ಅನ್ಯಾಯಕಾರಿ ಬ್ರಹ್ಮ..
ಈ ಸುಂದರನ ಸನ್ಯಾಸಿ ಮಾಡಬಹುದೇ..
ಮಳವಳ್ಳಿ ಎಂ.ಮಹದೇವ ಸ್ವಾಮಿ ಗಾಯಕರು 28 ವರ್ಷಗಳ ಹಿಂದೆ ಮಹದೇಶ್ವರ ಆಡಿಯೋ ಕಂಪೆನಿಯ ಮೂಲಕ ಬಿಡುಗಡೆ ಮಾಡಿದ್ದ ಈ ಜನಪದ ಗೀತೆಯ ಆಲ್ಬಂ, ಆಗ ಇದೇ ಹಾಡು ಅಟ್ಟರ್ ಫ್ಲಾಪ್ ಆಗಿತ್ತು. ಹಿಟ್ ಆಗಿರಲಿಲ್ಲ.ಅಷ್ಟೆಲ್ಲ ಏಕೆ, ಈ ಜನಪದ ಹಾಡಿನಲ್ಲಿ ಸೂಳೇರು ಎಂಬ ಪದ ಹಲವಾರು ಬಾರಿ ರಿಪೀಟ್ ಆಗುತ್ತದೆ. ಈ ಪದದ ಬಗ್ಗೆ ಅಪಾರ್ಥ ತಿಳಿದಿದ್ದ ಜನ, ಹಾಡುತ್ತಿರುವಾಗಲೇ ವೇದಿಕೆಯಲ್ಲಿ ಹೊಡೆಯಲು ಹೋಗಿದ್ದ ಪ್ರಕರಣಗಳೂ ಜರುಗಿದ್ದವು. ಈಗ ಅದೇ ಹಾಡು.. ಸೂಪರ್ ಹಿಟ್.
ಈ ಹಾಡು ನೀಲಗಾರರ ಪದ. ಬರೆದವರ್ಯಾರೋ ಗೊತ್ತಿಲ್ಲ. ಜನಪದ ಗೀತೆ. ಈ ಹಾಡನ್ನು ಝೇಂಕಾರ್ ಮ್ಯೂಸಿಕ್ಕಿನವರ ಅರ್ಜುನನ ಜೋಗಿ ಹಾಡು ಆಲ್ಬಮ್ಮಿನಲ್ಲಿದೆ. ಕ್ಯಾಸೆಟ್ ಹಾಡು ಫ್ಲಾಪ್ ಆದ ಕಾರಣಕ್ಕೆ ಈ ಹಾಡನ್ನು ಝೇಂಕಾರ್`ನವರಿಗೆ ಮಾರಾಟ ಮಾಡಿದ್ದರು. ಈ ಹಾಡು ಇದೀಗ ಹಿಟ್ ಆಗಿದ್ದು, ಈ ಸಾಹಿತ್ಯ ಹಿಟ್ ಆಗುವುದರೊಂದಿಗೆ ವೀಕ್ಷಣೆಯ ಸಂಖ್ಯೆ 2 ಮಿಲಿಯನ್ ದಾಟಿದೆ. ಅರ್ಜುನನ ಜೋಗಿ ಹಾಡು ಭಾಗ-3ರಲ್ಲಿ ಈ ಹಾಡು ಇದೆ. ಯಾವುದೇ ಸೋಷಿಯಲ್ ಮೀಡಿಯಾ ತೆಗೆದರೂ ಈ ಹಾಡಿನದ್ದೇ ಸುದ್ದಿ. ವಿಡಿಯೋ. ರೀಲ್ಸ್.. ಎಲ್ಲ.
