ವಿಜಯೇಂದ್ರ ವರ್ಸಸ್ ಯತ್ನಾಳ್ ಬಣದ ಸಮರ ದಿನೇ ದಿನೇ ಬಿಗಡಾಯಿಸುತ್ತಲೇ ಇದೆ. ಹೈಕಮಾಂಡ್ ಕೂಡಾ ಮೌನವಾಗಿರೋದ್ರಿಂದ ಅಥವಾ ಒಳಗೊಳಗೇ ಕುಮ್ಮಕ್ಕು ಕೊಡ್ತಿರೋದ್ರಿಂದ ಜಗಳಗಳಿಗೆ ಫುಲ್ ಸ್ಟಾಪ್ ಬೀಳ್ತಾ ಇಲ್ಲ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇನ್ನು 8-10 ದಿನಗಳಲ್ಲಿ ರಾಜ್ಯದ ಅಧ್ಯಕ್ಷರು ಯಾರು ಎಂಬ ಬಗ್ಗೆ ಉತ್ತರ ದೊರೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಪುನರಾಯ್ಕೆಯಾಗುವ ಸಂಪೂರ್ಣ ವಿಶ್ವಾಸ ನನಗಿದೆ. ಜೊತೆಗೆ, ಇನ್ನೊಂದು ವಾರದಲ್ಲಿ ಬಿಜೆಪಿಯಲ್ಲಿನ ಎಲ್ಲ ಆಂತರಿಕ ಗೊಂದಲವೂ ಸರಿಯಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ವಿಜಯೇಂದ್ರ ಅವರ ಪ್ರಕಾರ ʻʻಈ ಬಾರಿ ಜಿಲ್ಲಾಧ್ಯಕ್ಷ ಸ್ಥಾನಗಳಿಗೂ ಪೈಪೋಟಿ ಇತ್ತು. ಅದೇ ರೀತಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ ಸಹಜವಾಗಿಯೇ ಇದೆ. ಕೇಂದ್ರದ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ನಾನೇ ಪುನರಾಯ್ಕೆಯಾಗುವ ನಿರೀಕ್ಷೆ ಇದೆ. ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳೋದಿಲ್ಲ. ಈಗಾಗಲೇ ಈ ಗೊಂದಲಗಳಿಂದ ಪಕ್ಷಕ್ಕೆ ಏನೇನು ಡ್ಯಾಮೇಜ್ ಆಗಬೇಕೋ ಅದೆಲ್ಲವೂ ಆಗಿದೆ. ಆದರೆ, ಯಾವುದೇ ಸಂದರ್ಭದಲ್ಲಿಯೂ ನಾನು ಯಾರ ವಿರುದ್ಧವೂ ಹೇಳಿಕೆ ನೀಡಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಿ ನನಗೆ ಇರುವ ಜವಾಬ್ದಾರಿಯ ಅರಿವು ನನಗಿದೆ. ಹೀಗೆ ಹೇಳುತ್ತಲೇ ಇನ್ನೊಂದು ವಾರದಲ್ಲಿ ಎಲ್ಲವೂ ಸರಿಯಾಗಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ಧಾರೆ ವಿಜಯೇಂದ್ರ.
ಹಾಗಾದರೆ ಯತ್ನಾಳ್ ಬಣ ಸೈಲೆಂಟ್ ಆಗಿದ್ಯಾ ಎಂದು ನೋಡಿದರೆ ಹಾಗೇನೂ ಇಲ್ಲ. ವಿಜಯೇಂದ್ರ ವಿರುದ್ಧದ ಬಣದಲ್ಲಿ ಸಂಘಟನಾ ಚತುರ ಎಂದು ಕರೆಸಿಕೊಳ್ಳುವ ಅರವಿಂದ ಲಿಂಬಾವಳಿ ಗುರುತಿಸಿಕೊಂಡಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ.
ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.
ಶಾಸಕರ ಮಾತಿಗೂ ಬೆಲೆ ಇಲ್ಲ. ಯಾವುದೇ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿಲ್ಲ.
ಕಾಂಗ್ರೆಸ್ ನಾಯಕರ ಜತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ.
ಪಕ್ಷ ಸಂಘಟನೆ ಆಗುತ್ತಿಲ್ಲ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ನೇಮಕದಲ್ಲೂ ಭಾರಿ ಲೋಪ ಆಗಿದೆ.
ಪಕ್ಷದ ನೇಮಕದ ಸಂದರ್ಭದಲ್ಲಿ ವಿಜಯೇಂದ್ರ ಆಪ್ತರಿಗೆ ಮಣೆ ಹಾಕಲಾಗಿದೆ.
ಹೀಗೆ ದೂರುಗಳ ಪಟ್ಟಿಯನ್ನೇ ನಡ್ಡಾ ಅವರ ಮುಂದಿಟ್ಟಿದ್ದಾರೆ. ಲಿಂಬಾವಳಿ ಹೇಳಿದ್ದನ್ನು ತಾಳ್ಮೆಯಿಂದ ಕೇಳಿಸಿಕೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಎಲ್ಲವನ್ನು ಹೈಕಮಾಂಡ್ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಎಲ್ಲಾ ಗೊಂದಲಗಳಿಗೂ ಫುಲ್ ಸ್ಟಾಪ್ ಹಾಕಲಿದ್ದಾರೆ ಎಂದಿದ್ದಾರೆ.
ಈಗ ನಡ್ಡಾ ಅವರಿಂದ ಬಂದ ಫುಲ್ ಸ್ಟಾಪ್ ಸಿಗ್ನಲ್ ಮತ್ತು ವಿಜಯೇಂದ್ರ ಅವರು ಹೇಳಿದ ʻಇನ್ನೊಂದು ವಾರದಲ್ಲಿ ಫುಲ್ ಸ್ಟಾಪ್ʼ ಎಂಬ ಹೇಳಿಕೆಗಳೆರಡನ್ನೂ ಗಮನಿಸುತ್ತಿರುವ ಬಿಜೆಪಿ ಕಾರ್ಯಕರ್ತರು ಎಲ್ಲವೂ ಸರಿ ಹೋಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಏಕೆಂದರೆ ಬಿಜೆಪಿ ನಿಷ್ಠ ಕಾರ್ಯಕರ್ತರದ್ದು ಒಂದೇ ಬೇಡಿಕೆ. ʻನಾಯಕರೇ ಹೊಡೆದಾಡಬೇಡಿ. ಹೋರಾಡಿʼ ಎನ್ನುವುದಷ್ಟೇ. ಆದರೆ ಆ ಹೋರಾಟ ಎದುರಾಳಿ ಪಕ್ಷದವರ ವಿರುದ್ಧವಾಗಿ ನಡೆಯದೆ, ತಮ್ಮ ತಮ್ಮದೇ ಪಕ್ಷದ ನಾಯಕರ ವಿರುದ್ಧ ನಡೆಯುತ್ತಿರುವುದರಿಂದ ಅತೀ ಹೆಚ್ಚು ಗೊಂದಲದಲ್ಲಿದ್ದಾರೆ.



