ಪುನೀತ್ ರಾಜ್ ಕುಮಾರ್ ಅವರು ನಿಧನರಾಗುವುದಕ್ಕೂ ಮೊದಲು ಇಷ್ಟವಾಗುತ್ತಿದ್ದುದು ನಟನೆಗೆ, ನೃತ್ಯಕ್ಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸರಳತೆಗೆ. ಆದರೆ ಅಪ್ಪು ನಿಧನರಾಗುವವರೆಗೂ ಅವರು ಮಾಡುತ್ತಿದ್ದ ಸಮಾಜ ಸೇವೆಗಳು ನಿಗೂಢವಾಗಿಯೇ ಇದ್ದವು. ಅರೆ.. ಒಬ್ಬ ಮನುಷ್ಯ ಇಷ್ಟೆಲ್ಲ ಮಾಡೋಕೆ ಸಾಧ್ಯವಾ ಎಂದು ವಿರೋಧಿಗಳೂ ಅಚ್ಚರಿ ಪಡುವಂತೆ ದೊಡ್ಡ ಪಟ್ಟಿಯೇ ಸಿಕ್ಕಿತ್ತು. ವಿಶೇಷತೆ ಏನೆಂದರೆ ಅವರೆಲ್ಲ ತಾವಾಗಿಯೇ ನಮಗೆ ಅಪ್ಪು ಸಹಾಯ ಮಾಡಿದ್ದಾರೆ ಎಂದು ಹೇಳಿಕೊಳ್ಳೋವರೆಗೂ ಮಾಧ್ಯಮಗಳಿಗೂ ಈ ವಿಷಯ ಗೊತ್ತಿರಲಿಲ್ಲ. ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತೆ ಸಹಾಯ ಮಾಡಿದ್ದಷ್ಟೇ ಅಲ್ಲ, ದಾನ ಪಡೆದುಕೊಂಡ ಎಡಗೈಗೆ ಜಗತ್ತಿಗೆ ಹೇಳಬೇಡಿ ಎಂದು ಕಟ್ಟುಪಾಡು ಹಾಕಿದ್ದರು ಪುನೀತ್. ಆ ಎಲ್ಲವೂ ಹೊರಬಿದ್ದಿದ್ದು ಪುನೀತ್ ನಿಧನರಾದ ನಂತರವೇ. ಅದಕ್ಕೂ ಮುನ್ನ ಪುನೀತ್ ಅವರ ಮೇಲೂ ಅವರು ಹಂಗೆ.. ಹಿಂಗೆ ಎಂದು ಮಾತುಗಳು ಕೇಳಿ ಬರುತ್ತಿದ್ದವು. ಅದಕ್ಕೆಲ್ಲ ಉತ್ತರ ಕೊಡುವ ಗೋಜಿಗೂ ಹೋಗುತ್ತಿರಲಿಲ್ಲ ಪುನೀತ್. ಅವರು ಸಿನಿಮಾ, ಬಿಸಿನೆಸ್, ಸಮಾಜಸೇವೆ ಮತ್ತು ಕುಟುಂಬಗಳ ದೊಡ್ಡ ಕೋಟೆಯನ್ನೇ ಕಟ್ಟಿಕೊಂಡಿದ್ದರು.
ಅಂತಹ ಪುನೀತ್ ನಿಧನರಾಗಿ 3 ವರ್ಷ ಕಳೆದುಹೋಗಿದೆ. ಅಕ್ಟೊಬರ್ 29ರಂದು ಪುನೀತ್ ಅವರ ಸಮಾಧಿ ಎದುರು ಸಾವಿರಾರು ಅಭಿಮಾನಿಗಳು ಸೇರಿ, ಪೂಜೆ ಮಾಡಿದ್ದಾರೆ. ಕುಟುಂಬಸ್ಥರೆಲ್ಲರೂ ಪೂಜೆ ಸಲ್ಲಿಸಿದ್ದಾರೆ. ಅಶ್ವಿನಿ ಪುನೀತ್, ಮಗಳು ವಂದಿತಾ, ರಾಘವೇಂದ್ರ ರಾಜ್ ಕುಮಾರ್, ಯುವರಾಜ್ ಕುಮಾರ್, ವಿನಯ್ ಕುಟುಂಬದವರೆಲ್ಲ ಒಟ್ಟಾಗಿಯೇ ಬಂದು ಪೂಜೆ ಸಲ್ಲಿಸಿದರು. ಸಂಜೆಯ ವೇಳೆಗೆ ಶಿವಣ್ಣ ಮತ್ತು ಗೀತಾ ಅವರೂ ಬಂದು ಸಮಾಧಿ ಎದುರು ಪೂಜೆ ಸಲ್ಲಿಸಿದರು. ನಟ ಶ್ರೀಮುರಳಿ ಕೂಡಾ ಅಪ್ಪು ಸಮಾಧಿಗೆ ಗೌರವ ಸಲ್ಲಿಸಿದರು. ರಾಜ್ ಕುಟುಂಬದ ಜೊತೆ ಅಭಿಮಾನಿಗಳೂ ಕೂಡಾ ಬಂದಿದ್ದ ಸಾವಿರಾರು ಜನರಿಗೆ ಊಟ, ನೀರಿನ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.ಇನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಸ್ಮರಣೆ ತುಂಬಿತ್ತು. ಆದರೆ ಅಭಿಮಾನಿಗಳದ್ದು ಇನ್ನೂ ಒಂದು ಹೆಜ್ಜೆ ಮುಂದೆ.
