ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಜನಾಕ್ರೋಶ ಯಾತ್ರೆ ಮಾಡ್ತಿದ್ದಾರೆ. ಸುಮಾರು ಎರಡು ವರ್ಷ ತಣ್ಣಗೆ ಇದ್ದ ಬಿಜೆಪಿ ಕಾರ್ಯಕರ್ತರು ಮೈಕೊಡವಿಕೊಂಡು ಎದ್ದಿದ್ದಾರೆ. ಯತ್ನಾಳ್ & ಟೀಂನ ಸೋಷಿಯಲ್ ಮೀಡಿಯಾ, ಮೀಡಿಯಾ ಮೈಕುಗಳ ಮುಂದೆ ಹೇಳಿಕೆ ಕೊಡುವುದಕ್ಕೆ ಸೀಮಿತಗೊಂಡಿದ್ದ ಬಿಜೆಪಿ, ಈಗ ಆಕ್ಟಿವ್ ಆಗುತ್ತಿರುವಂತೆ ತೋರುತ್ತಿದೆ. ಇದರ ಬಗ್ಗೆಯೂ ಬಿಜೆಪಿಯಲ್ಲಿರುವ ಒಂದು ಬಣ ಕಂಪ್ಲೇಂಟು ಕೊಟ್ಟಿದೆ.
ವಿಜಯೇಂದ್ರ ವಿರೋಧಿ ಬಣದ ದೂರೇನು..?
ಇಡೀ ಜನಾಕ್ರೋಶ ಯಾತ್ರೆಯ ಕೇಂದ್ರಬಿಂದುವಾಗಿ ವಿಜಯೇಂದ್ರ ಕಾಣಿಸುತ್ತಿದ್ದರೆ, ತಾವು ಸ್ಟ್ಯಾಂಪ್ ಸೈಜಿನ ಫೋಟೋಗೆ ಸೀಮಿತರಾಗಿದ್ದೇವೆ. ರಾಜ್ಯ ಸರಕಾರದ ವಿರುದ್ಧ ಆರಂಭವಾಗಿರುವ ಜನಾಕ್ರೋಶ ಯಾತ್ರೆಯನ್ನು, ವಿಜಯೇಂದ್ರ ತಮ್ಮ ಗುರಿ ಸಾಧನೆಗೆ ಏಣಿ ಮಾಡಿಕೊಳ್ಳುತ್ತಿದ್ದಾರೆ. ಇಷ್ಟು ದೊಡ್ಡ ಹೋರಾಟ ಆರಂಭಿಸುವಾಗ ಮಿತ್ರಪಕ್ಷ ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಜೆಡಿಎಸ್ ಸಿಟ್ಟಾದರೆ, ಮೈತ್ರಿಯಿಂದ ಹಿಂದೆ ಸರಿದರೆ, ಕಾಂಗ್ರೆಸ್ ವಿರುದ್ಧ ಒಕ್ಕಲಿಗ-ಲಿಂಗಾಯತ ಶಕ್ತಿಗಳು ಒಗ್ಗೂಡುವುದಿಲ್ಲ. ಇದರ ಲಾಭ ಕಾಂಗ್ರೆಸ್ʻಗೆ ಆಗಲಿದೆ. ಈ ಬಗ್ಗೆ ವಿಜಯೇಂದ್ರಗೆ ಒಂದು ಎಚ್ಚರಿಕೆ ಕೊಡಿ ಎನ್ನುವುದು ವಿಜಯೇಂದ್ರ ವಿರೋಧಿ ಬಣದ ದೂರು.
ಮೊದಲು ಈ ದೂರನ್ನು ರಾಧಾ ಮೋಹನದಾಸ್ ಅಗರ್ವಾಲ್ ಅವರಿಗೆ ತಲುಪಿಸಿದ ʻರೆಬಲ್ ಟೀಂʼ ಜನಾಕ್ರೋಶ ಯಾತ್ರೆಯಿಂದ ದೂರ ಉಳಿದುಕೊಂಡಿದೆ. ಅತ್ತ ವಿಜಯೇಂದ್ರ ಜನಾಕ್ರೋಶ ಯಾತ್ರೆ ಅವರ ನಿರೀಕ್ಷೆಯನ್ನೂ ಮೀರಿ ಯಶಸ್ವಿಯಾಗಿದೆ. ಈ ಮಧ್ಯೆ ಅಮಿತ್ ಶಾ ಅವರಿಗೂ ದೂರು ಸಲ್ಲಿಸುವ ಪ್ಲಾನ್ ಮಾಡಿದೆ. ಆದರೆ ಅವರೂ ಷ್ಯೂರ್..ಷ್ಯೂರ್.. ಹೇಳೋಣ.. ಎಂದು ಹೇಳಿ ಎದ್ದು ಹೋಗಿದ್ದಾರೆ. ಅಲ್ಲಿಗೆ ʻರೆಬಲ್ ಟೀಂʼ ಸೈಲೆಂಟ್ ಆಗಿದೆ.
