ಅಭಿಮಾನಿಗಳೇ.. ದಯವಿಟ್ಟು ನಮ್ಮ ಬೆನ್ನು ಹತ್ತಬೇಡಿ. ನಮಗಿಂತ ನಿಮ್ಮ ಹೆತ್ತವರು ಮುಖ್ಯ ಎಂದು ಸ್ಟಾರ್ ನಟ ನಟಿಯರು ಅದೆಷ್ಟೇ ಬೇಡಿಕೊಂಡರೂ.. ಅಭಿಮಾನಿಗಳಿಗೆ ಅವರ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳೋ ಅವಸರ. ಅದರಲ್ಲೂ ಯಶ್ ಫ್ಯಾನ್ಸ್ ಒಂದು ಕೈ ಮೇಲೆ. ಕಾರಣ ಇಷ್ಟೆ, ಯಶ್ ಅಷ್ಟು ಸುಲಭವಾಗಿ ಜನರ ಕೈಗೆ ಸಿಕ್ಕಲ್ಲ. ಹೊರಗೆ ಕಾಣಿಸಿಕೊಳ್ಳೋದು ಅಷ್ಟೆ.. ಅಪರೂಪ. ಹೀಗಾಗಿಯೇ.. ಯಶ್ ಮೇಲೆ ಕ್ರೇಜ್ ಜಾಸ್ತಿ.
ಆ ಕ್ರೇಜ್ ಮತ್ತೊಮ್ಮೆ ಯಶ್ ಅಭಿಮಾನಿಯನ್ನು ರಕ್ತದ ಮಡುವಿಗೆ ದೂಡಿದೆ. ಯಶ್ ಅವರನ್ನ ಸುಮ್ಮನೆ ನೋಡಿದರೆ ಹೇಗೆ.. ಅವರನ್ನು ಬೆನ್ನು ಹತ್ತಬೇಕು.. ವಿಡಿಯೋ ಮಾಡಿಕೊಳ್ಳಬೇಕು.. ಚೇಸ್ ಮಾಡ್ಬೇಕು.. ಜೊತೆಗೊಂದು ಫೋಟೋ ತಗೋಬೇಕು.. ಹೇಗೆಲ್ಲ ಸರ್ಕಸ್ ಮಾಡಿ ತಗೊಂಡೆ ಗೊತ್ತಾ ಅಂತಾ ಗೆಳೆಯರೆದುರು ಹೇಳಿಕೊಂಡು ಹೆಮ್ಮೆಯಿಂದ ಎದೆಯುಬ್ಬಿಸಬೇಕು. ಇಂತಹ ಆತುರ ಅವಸರ ಎಷ್ಟೋ ಅಭಿಮಾನಿಗಳ ಜೀವಕ್ಕೇ ಕುತ್ತು ತಂದಿಟ್ಟೂ ಆಗಿದೆ. ಯಶ್ ಬರ್ತಡೇ ವೇಳೆ ಗದಗ್ ಜಿಲ್ಲೆಯ ಸೂರಣಗಿ ಅಭಿಮಾನಿಗಳ ದುರಂತ ಸಾವು ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಘಟನೆ ನಡೆದಿರೋದು ಬಳ್ಳಾರಿಯಲ್ಲಿ.
