ಪುನೀತ್ ಮತ್ತು ದರ್ಶನ್ ನಡುವೆ ಒಂದು ಹಂತದವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಪುನೀತ್ ಅವರಂತೂ ಯಾವ ನಟರ ವಿಚಾರಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹಾಗೆ ನೋಡಿದರೆ… ದರ್ಶನ್ ತಮ್ಮ ಮಾತಿನ ಭರದಲ್ಲಿ ಆಗಾಗ್ಗೆ ದೊಡ್ಮನೆಯ ಗಲಾಟೆಯನ್ನು ಪ್ರಸ್ತಾಪ ಮಾಡುತ್ತಲೇ ಇದ್ದರು. ಅದಕ್ಕೂ ಪುನೀತ್ ರಿಯಾಕ್ಟ್ ಮಾಡ್ತಿರಲಿಲ್ಲ. ಇನ್ನು ಹೊರಗೆ ಸಿಕ್ಕಾಗ ಪುನೀತ್, ದರ್ಶನ್ ಅವರ ಬಗ್ಗೆ ಒಳ್ಳೆಯದನ್ನಷ್ಟೇ ಮಾತನಾಡ್ತಿದ್ದರು. ಪುನೀತ್ ಅವರ ಅರಸು ಚಿತ್ರದಲ್ಲಿ ದರ್ಶನ್ ಒಮ್ಮೆ ಅತಿಥಿ ನಟರಾಗಿಯೂ ನಟಿಸಿದ್ದಾರೆ. ಆ ಚಿತ್ರಕ್ಕೆ ರಾಘವೇಂದ್ರ ರಾಜ್ ಕುಮಾರ್ ಪ್ರೊಡ್ಯೂಸರ್.
ಆದರೆ.. ಇದೇ ಸಾಮರಸ್ಯ ಪುನೀತ್ ಮತ್ತು ದರ್ಶನ್ ಅಭಿಮಾನಿಗಳ ಮಧ್ಯೆ ಇಲ್ಲ. ಒಮ್ಮೆ ಅವರು.. ಇನ್ನೊಮ್ಮೆ ಇವರು.. ಹದ್ದು ಮೀರುತ್ತಲೇ ಇರುತ್ತಾರೆ. ಮಾರ್ಚ್ 14ಕ್ಕೆ ಅಪ್ಪು ರಿ ರಿಲೀಸ್ ಅನ್ನೋದನ್ನ ಪುನೀತ್ ಅಭಿಮಾನಿಗಳು ಹಬ್ಬ ಮಾಡ್ಕೊಳ್ತಿದ್ದಾರೆ. ಈ ಸಮಯದಲ್ಲೇ ಟೈಮಲ್ಲೇ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರೋ ಪ್ರಸನ್ನ ಥಿಯೇಟರಿನಲ್ಲಿ ದರ್ಶನ್ ಅಭಿನಯದ ಕರಿಯ ರಿ-ರಿಲೀಸ್ ಆಗಿದೆ. ಅಪ್ಪು ರಿ-ರಿಲೀಸ್ ಟೈಂನಲ್ಲಿ ಕರಿಯಾ ರೀ-ರಿಲೀಸ್ ಮಾಡ್ಬೇಕಿತ್ತಾ..? ಅನ್ನೋದು ಪುನೀತ್ ಅಭಿಮಾನಿಗಳ ಪ್ರಶ್ನೆ. ಏನ್ ಮಾಡ್ಲಿ, ನಾವೂ ಅಪ್ಪು ಸಿನಿಮಾ ಕೇಳಿದ್ವಿ. ಆದರೆ ಪಕ್ಕದ ವೀರೇಶ್ ಚಿತ್ರಮಂದಿರಕ್ಕೆ ಕೊಟ್ಟಿದ್ದೇವೆ, ಪಕ್ಕದಲ್ಲೇ ಇರೋ ಪ್ರಸನ್ನಗೆ ಕೊಡೋಕೆ ಆಗಲ್ಲ ಅನ್ನೋ ಉತ್ತರ ಸಿಕ್ಕಿದೆ.