ಅಮಿತ್ ಶಾ ನಿರ್ಲಕ್ಷ್ಯಕ್ಕೂ ಕಾರಣ ಇದೆ..!
ಅಮಿತ್ ಶಾ ಅವರು ವಿಜಯೇಂದ್ರ ಪರ ನಿಲ್ಲುತ್ತಿರುವುದಕ್ಕೂ ಒಂದು ಕಾರಣ ಇದೆ. ಬಿಜೆಪಿಯಲ್ಲಿರುವ ಕೆಲವು ನಾಯಕರು ಬಿಜೆಪಿಯಲ್ಲೇ ಇದ್ದರೂ, ಜೆಡಿಎಸ್ ಶಾಲು ಹಾಕಿಕೊಂಡೇ ಕೆಲಸ ಮಾಡ್ತಿದ್ದಾರೆ. ಕೆಲ ನಾಯಕರಲ್ಲಿರುವ ಜೆಡಿಎಸ್ ಬಗೆಗಿನ ಪ್ರೀತಿಗೆ ಕಾರಣ, ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅಧಿಕಾರ ಹಿಡಿದರೆ ಸಿಎಂ ಆಗುವ ಕನಸಷ್ಟೇ. ಅಂದರೆ ದೇವೇಗೌಡ, ಕುಮಾರಸ್ವಾಮಿ ಜೊತೆ ಚೆನ್ನಾಗಿದ್ದರೆ ನಾವೂ ಸಿಎಂ ಆಗಬಹುದು ಎಂಬ ನಿರೀಕ್ಷೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಹುದ್ದೆಯಲ್ಲಿದ್ದುಕೊಂಡು, ನಂತರ ಫುಲ್ ಮೆಜಾರಿಟಿಯಲ್ಲಿ ಗೆದ್ದರೆ ಸಿಎಂ ಆಗುತ್ತಾರೆ. ಹಾಗಾಗಬಾರದು ಎಂಬ ಲೆಕ್ಕಾಚಾರವೂ ಗೊತ್ತಾಗಿದೆ. ಇಂತಹ ಪ್ಲಾನ್ ಇಟ್ಟುಕೊಂಡಿರುವ ನಾಯಕರ ಬಗ್ಗೆ ತಿಳಿದುಕೊಂಡಿರುವ ಅಮಿತ್ ಶಾ, ವಿಜಯೇಂದ್ರಗೆ ಫುಲ್ ಸಪೋರ್ಟ್ ಕೊಡ್ತಿದ್ದಾರೆ.
ಹೀಗಾಗಿ ಇವತ್ತು ಜೆಡಿಎಸ್ ಪಕ್ಷವನ್ನು ದೂರವಿಟ್ಟು ವಿಜಯೇಂದ್ರ ಆರಂಭಿಸಿರುವ ಜನಾಕ್ರೋಶ ಯಾತ್ರೆಯ ವಿರುದ್ಧ ಯಾರೆಷ್ಟೇ ದೂರು ಕೊಟ್ಟರೂ ಅಮಿತ್ ಶಾ ಅದನ್ನು ಪಕ್ಕಕ್ಕಿಡುತ್ತಿದ್ದಾರೆ. ಆದರೆ ವಿಜಯೇಂದ್ರ ಅವರಿಗೆ ಜೆಡಿಎಸ್ʻನ್ನು ಕೆರಳಿಸುವ ಹೇಳಿಕೆಗಳು ಬರಬಾರದು ಎಂದು ಕೂಡಾ ಬುದ್ದಿಮಾತು ಹೇಳಿದ್ದಾರೆ.



