ.ರಾಜ್, ಪಾರ್ವತಮ್ಮ, ವರದಪ್ಪ ಒಪ್ಪಿದ್ದರೂ, ಶಿವಣ್ಣ ಮಾತ್ರ ಹಠ ಬಿಡಲೇ ಇಲ್ಲವಂತೆ. ಕೊನೆಗೆ ಶಿವಣ್ಣ ಹಠವೇ ಗೆದ್ದು, ಅಪ್ಪು ಸಿನಿಮಾ ಆಯ್ತು. ಇದನ್ನೆಲ್ಲ ಸ್ವತಃ ಹೇಳಿಕೊಂಡಿರೋದು ಅಪ್ಪು ಡೈರೆಕ್ಟರ್ ಪುರಿ ಜಗನ್ನಾಥ್.
ಈಗ ಅಪ್ಪು ಸಿನಿಮಾ ರೀರಿಲೀಸ್ ಆಗುತ್ತಿರುವ ಬೆನ್ನಲ್ಲೇ ಪುರಿ ಜಗನ್ನಾಥ್ ಅವರು ತಮ್ಮ ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಶಿವಣ್ಣ ಅವರಿಂದಾಗಿಯೇ ಅಪ್ಪು ಸಿನಿಮಾ ತೆರೆಗೆ ಬಂತು. ಶಿವಣ್ಣ ಅವರೇ ನನ್ನನ್ನು ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಅವರಿಗೆ ಪರಿಚಯ ಮಾಡಿಕೊಟ್ಟರು. ಬಳಿಕ ನಾನು ಪುನೀತ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು ಎಂದು ಪುರಿ ನೆನೆದಿದ್ದಾರೆ. ಪುನೀತ್ ಅವರು ಕನ್ನಡ ಚಿತ್ರರಂಗಕ್ಕೆ ಸಿಕ್ಕ ಒಂದು ರತ್ನ, ಅವರು ಬಹುಮುಖ ಪ್ರತಿಭೆ ಎಂದು ಸ್ಮರಿಸಿದ್ದಾರೆ. ಈಗ ಅಪ್ಪು ಸಿನಿಮಾ ರೀರಿಲೀಸ್ ಆಗುತ್ತಿರುವುದು ಸಂತಸದ ವಿಚಾರ ಎಂದು ಹೇಳಿದ್ದಾರೆ.
ಆದರೆ ಈಡಿಯಟ್ ಟೈಟಲ್ಲನ್ನು ಪುರಿ ಬಿಡಲಿಲ್ಲ. ಅಪ್ಪು ಸಿನಿಮಾ ತೆಲುಗಿಗೆ ರೀಮೇಕ್ ಮಾಡಿದಾಗ ಈಡಿಯಟ್ ಹೆಸರಿನಲ್ಲೇ ಸಿನಿಮಾ ಮಾಡಿದರು. ರವಿತೇಜ ಹೀರೋ ಆದರೆ, ಅಪ್ಪು ಹೀರೋಯಿನ್ ರಕ್ಷಿತಾ ಈಡಿಯಟ್ ಮೂಲಕವೇ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಲ್ಲೂ ಸಿನಿಮಾ ಸೂಪರ್ ಹಿಟ್ ಆಯ್ತು.
ಇನ್ನು ಅಪ್ಪು ಚಿತ್ರದ ಮೂಲಕ ಕನ್ನಡಕ್ಕೊಬ್ಬರು ಪವರ್ ಸ್ಟಾರ್ ಸಿಕ್ಕರು. ಅಪ್ಪು ಚಿತ್ರದ ನಿರ್ದೇಶಕ ಪುರಿ ಅವರನ್ನು ಹುಡುಕಿದ್ದೂ ಶಿವಣ್ಣ. ಚಿತ್ರದ ಕಥೆಯನ್ನು ಮೊದಲು ಕೇಳಿದ್ದು ಕೂಡಾ ಶಿವಣ್ಣ. ನಂತರವೇ ಪುರಿ, ಪಾರ್ವತಮ್ಮನವರಿಗೆ ಕಥೆ ಹೇಳಿದರು. ಅದಾದ ಮೇಲೆ ಅಪ್ಪುಗೆ ಪವರ್ ಸ್ಟಾರ್ ಎಂಬ ಟೈಟಲ್ ಕೊಟ್ಟಿದ್ದೂ ಶಿವಣ್ಣ. ಒಟ್ಟಿನಲ್ಲಿ ಅಪ್ಪು ಸಿನಿಮಾ ಶಿವಣ್ಣ ಅವರ ಕನಸು ಎಂದರೆ ತಪ್ಪಾಗಲಿಕ್ಕಿಲ್ಲ.