ʻʻಅಪ್ಪು ರಿ-ರಿಲೀಸ್ ಆಗಿರೋದ್ರಿಂದ ಈ ವಾರ ಯಾವುದೇ ಕನ್ನಡ ಸಿನಿಮಾ ರಿಲೀಸ್ ಆಗಿಲ್ಲ. ಇದು ಚಿತ್ರಮಂದಿರಗಳಿಗೆ ಸಿನಿಮಾಗಳಿಲ್ಲದೆ ಹೊಡೆತ ಕೊಟ್ಟಿದೆ. ಮೊದಲೇ ಜನ ಬರ್ತಿಲ್ಲ, ಅಂಥಾದ್ರಲ್ಲಿ ಅಪ್ಪು ರಿ-ರಿಲೀಸ್ ಹೆಸರಲ್ಲಿ ಯಾವ ಸಿನಿಮಾನೂ ಬರ್ತಿಲ್ಲ. ಏನ್ ಮಾಡೋಣ. ಅದಕ್ಕೆ ನಾನು ಕನ್ನಡ ಸಿನಿಮಾ ಹಾಕಬೇಕು ಅಂತ ಹಾಕಿದ್ದೇನೆ. ಯಾವುದೇ ಸಿನಿಮಾ ಇಲ್ಲದೆ ಇರುವುದರಿಂದ ಸಿನಿಮಾ ಬೇಕು ಅಂತ ಡಿಸ್ಟ್ರಿಬ್ಯೂಟರ್ ಅನ್ನು ಕೇಳಿದ್ವಿ. ಅವರು ಕೊಟ್ಟರು. ಸಿನಿಮಾ ಹಾಕಿದ್ದೇವೆ. ಇದರಲ್ಲಿ ತಪ್ಪೇನಿದೆʼʼ ಅನ್ನೋದು ಪ್ರಸನ್ನ ಥಿಯೇಟರ್ ಮಾಲೀಕ ವಿನಯ್ ಅವರ ಪ್ರಶ್ನೆ.
ಇಷ್ಟಕ್ಕೂ ಒಂದು ಥಿಯೇಟರ್ ರನ್ ಮಾಡೋಕೆ ಒಂದು ತಿಂಗಳಿಗೆ ಮಿನಿಮಮ್ 4 ಲಕ್ಷ ಬೇಕೇ ಬೇಕು. ಕೆಲಸಗಾರರಿಗೆ ಸಂಬಳ, ವಿದ್ಯುತ್ ಬಿಲ್, ಟ್ಯಾಕ್ಸ್.. ಎಲ್ಲ ಸೇರಿ ಅಷ್ಟು ಹಣ ಬೇಕು. ಡಿಸ್ಟ್ರಿಬ್ಯೂಟರ್ ಹತ್ತಿರ ಕೇಳಿದ್ವಿ. ಅವರು ಈ ಸಿನಿಮಾ ಇದೆ, ತಗೊಳ್ಳಿ ಅಂದ್ರು, ತಗೊಂಡಿದ್ದೇವೆ. ಇಷ್ಟಕ್ಕೂ ಕರಿಯ ಕೂಡಾ ಕನ್ನಡ ಸಿನಿಮಾನೇ ಅನ್ನೋದು ವಿನಯ್ ವಾದ. ಇಷ್ಟೆಲ್ಲ ಶುರುವಾಗಿದ್ದು ಅಪ್ಪು ರಿ-ರಿಲೀಸ್ ಟೈಂನಲ್ಲಿ ಕರಿಯ ಸಿನಿಮಾ ಹಾಕಿದ್ದೀರ. ದರ್ಶನ್-ಅಪ್ಪು ಫ್ಯಾನ್ಸ್ ಕ್ಲಾಶ್ ಆಗಲ್ವಾ ಎಂದು ಪುನೀತ್ ಫ್ಯಾನ್ಸ್ ಪ್ರಶ್ನೆ ಮಾಡಿರುವ ಕಾರಣಕ್ಕೆ.