ಬಳ್ಳಾರಿಯ ಬಾಲಾಜಿ ನಗರದ ಕ್ಯಾಂಪ್‌ನಲ್ಲಿ ನೂತನವಗಿ ನಿರ್ಮಾಣವಾಗಿರುವ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನ ಉದ್ಘಾಟನೆಗೆ ಯಶ್ ಬಂದಿದ್ದರು. ಈ ವೇಳೆ ಯಶ್ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಸೇರಿದ್ದರು. ಅವರಲ್ಲಿ ಸಿರಗುಪ್ಪದಿಂದ ಬಂದಿದ್ದ ವಸಂತ ಎಂಬ ಯುವಕಯಶ್ ಕಾರನ್ನ ಹಿಂಬಾಲಿಸಿಕೊಂಡು ಓಡಿ ಬಂದಿದ್ದಾರೆ. ಆದರೆ ನೂಕುನುಗ್ಗಲಿನಲ್ಲಿ ಯಶ್ ಅವರ ಬೆಂಗಾವಲಿನ ವಾಹನದ ಮೇಲೆ ಬಿದ್ದಿದ್ದಾರೆ. ಆಯತಪ್ಪಿದ್ಧಾರೆ. ಅದೃಷ್ಟವಶಾತ್ ಕಾರು ಕಾಲಿನ ಮೇಲೆ ಹರಿದರೂ ಪ್ರಾಣಾಪಾಯವೇನೂ ಆಗಿಲ್ಲ. ಬಳ್ಳಾರಿ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕತ್ಸೆ ನೀಡಲಾಗುತ್ತಿದೆ.
ಅಂದಹಾಗೆ ಈ ದೇವಸ್ಥಾನ ಉದ್ಘಾಟನೆಗೆ ಯಶ್ ಅವರಷ್ಟೇ ಅಲ್ಲ, ರಾಜಮೌಳಿಯೂ ಬಂದಿದ್ದರು. ಹೀಗಾಗಿ ಅಭಿಮಾನಿಗಳ ದೊಡ್ಡ ಸೈನ್ಯವೇ ಇತ್ತು. ಕೇವಲ ಗೆಳೆಯ ಕಟ್ಟಿದ ದೇವಸ್ಥಾನ ಎಂಬ ಕಾರಣಕ್ಕಷ್ಟೇ ಅಲ್ಲ, ತಮ್ಮ ಕೆಜಿಎಫ್ ಚಿತ್ರದ ಯಶಸ್ಸಿಗೆ ಸಾಯಿ ಕೂಡಾ ಕಾರಣ ಎನ್ನುವುದು ಯಶ್ ಮಾತು.
ಅದನ್ನೇ ವೇದಿಕೆಯಲ್ಲಿ ಹೇಳಿಕೊಂಡ ಯಶ್, ಈ ದೇವಸ್ಥಾನ ನಿರ್ಮಾಣ ಹಂತದಲ್ಲಿದ್ದಾಗ ಒಮ್ಮೆ ಬಂದಿದ್ದೆ. ಆಗಲೇ ಈ ದೇವಸ್ಥಾನ ಉದ್ಘಾಟನೆಗೆ ಬಂದೇ ಬರುತ್ತೇನೆ ಎಂದು ಹೇಳಿದ್ದೆ ಎಂದು ನೆನಪಿಸಿಕೊಂಡ ಯಶ್ ದೇವರ ದರ್ಶನಕ್ಕೆ ಬಂದಿದ್ದೇನೆ. ಸಾಯಿ ಅವರು ನಮ್ಮ ಆತ್ಮೀಯರು. ‘ಕೆಜಿಎಫ್ 1’ ಸಿನಿಮಾವನ್ನು ತೆಲುಗಿನಲ್ಲಿ ಅವರು ವಿತರಣೆ ಮಾಡಿದ್ದರು. ಆ ಸಿನಿಮಾದ ಗೆಲುವಿಗೆ ಅವರು ಕೂಡ ಕಾರಣ ಆಗಿದ್ದರು. ಅವರು ತುಂಬ ದೈವ ಭಕ್ತರು ಕೂಡ ಹೌದು. ಅವರು ಊರಿನಲ್ಲಿ ದೇವಸ್ಥಾನದ ಕಟ್ಟುವಾಗ ನನಗೆ ಮೊದಲೇ ಹೇಳಿದ್ದರು. ಅದಕ್ಕಾಗಿ ಇವತ್ತು ಬಂದಿದ್ದೇನೆ. ದೇವರ ದರ್ಶನ ಮಾಡಿದೆ. ಪೂಜೆಯಲ್ಲಿ ಭಾಗಿದ್ದು ಬಹಳ ಖುಷಿ ಆಯಿತು’ ಎಂದು ಹೇಳಿದ್ದಾರೆ.