ರಾಜ್ಯದ ಹೊರಗೆ ಕೂಡಾ ಪುನೀತ್ ಪುಣ್ಯ ಸ್ಮರಣೆ ನಡೆಯಿತು. ಹಲವು ಕಡೆ ರಕ್ತದಾನ ಶಿಬಿರಗಳು ನಡೆದವು. ಅನ್ನ ಸಂತರ್ಪಣೆಗಳೂ ಹೇರಳವಾಗಿ ನಡೆದವು. ಅದಕ್ಕಿಂತಲೂ ಪುನೀತ್ ಅಭಿಮಾನಿಗಳು ಪುನೀತ್ ಹಾಕಿಕೊಟ್ಟ ಹಾದಿಯಲ್ಲೇ ಸಾಗಿದ್ದು ವಿಶೇಷ.
ಹಾವೇರಿಯಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ಪುನೀತ್ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿದವು. ಬರೀ ಪೂಜೆ ಅಷ್ಟೇ ನಡೆದರೆ ಹೇಗೆ.. ಪುನೀತ್ ಅವರ ಪುಣ್ಯ ಸ್ಮರಣೆ ಸಾರ್ಥಕವಾಗಲಿ ಎಂದು ನೂರಾರು ಜನರಿಗೆ ಅನ್ನ ಸಂತರ್ಪಣೆಯೂ ನಡೆಯಿತು.
ಇನ್ನು ಶಿವಮೊಗ್ಗದ ಭದ್ರಾವತಿಯಲ್ಲಿ ವಿಧವೆಯೊಬ್ಬರಿಗೆ ಪ್ರಶಾಂತ್ ಹಾಗೂ ಸ್ನೇಹಿತರು ಸೇರಿ ತಾವೇ ಹಣ ಸಂಗ್ರಹಿಸಿ ಎರಡು ಹೆಣ್ಣು ಮೇಕೆಗಳನ್ನು ಅಪ್ಪು ನೆನಪಿಗಾಗಿ ನೀಡಿದರು. ರಂಗನಾಥಪುರದ ಅನು ಅವರ ಮನೆ ಮುಂದೆಯೇ ಅಪ್ಪು ಅವರ ಫೋಟೋ ಇಟ್ಟು ಪೂಜೆ ಸಲ್ಲಿಸಿ, ನಂತರ ಅನು ಅವರಿಗೆ ಮೇಕೆಯನ್ನು ಹಸ್ತಾಂತರಿಸಿ, ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದರು. ಸ್ವಂತ ಹಣದಲ್ಲಿ ಸ್ನೇಹಿತರೆಲ್ಲ ಒಟ್ಟುಗೂಡಿ 20 ಸಾವಿರ ಕಲೆ ಹಾಕಿ, ಎರಡು ಮೇಕೆ ಕೊಟ್ಟು, ಒಬ್ಬ ಅಸಹಾಯಕ ಮಹಿಳೆಯ ಬದುಕಿಗೆ ನೆರವಾಗುವುದು ಸಣ್ಣ ಮಾತಲ್ಲ.
ಇನ್ನು ಹುಬ್ಬಳ್ಳಿಯಲ್ಲಿ ಪುನೀತ್ ನೆನಪಿನಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ರಘು ವದ್ದಿ ನೇತೃತ್ವದಲ್ಲಿ ಅಪ್ಪು ಭಾವಚಿತ್ರದ ಎದುರು ಮಟನ್ ಕೀಮಾ, ಮಟನ್ ಮಸಾಲಾ, ಚಿಕನ್ ಬಿರಿಯಾನಿ ಇಟ್ಟು ಪೂಜೆ ಮಾಡಿದ್ದಷ್ಟೇ ಅಲ್ಲ, ಬಿರಿಯಾನಿ ಸಂತರ್ಪಣೆಯನ್ನೂ ಮಾಡಿದರು.
ಮೈಸೂರಿನಲ್ಲಿ ಪುನೀತ್ ಪುಣ್ಯ ಸ್ಮರಣೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯ್ತು. ಮಲೆ ಮಹದೇಶ್ವರ ಸೇವಾ ಸಂಸ್ಥೆ ವತಿಯಿಂದ ವಿಜಯನಗರದಲ್ಲಿ ಸಾಧಕರಿಗೆ ಡಾ. ಪುನೀತ್ ರಾಜರತ್ನ ಪ್ರಶಸ್ತಿ ಪ್ರದಾನ ಮಾಡಲಾಯ್ತು. ವೈದ್ಯಕೀಯ ಕ್ಷೇತ್ರದ ಡಾ. ರೇಖಾ ಮನಃಶಾಂತಿ, ನಿರೂಪಣೆ- ಮಂಜು ಸಿ. ಶಂಕರ್, ಸಹಕಾರ- ರಿಷಿ ವಿಶ್ವಕರ್ಮ, ಸಂಘಟನೆ- ರೂಪಾ ಎಚ್. ಗೌಡ, ಕ್ರೀಡೆ- ಅಲೋಕ್ ಆರ್. ಜೈನ್, ಚಿತ್ರರಂಗ- ಬಿ. ಸ್ಮಿತಾ, ಸಂಘಟನೆ- ಕಾಡನಹಳ್ಳಿ ಡಿ. ಸ್ವಾಮಿಗೌಡ ಪುರಸ್ಕಾರ ಸ್ವೀಕರಿಸಿದರು.