ಅಂದ ಹಾಗೆ ಗಲಾಟೆಯೇನೂ ಆಗಿಲ್ಲ. ಪೊಲೀಸರೂ ಕೂಡಾ ಸ್ಥಳಕ್ಕೆ ಆಗಮಿಸಿ, ಮಾತುಕತೆ ಮೂಲಕವೇ ಇತ್ಯರ್ಥ ಮಾಡಿದ್ದಾರೆ. ಇನ್ನು ಪ್ರಸನ್ನ ಮತ್ತು ವೀರೇಶ್ ಥಿಯೇಟರ್ ಮಧ್ಯೆ ಅರ್ಧ ಕಿಲೋ ಮೀಟರ್ ಕೂಡಾ ಗ್ಯಾಪ್ ಇಲ್ಲ. ಸಾಮಾನ್ಯವಾಗಿ ಹೊಸ ಸಿನಿಮಾ ಆದರೂ ಒಂದೇ ಸಿನಿಮಾ ಹಾಕಲ್ಲ. ಹಾಗೇನಾದರೂ ಹಾಕಿದರೆ.. ತೀರಾ ತೀರಾ ಅಪರೂಪ. ಇನ್ನು ಪ್ರಸನ್ನ ಥಿಯೇಟರ್ ಪಕ್ಕದಲ್ಲೇ ಜಿಟಿ ಮಾಲ್ ಕೂಡಾ ಇದೆ. ಹೀಗಾಗಿ.. ಎಲ್ಲ ಕಡೆ ಅಪ್ಪು ಸಿನಿಮಾವನ್ನೇ ಕೊಡುವುದಕ್ಕೆ ಸಾಧ್ಯವಾಗಿಲ್ಲ. ವಿಷಯ ಇಷ್ಟೇ. ಯಾರೋ ಕೆಲವರು ಹೋಗಿ.. ವಿಡಿಯೋ ಮಾಡಿಕೊಂಡು.. ಥಿಯೇಟರ್ ಮಾಲೀಕನ್ನು ಪ್ರಶ್ನೆ ಮಾಡಿದ್ದಕ್ಕೆ ಇಷ್ಟೆಲ್ಲ ಆಗಿದೆ.
ಇನ್ನು ಇದೆಲ್ಲದರ ಮಧ್ಯೆ ದರ್ಶನ್ ಮತ್ತು ಪುನೀತ್ ಅವರ ಫ್ಯಾನ್ಸ್ ಕೂಡಾ ಬ್ಯಾಲೆನ್ಸ್ ಮಾಡುವ ಪ್ರಯತ್ನ ಮಾಡಿದ್ದಾರೆ. ಕರಿಯ ಚಿತ್ರ ನೋಡಿದ ಪ್ರೇಕ್ಷಕರೊಬ್ಬರು ನಾನು ದರ್ಶನ್ ಅಭಿಮಾನಿ. ನಿಜ. ಆದರೆ ನನಗೆ ದರ್ಶನ್ ಬೇರೆ ಅಲ್ಲ, ಪುನೀತ್ ಬೇರೆ ಅಲ್ಲ. ನಾನು ಎಲ್ಲ ನಟರನ್ನೂ ಪ್ರೀತಿಸ್ತೇನೆ ಎಂದಿದ್ದಾರೆ.
ಯೆಸ್, ಇದೇ ಬೇಕಿರೋದು. ಎಲ್ಲ ನಟರೂ ಕನ್ನಡದವರೇ. ಎಲ್ಲ ನಟಿಸೋದು ಕನ್ನಡ ಸಿನಿಮಾದಲ್ಲೇ. ಇಷ್ಟಕ್ಕೂ ಸ್ಟೇಜ್ ಸಿಕ್ಕರೆ ಸಾಕು ಬಾಯಿಗೆ ಬಂದಂತೆ ಬೈದುಕೊಳ್ಳೋ ರಾಜಕಾರಣಿಗಳೇ.. ಒಂದಾಗಿರ್ತಾರಂತೆ. ಸಿನಿಮಾ ಅಭಿಮಾನಿಗಳಿಗೆ ಆಗಲ್ವಾ..?