ಹಾಡಿನ ಹಿಂದಿನ ಕಥೆ :
ಅರ್ಜುನ ತನ್ನ ಪತ್ನಿ ದ್ರೌಪದಿ ಜೊತೆಗೆ ಪಗಡೆಯಾಟದಲ್ಲಿ ಸೋತ ನಂತರ ಜೋಗಿ ಸನ್ಯಾಸಿಯಾಗುವ ಪ್ರಸಂಗವನ್ನು ಮುಂದಿಟ್ಟುಕೊಂಡು ರಚನೆಯಾದ ಹಾಡು ಇದಾಗಿದೆ. ಆಟದ ಸಂದರ್ಭದಲ್ಲಿ ನಾನು ಸೋತರೆ ನಿಮ್ಮ ಉಳಿದ ಪತ್ನಿಯರ ಸೇವೆ ಮಾಡುತ್ತೇನೆಂದು ದ್ರೌಪದಿ ಹೇಳಿದರೆ, ತಾನು ಸೋತರೆ ಜೋಗಿ ಸನ್ಯಾಸಿಯಾಗುವುದಾಗಿ ಅರ್ಜುನ ಪಂಥ ಕಟ್ಟುತ್ತಾನೆ. ಅರ್ಜುನ ಪಂದ್ಯದಲ್ಲಿ ಇನ್ನೇನು ಗೆದ್ದೇ ಬಿಡುತ್ತಾನೆ ಎನ್ನುವಾಗ ದ್ರೌಪದಿ ತನ್ನ ಅಣ್ಣ ಕೃಷ್ಣನ ಮೊರೆ ಹೋಗುತ್ತಾಳೆ. ಆಗ ಶ್ರೀಕೃಷ್ಣ ಆಟದ ಮಧ್ಯಸ್ಥಿಕೆಗೆ ಬರುತ್ತಾನೆ. ಜತೆಗೆ, ತನ್ನ ಮಾಯಾವಿ ಶಕ್ತಿಯಿಂದ ಚಿತ್ರೆ, ಕಸುಮಾಲೆಯರ ರೂಪ ತೋರಿಸುತ್ತಾನೆ. ಸ್ತ್ರೀಯರ ರೂಪಕ್ಕೆ ಮನಸೋತ ಅರ್ಜುನ ಆಟದಲ್ಲಿ ಸೋಲುತ್ತಾನೆ. ಕೊಟ್ಟ ಮಾತಿನಂತೆ ಜೋಗಿ ಸನ್ಯಾಸಿಯಾಗಬೇಕಾಗುತ್ತದೆ. ಸ್ಫುರದ್ರೂಪಿಯಾದ ಅರ್ಜುನ ವೇಶ್ಯೆ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಮಹಿಳೆಯರು ಅರ್ಜುನನ ಕುರಿತು ‘ಅನ್ಯಾಯಕಾರಿ ಬ್ರಹ್ಮ ಆ ಸುಂದರನ ಸನ್ಯಾಸಿ ಮಾಡಬಹುದೇ’ ಎಂದು ಹಾಡುತ್ತಾರೆ.
ಗಾಯಕರಾಗಿರುವ ಡಾ.ಎಂ.ಮಹದೇವಸ್ವಾಮಿ ಅವರು ಮಹದೇಶ್ವರ ದಯ ಬಾರದೇ, ತಾಳಿ ತಾಳಿ ಚಿನ್ನದ ತಾಳಿ, ಸಿದ್ದಯ್ಯ ಸ್ವಾಮಿ ಬನ್ನಿ ಸೇರಿ ಮಂಟೆಸ್ವಾಮಿ, ಸಿದ್ದಪ್ಪಾಜಿ, ಮಹದೇಶ್ವರ, ನಂಜುಂಡೇಶ್ವರ, ಚಾಮುಂಡೇಶ್ವರಿ, ಕಾಲ ಭೈರವ ಸೇರಿ ಹಲವು ದೇವತೆಗಳ ಸಾವಿರಾರು ಜಾನಪದ ಗೀತೆ ಹಾಡಿದ್ದಾರೆ. ಜೊತೆಗೆ ಹಲವು ಕಥೆಗಳನ್ನು ಧ್ವನಿ ಮುದ್ರಣ ಮಾಡಿಸುವ ಜೊತೆಗೆ ಚಿತ್ರೀಕರಣವನ್ನೂ ಮಾಡಿದ್ದಾರೆ. ಇವರ ಸಾಧನೆಗೆ ರಾಜ್ಯದ ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಮೈಸೂರು ವಿವಿಯಿಂದ ಡಾಕ್ಟರೆಟ್ ಸೇರಿ ಹಲವು ಪ್ರಶಸ್ತಿ, ಗೌರವಗಳು ಸಂದಿವೆ.



